ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿ

Mainashree
Updated On : 14 Sept 2013, 12:13 pm

ಕ.ಪ್ರ.ವಾರ್ತೆ ಗೌರಿಬಿದನೂರು ಸೆ. 13
ಪುರಸಭೆ ಮೀಸಲಾತಿ ಗೊಂದಲ ಶೀಘ್ರದಲ್ಲಿಯೇ ಪರಿಹಾರವಾಗಲಿದ್ದು, ಅಭಿವೃದ್ಧಿಗಾಗಿ ಸದಸ್ಯರು ಪಕ್ಷಭೇದ ಮರೆತು ಕೆಲಸ ಮಾಡಿ ಎಂದು ವಿಧಾನಸಭಾ ಉಪಾಧ್ಯಕ್ಷರಾದ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ಇಲ್ಲಿನ ಪುರಸಭಾ ಸಭಾಂಗಣದಲ್ಲಿ ಗೌರಿಬಿದನೂರು ಪಟ್ಟಣದ ನೀರಿನ ಸಮಸ್ಯೆ ಬಗೆಹರಿಸಲು ಕರೆದಿದ್ದ ಪುರಸಭಾ ಸದಸ್ಯರ ತುರ್ತು ಸಭೆಯಲ್ಲಿ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಸಭೆಗೆ ಆಗಮಿಸಿದಾಗ ಅವರಿಗೆ ಹೂವಿನ ಹಾರ ಹಾಕಿ ಆಭಿನಂದಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವಿಧಾನಸಭಾ ಉಪಸಭಾಧ್ಯಕ್ಷ ಸ್ಥಾನ ಅವಿಭಜಿತ ಕೋಲಾರ ಜಿಲ್ಲೆಗೆ ಒಲಿದು ಬಂದಿರುವ ಹುದ್ದೆ. ರಮೇಶ್‌ಕುಮಾರ್, ಎಂ.ವಿ. ವೆಂಕಟಪ್ಪ, ವಿ.ಆರ್.ಸುದರ್ಶನ್, ಅಂತಹವರು ಈ ಹುದ್ದೆ ಅಲಂಕರಿಸಿದ್ದಾರೆ. ಈ ಹುದ್ದೆ ನನಗೆ ಒಲಿದುಬಂದಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.
ಪುರಸಭಾ ಸದಸ್ಯರಾಗಿ 6 ತಿಂಗಳು ಕಳೆದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಆಯ್ಕೆಯಾಗಿಲ್ಲ. ಇಂದಿನ ಪುರಸಭೆ ಸದಸ್ಯರ ಸಭೆ ಅನಧಿಕೃತವಾಗಿದ್ದರೂ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಈ ಸಭೆ ಕರೆಯಲಾಗಿದೆ.
ಇಲ್ಲಿ ಎಲ್ಲಾ ಪಕ್ಷದ ಸದಸ್ಯರೂ ಇದ್ದಿದ್ದೀರಿ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯವಾಗಲೀ ಗೊಂದಲವಾಲಿ ಬೇಡ. ತಾವು ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ, ಹಿಂದೆಯೂ ಮಾಡಿಲ್ಲ ಎಂದರು.
ಪಟ್ಟಣದಲ್ಲಿ ನೀರಿನ ಸಮಸ್ಯೆ ಜಟಿಲಗೊಂಡಿದೆ. ಬೋರ್‌ವೆಲ್‌ಗಳು ಬತ್ತಿದೆ. ಟ್ಯಾಂಕರ್ ನೀರೂ ಸಾಲುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬದಲಿ ಯೋಜನೆ ಮಾಡಲೇಬೇಕಾಗಿದೆ. ಎತ್ತಿನಹೊಳೆ ಯೋಜನೆ ಇನ್ನು ಈಗ ಹುಟ್ಟುತ್ತಿರುವ ಕೂಸು. ಅದನ್ನು ಕಾಯಲು ಸಾಧ್ಯಲಿಲ್ಲ. ಈ ಕಾರಣಕ್ಕಾಗಿಯೇ ನಾನು ಮಂಚೇನಹಳ್ಳಿ ಹೋಬಳಿ ದಂಡಿಗಾನಹಳ್ಳಿಯ ಡ್ಯಾಂನಿಂದ ಪಟ್ಟಣಕ್ಕೆ ನೀರಿನ ವ್ಯವಸ್ಥೆ ಮಾಡಲು ಈಗಾಗಲೇ ತಜ್ಞರಿಂದ ಸರ್ವೆಕಾರ್ಯ ನಡೆಸಲು 5 ಲಕ್ಷ ಮಂಜೂರಾಗಿದೆ ಎಂದರು.
ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗಿರುವುದರಿಂದ ಸಕ್ಕರೆ ಕಾರ್ಖಾನೆ ಹಿಂಭಾಗದಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ಪುರಸಭಾ ವತಿಯಿಂದ ಫಿಲ್ಟರ್ ಬೋರ್ ಹಾಕಿಸುವುದರಿಂದ ಪುರಸಭೆ ಹೆಚ್ಚಿನ ನೀರನ್ನು ಪಡೆಯಬಹುದು. ಒಂದು ಫಿಲ್ಟರ್ ಬೋರ್‌ಗೆ ಕೇವಲ 25 ಸಾವಿರವಾಗತ್ತದೆ. ಮುಂದಿನ ದಿನಗಳಲ್ಲಿ ಅದನ್ನು ಬೇರೆಡೆಗೆ ವರ್ಗಾಯಿಸಿಕೊಳ್ಳಬಹುದು.
ಪ್ರಸ್ತುತ ಪಟ್ಟಣಕ್ಕೆ ಸರಬರಾಜಾಗುತ್ತಿರುವ ನೀರಿನ ಶೇ.70ರಷ್ಟು ನೀರನ್ನು ಕಿಂಡಿ ಬಳಿಯ ಜಾಕ್‌ವೆಲ್‌ನಿಂದ ಪಡೆಯುತ್ತಿದ್ದೇವೆ ಎಂದು ಪುರಸಭಾ ಸದಸ್ಯ ಎಂ.ನರಸಿಂಹಮೂರ್ತಿ ನೀಡಿದ ಸಲಹೆಯನ್ನು ಒಪ್ಪಿದ ಶಾಸಕರು, ತಕ್ಷಣವೇ ಅಳವಡಿಸಿ ಎಂದು ಅಭಿಯಂತರ ಅರುಣ್‌ಗೆ ಸೂಚಿಸಿದಾಗ ಪುರಸಭಾ ಸದಸ್ಯರೆಲ್ಲರೂ ಒಮ್ಮತದಿಂದ ಒಪ್ಪಿಗೆ ಸೂಚಿಸಿದರು.
ಟ್ಯಾಂಕರ್‌ನಿಂದ ಸರಬರಾಜು ಮಾಡಿರುವ ನೀರಿನ ಬಿಲ್ ಬಾಕಿ ಬಾಬ್ತು 22 ಲಕ್ಷ ಇದೆ ಎಂದರು.
ಮುಖ್ಯಾಧಿಕಾರಿ ಹನುಮಂತೇಗೌಡ ಅವರು ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement