24,25, ಕೋಲಾರದಲ್ಲಿ ಕನಕದಾಸರ ವಿಚಾರ ಸಂಕಿರಣ
ಕ.ಪ್ರ.ವಾರ್ತೆ ಕೋಲಾರ ಸೆ. 13
ನಗರದದ ಟಿ.ಚನ್ನಯ್ಯ ರಂಗ ಮಂದಿರದಲ್ಲಿ ಇದೇ ಸೆ.24 ಮತ್ತು 25 ರಂದು ಎರಡು ದಿನ ಕಾಲುದಾರಿ ಸಂತ ಪರಂಪರೆ ಮತ್ತು ಕನಕದಾಸರು-ವಿಚಾರ ಸಂಕಿರಣವನ್ನು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ರಾಜ್ಯ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.
ವಿಚಾರ ಸಂಕಿರಣದ ಸಮನ್ವಯಾಧಿಕಾರಿ, ಲೇಖಕ ಕಾ.ತ. ಚಿಕ್ಕಣ್ಣ ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಜನರ ಬಾಯಿಯಲ್ಲಿ ಉಳಿದು ಹೋದ ಸಂತರು, ತತ್ವಪದಕಾರರು, ನಾಥ, ಸಿದ್ಧ, ಅವಧೂತ, ಸೂಫಿ, ಇತರೆ ಶ್ರವಣ ಧಾರೆಗಳು ಮುಂತಾದವರ ಕುರಿತು ವಿಚಾರ ವಿನಿಮಯ ನಡೆಸುವುದು ವಿಚಾರ ಸಂಕಿರಣದ ಆಶಯವಾಗಿದೆ ಎಂದು ಅವರು ಮಾಹಿತಿ ನೀಡಿದರು.
ನಾಲ್ಕು ಗೋಷ್ಠಿ: ಎರಡು ದಿನಗಳ ವಿಚಾರ ಸಂಕಿರಣದಲ್ಲಿ ನಾಲ್ಕು ಗೋಷ್ಠಿಗಳನ್ನು ಏರ್ಪಡಿಸಲಾಗುತ್ತಿದೆ, ಸಂತರು-ತಾತ್ವಿಕ ವಿವೇಚನೆ ಕುರಿತ ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ರಹಮತ್ ತರೀಕೆರೆ ವಹಿಸಿ ಸಾಮಾಜಿಕ ಒತ್ತಾಸೆಗಳು ಎಂಬ ವಿಷಯ ಮಂಡಿಸುವರು.
ಚಾರಿತ್ರಿಕ ಸಂದರ್ಭದ ಬಗ್ಗೆ ಡಾ.ಎಂ.ವಿ. ವಸು, ದಾರ್ಶನಿಕ ಬಹುತ್ವ ಕುರಿತು ಡಾ.ಬಂಜಗೆರೆ ಜಯಪ್ರಕಾಶ್ ವಿಷಯ ಮಂಡಿಸಲಿದ್ದಾರೆ. ಎರಡನೇ ಗೋಷ್ಠಿಯಲ್ಲಿ ಭಾರತದ ಅಲಕ್ಷಿತ ಸಂತರು ಮತ್ತು ಕನಕದಾಸರು ಗೋಷ್ಠಿಯಲ್ಲಿ ತೌಲನಿಕ ನೋಟಗಳ ಕುರಿತು ಡಾ.ಡಿ. ಡೊಮಿನಿಕ್, ವಿಚಾರಕೃತಿಯ ನೆಲೆಗಳ ಬಗ್ಗೆ ಪ್ರೊ. ಜಯಪ್ರಕಾಶಶೆಟ್ಟಿ ಪ್ರಬಂಧಗಳನ್ನು ಮಂಡಿಸಲಿದ್ದು, ದೆಹಲಿಯ ಡಾಯಟಿ.ಎಸ್. ಸತ್ಯನಾಥ ಅಧ್ಯಕ್ಷತೆಯ ಜೊತೆಗೆ ಅರಹುವ ಸಾಧ್ಯತೆಗಳ ಬಗ್ಗೆ ಮಾತನಾಡಲಿದ್ದಾರೆ ಎಂದರು.
