ಸುದ್ದಿ ಸಂಕ್ಷೇಪ
16ಕ್ಕೆ ಗುಡಿಬಂಡೆ ತಾ. ಕೆಡಿಪಿ ಸಭೆ
ಗುಡಿಬಂಡೆ: ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಬೆಳಗ್ಗೆ 10.30 ಕ್ಕೆ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಇಂದ್ರೇಶ್ ತಿಳಿಸಿದ್ದಾರೆ.
ಅಧ್ಯಕ್ಷರಾಗಿ ನಾಗಣ್ಣ ಅವಿರೋಧ ಆಯ್ಕೆ
ಮಾಲೂರು: ತಾಲೂಕಿನ ಹುರಳಗೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ನಾಗಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಾಗಣ್ಣ ಹಾಗೂ ಉಪಾಧ್ಯಕ್ಷರಾಗಿ ಹೆಚ್.ಎಂ. ನಾರಾಯಣಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಾಶ್ ಬಾಬು ತಿಳಿಸಿದ್ದಾರೆ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಹುರಳಗೆರೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಜೂಜು ಅಡ್ಡೆ: 13 ಮಂದಿ ಅಂದರ್
ಚಿಂತಾಮಣಿ: ಅಂದರ್ ಬಾಹರ್ ಆಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ 13 ಮಂದಿ ಬಂಧಿಸಿ ಅವರಿಂದ ಸಾವಿರಾರು ರು. ನಗದು ಹಣ ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಇರಗಂಪಲ್ಲಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ತಾಲೂಕಿನ ಇರಗಂಪಲ್ಲಿ ಗ್ರಾಮದ ಹೊರ ವಲಯದ ಬಂಡೆ ಮೇಲೆ ಅಂದರ್ ಬಾಹರ್ ಆಡುತ್ತಿದ್ದ ಗುಂಪಿನ ಮೇಲೆ ಸಬ್ಇನ್ಸೆಪ್ಪೆಕ್ಟರ್ ಪ್ರವೀಣ್ಕುಮಾರ್ ಹಾಗೂ ಸಿಬ್ಬಂದಿ ಏಕಾಏಕಿ ದಾಳಿ ನಡೆಸಿ 13 ಜನ ಆರೋಪಿಗಳನ್ನು ಬಂಧಿಸಿ ಅವರಿಂದ 1500 ರು. ನಗದು ಹಣ ಮತ್ತು 5 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಟ್ಲಹಳ್ಳಿ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜೆಡಿಎಸ್ ಅಧ್ಯಕ್ಷರಿಗೆ ಅಭಿನಂದನೆ
ಚಿಂತಾಮಣಿ: ರಾಜ್ಯ ಜೆಡಿಎಸ್ ನೂತನ ಅಧ್ಯಕ್ಷರನ್ನಾಗಿ ಎ.ಕೃಷ್ಣಪ್ಪ ಅವರನ್ನು ಆಯ್ಕೆ ಮಾಡಿದ್ದಕ್ಕೆ ನಗರಸಭಾ ಮಾಜಿ ಸದಸ್ಯ ಮುದ್ದುಕೃಷ್ಣ ಅವರು ವರಿಷ್ಠರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಪತ್ರಿತಾ ಹೇಳಿಕೆ ನೀಡಿರುವ ಅವರು, ಶಾಸಕರಾಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ರಾಜ್ಯ ಜನತೆಗೆ ಸೇವೆ ಸಲ್ಲಿಸಿದ ಮಾಜಿ ಸಚಿವ ಎ.ಕೃಷ್ಣಪ್ಪ ಅವರ ಉತ್ತಮ ಜನಸೇವೆ ಪರಿಗಣಿಸಿ ಹಾಗೂ ಜೆಡಿಎಸ್ ಸಂಘಟನೆಗಾಗಿ ರಾಜ್ಯಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಕ್ಕೆ ಪಕ್ಷದ ವರಿಷ್ಠರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹಜ್ ಯಾತ್ರಿಗಳಿಗೆ ಶುಭ ಕೋರಿದ ಶಾಸಕ ಸುಧಾಕರ್
ಚಿಕ್ಕಬಳ್ಳಾಪುರ: ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ತಾಲೂಕಿನ ಮುಸ್ಲಿಂ ಬಾಂಧವರನ್ನು ಗುರುವಾರ ಭೇಟಿ ಮಾಡಿದ ಶಾಸಕ ಡಾ. ಕೆ. ಸುಧಾಕರ್ ಪ್ರಯಾಣಕ್ಕೆ ಶುಭ ಕೋರಿದರು. ಚಿಕ್ಕಬಳ್ಳಾಪುರ ನಗರದ ಮಿಸ್ಕಿನ್ ಶಾವಲಿ ದರ್ಗಾದಲ್ಲಿ ಹಜ್ ಯಾತ್ರೆಗೆ ತೆರಳುವವರಿಗೆ ಮಾರ್ಗದರ್ಶನವನ್ನು ನೀಡುತ್ತಿದ್ದು ಇಲ್ಲಿಗೆ ಭೇಟಿ ನೀಡಿದ ಶಾಸಕರು ಯಾತ್ರೆಗೆ ತೆರಳುವವರಿಗಾಗಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದವರಿಗೆ ಆರೋಗ್ಯ ಪ್ರಮಾಣಪತ್ರ ವಿತರಿಸಿದರು. ತರಬೇತಿ ಕೇಂದ್ರದಲ್ಲಿ ಯಾತ್ರಿಗಳಿಗೆ ನೀಡುವ ತರಬೇತಿಯನ್ನು ವೀಕ್ಷಿಸಿದರು. ಜತೆಗೆ ಯಾತ್ರಿಗಳಿಗೆ ಸುರಕ್ಷಿತವಾಗಿ ತೆರಳಿ, ಹಜ್ ದರ್ಶನ ಮಾಡಿ ಬನ್ನಿ ಎಂದು ಶುಭಕೋರಿದರು. ಒಟ್ಟು 131 ಮಂದಿ ಚಿಕ್ಕಬಳ್ಳಾಪುರದಿಂದ ತೆರಳುತ್ತಿದ್ದು, ಯಾತ್ರಿಗಳಿಗೆ ಹಜ್ ಯಾತ್ರಾಸ್ಥಳದ ವಾತಾವರಣ ಹೇಗಿರುತ್ತದೆ, ಅದಕ್ಕೆ ಹೇಗೆ ಹೊಂದಿಕೊಳ್ಳಬೇಕು, ಪವಿತ್ರ ಸ್ಥಳ ತಲುಪಿದಾಗ ಅಲ್ಲಿ ಹೇಗೆ ವರ್ತಿಸಬೇಕು, ಆರೋಗ್ಯ, ಶುಚಿತ್ವ ಕಾಪಾಡಿಕೊಳ್ಳುವುದು ಹೇಗೆ ವಿಮಾನದಲ್ಲಿ ಪ್ರಯಾಣಿಸುವಾಗ ಯಾವ ರೀತಿ ನಡೆದುಕೊಳ್ಳಬೇಕು ಎಂಬಿತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಸಮುದಾಯದ ಅಧ್ಯಕ್ಷ ಅಮಾನುಲ್ಲಾ, ಮುಖಂಡ ಮೌಲಾ ಇಮ್ರಾನ್ ಮತ್ತಿತರರು ಇದ್ದರು.