ಸೆ.25 ರಂದು 3ನೇ ವಿಚಾರಗೋಷ್ಠಿಯಲ್ಲಿ ಕನ್ನಡದ ಕಾಲುದಾರಿ ಪಂಥಗಳು ಗೋಷ್ಠಿಯಲ್ಲಿ ಲಿಂಗಸುಗೂರು ಡಾ.ಸಿ.ಬಿ. ಚಿಲ್ಕಾರಾಗಿ ಅವರು ಕಲ್ಯಾಣಿ ಸೀಮೆ, ಪ್ರೊ. ಶಂಕರ ಕಟಗಿ ಬೆಳುವಲ ಸೀಮೆ, ಡಾ. ನಟರಾಜ ಬೂದಾಳ್ ಬಯಲು ಸೀಮೆ ಬಗ್ಗೆ ವಿಚಾರ ಮಂಡಿಸಲಿದ್ದು, ಪ್ರೊ. ಚಂದ್ರಶೇಖರ ನಂಗಲಿ ಅಧ್ಯಕ್ಷತೆ ವಹಿಸಲಿದ್ದಾರೆ. 4ನೇ ಗೋಷ್ಠಿಯಲ್ಲಿ ಕನ್ನಡ ನುಡಿ ಬದುಕು ಮತ್ತು ಸಂತ ಅನುಸಂಧಾನದ ಕುರಿತು ವೀಣಾ ಬನ್ನಂಜೆ, ಡಾ.ಕೆ.ವೈ. ನಾರಾಯಣಸ್ವಾಮಿ ಹಾಗೂ ಕೋಲಾರ ಲಕ್ಷ್ಮೀಪತಿ ಮಾತನಾಡುವರು.
ಸಿಎಂ ಸಮಾರೋಪ ನುಡಿ: ಹಿರಿಯ ಸಾಹಿತಿ ಡಾ.ಕೆ. ಮರಳುಸಿದ್ದಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾರೋಪ ನುಡಿಗಳನ್ನಾಡುವರೆಂದು ವಿಚಾರ ಸಂಕಿರಣದ ಸಮಗ್ರ ಮಾಹಿತಿ ನೀಡಿದರು.
ರಾಷ್ಟ್ರೀಯ ಸಂತಕವಿ ಕನಕದಾಸ ಅದ್ಯಯನ ಮತ್ತು ಸಂಶೋಧನಾ ಕೇಂದ್ರದ ಮೂಲಕ ಕನಕದಾಸರ ಸಾಹಿತ್ಯವನ್ನು 15 ಭಾಷೆಗಳಿಗೆ ಅನುವಾದ ಮಾಡಲು ಉದ್ದೇಶಿಸಿ, ಯೋಜನೆಯ ರೂಪುರೇಷೆಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಸಲ್ಲಿಸಲಾಗಿದೆ. ಇದಕ್ಕೆ 2 ಕೋಟಿ ರು. ಬೇಕಾಗುತ್ತದೆ, ಕೇಂದ್ರದಿಂದ ಸಿಗುವ ಅನುದಾನ ಸಾಕಾಗದಿದ್ದರೆ ರಾಜ್ಯ ಸರ್ಕಾರದ ನೆರವು ಕೋರುವುದಾಗಿ ತಿಳಿಸಿದರು.
60 ವಿದ್ವಾಂಸರಿಗೆ ವಿವಿಧ ಸೌಲಭ್ಯ: ವಿಚಾರಗೋಷ್ಠಿಯಲ್ಲಿ ಮಂಡನೆ ಆಗುವ ಎಲ್ಲಾ ವಿಚಾರಗಳನ್ನು ದಾಖಲಿಸಿಕೊಂಡು ಪುಸ್ತಕ ರೂಪದಲ್ಲಿ ಹೊರ ತರಲಾಗುವುದೆಂದು ಹೇಳಿದರು. ವಿಚಾರ ಸಂಕಿರಣಕ್ಕೆ ಆಗಮಿಸುವ 60 ವಿದ್ವಾಂಸರಿಗಾಗಿ ವಸತಿ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲು ಸಿದ್ಧತೆ ನಡೆಯುತ್ತಿದೆ, ಕಾರ್ಯಕ್ರಮಕ್ಕೆ 25 ಲಕ್ಷ ಅಂದಾಜು ವೆಚ್ಚವಾಗಲಿದೆ ಎಂದರು.
ಹಿರಿಯ ಚಿಂತಕ ಡಾ. ರಾಮಕೃಷ್ಣ ಉದ್ಘಾಟಿಸಲಿದ್ದು, ಶಾಸಕ ವರ್ತೂರ್ ಪ್ರಕಾಶ್ ಅಧ್ಯಕ್ಷತೆ ವಹಿಸುವರು, ಜಿಲ್ಲಾಧಿಕಾರಿ ಡಿ.ಕೆ. ರವಿ ವಿಶೇಷ ಆಹ್ವಾನಿತರಾಗಿದ್ದಾರೆಂದು ಕಾ.ತ. ಚಿಕ್ಕಣ್ಣ ವಿವರಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ್, ಗೌರವ ಕಾರ್ಯದರ್ಶಿ ಮಾಲೂರು ಅಶ್ವತ್ಥ್ರೆರೆಡ್ಡಿ, ಮಾಲೂರು ತಾಲೂಕು ಅಧ್ಯಕ್ಷ ಮಧುಸೂದನ್, ಕೆಜಿಎಫ್ನ ವೀರ ವೆಂಕಟಪ್ಪ, ಬಂಗಾರಪೇಟೆಯ ಆರ್. ಅಶ್ವತ್ಥ್ ಇದ್ದರು.