ಕೋಚಿಮುಲ್ಗೆ ಗುಡಿಯಪ್ಪ ಸಾರಥ್ಯ
ಕ.ಪ್ರ.ವಾರ್ತೆ ಕೋಲಾರ ಸೆ. 13
ಪ್ರತಿಷ್ಠಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಒಕ್ಕೂಟದ ಹಿರಿಯ ನಿರ್ದೇಶಕ ಕೆ. ಗುಡಿಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ಕೋಚಿಮುಲ್ನಲ್ಲಿ ನಡೆದ ಅಧ್ಯಕ್ಷರ ಚುನಾವಣೆಗೆ ಕಾಂಗ್ರೆಸ್ನಿಂದ ಶಿಡ್ಲಘಟ್ಟ ತಾಲೂಕಿನ ಕೆ. ಗುಡಿಯಪ್ಪ, ಶ್ರೀನಿವಾಸಪುರದ ಸಿ. ಮುನಿವೆಂಕಟಪ್ಪ ಹಾಗೂ ಜೆಡಿಎಸ್ನಿಂದ ಮಾಲೂರಿನ ಡಾ. ಪ್ರಸನ್ನ ಅವರು ನಾಮಪತ್ರ ಸಲ್ಲಿಸಿದ್ದರು.
ಕೋಚಿಮುಲ್ನ 18 ಸದಸ್ಯರಲ್ಲಿ ಜೆಡಿಎಸ್ನ ಕೆಲ ಸದಸ್ಯರು ಸೇರಿದಂತೆ ಬಹುತೇಕರು ಕೆ. ಗುಡಿಯಪ್ಪ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸಿ. ಮುನಿವೆಂಕಟಪ್ಪ ಹಾಗೂ ಡಾ. ಪ್ರಸನ್ನ ಅವರು ಕಣದಿಂದ ಹಿಂದೆ ಸರಿದಿದ್ದರಿಂದ ಗುಡಿಯಪ್ಪ ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಯಿತು.
ಕೋಚಿಮುಲ್ ನಾಮನಿರ್ದೇಶಕರಾಗಿ ಸರ್ಕಾರ ನಾಮಕರಣ ಮಾಡಿರುವ ಕಾಂಗ್ರೆಸ್ ಮುಖಂಡ ಬ್ಯಾಟಪ್ಪನವರು ಸಹಾ ಚುನಾವಣೆಯಲ್ಲಿ ಭಾಗವಹಿಸಿದ್ದರು. ಹದಿಮೂರು ಸದಸ್ಯರು ವಿವಿಧ ಹಾಲು ಉತ್ಪಾದಕರ ಸಹಕಾರದಿಂದ ಆಯ್ಕೆಯಾಗಿದ್ದಾರೆ. ಸರ್ಕಾರದ ಮೂವರು ಅಧಿಕಾರಿಗಳು, 1 ಸಹಕಾರಿ ಇಲಾಖೆಯ ಸಹಾಯಕ ನಿಬಂಧಕರು, 1 ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರು ಹಾಗೂ ಕೆಎಂಎಫ್ನ ಒಬ್ಬ ಪ್ರತಿನಿಧಿಗೆ ಮತದಾನದ ಅವಕಾಶವಿತ್ತು.
ಗುಡಿಯಪ್ಪನವರ ಅಧಿಕಾರದ ಅವಧಿ ಇನ್ನು 6 ತಿಂಗಳು ಮಾತ್ರವಿದೆ, ಈ ಕಡಿಮೆ ಅವಧಿಗೆ ಅಧ್ಯಕ್ಷರಾಗಲು ಕಾಂಗ್ರೆಸ್ನ ಸಿ. ಮುನಿವೆಂಕಟಪ್ಪಗೆ ಇಷ್ಟವಿರಲಿಲ್ಲ, ಅದರೂ ನಾಮಪತ್ರ ಸಲ್ಲಿಸಿದ್ದ ಇವರು ನಂತರ ಕಾಂಗ್ರೆಸ್ ಮುಖಂಡರ ಸೂಚನೆ ಮೇರೆಗೆ ನಾಮಪತ್ರ ಹಿಂದಕ್ಕೆ ಪಡೆದರು.
ಗುಡಿಯಪ್ಪಗೆ ಅಧಿಕಾರ ತಪ್ಪಿಸಲು ಜೆಡಿಎಸ್ನ ಕೆಲ ನಿರ್ದೇಶಕರು ಪ್ರಯತ್ನಿಸಿದ್ದರಾದರೂ ಇದೇ ಪಕ್ಷದ ಕೆಲ ಸದಸ್ಯರು ಗುಡಿಯಪ್ಪಗೆ ಬೆಂಬಲ ತೋರಿದ್ದರಿಂದ ಜೆಡಿಎಸ್ ಮುಖಂಡರ ಪ್ರಯತ್ನ ವಿಫಲವಾಗಿದೆ. ಜೆಡಿಎಸ್ ಸದಸ್ಯರಾದ ಮದ್ದೇರಿ ರಾಮೇಗೌಡ, ಡಾ.ಪ್ರಸನ್ನ, ಕೆ.ವಿ. ನಾಗರಾಜ್, ಸುಬ್ಬಾರೆಡ್ಡಿ, ಜಯಸಿಂಹ ಅವರಿಗೆ ಜೆಡಿಎಸ್ ಮುಖಂಡರಾದ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ ಅವರು ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವಂತೆ ಸೂಚಿಸಿದ್ದರಿಂದ ಈ ಸದಸ್ಯರು ಮಾಜಿ ಸಚಿವ ಕೆ. ಶ್ರೀನಿವಾಸಗೌಡರ ಮನೆಯಲ್ಲಿ ಸೇರಿ ರಾಜಕೀಯ ತಂತ್ರ ರೂಪಿಸಲು ವಿಫಲ ಯತ್ನ ನಡೆಸಿದರು.
ಅಸಮಾಧಾನ: ಈ ಸಂದರ್ಭದಲ್ಲಿ ಗೌಡರ ಮನೆಗೆ ಭೇಟಿ ನೀಡಿದ ಜೆಡಿಎಸ್ನ ಕಾಡೇನಹಳ್ಳಿ ನಾಗರಾಜು ಅವರು, ಈ ಹಿಂದೆ ಆಗಿರುವ ಒಪ್ಪಂದ ಪ್ರಕಾರ ಕಾಂಗ್ರೆಸ್ಗೆ ಬೆಂಬಲ ನೀಡುವ ಮೂಲಕ ಪಕ್ಷಕ್ಕೆ ಆಗುವ ಹಾನಿ ಮತ್ತು ಮುಜುಗರ ತಪ್ಪಿಸಬೇಕಾಗಿದೆ, ತಾವು ನನ್ನನ್ನು ಅಭ್ಯರ್ಥಿಯಾಗುವಂತೆ ಹೇಳುವ ಮೂಲಕ ತಪ್ಪು ಸಂದೇಶ ರವಾನೆ ಮಾಡಲು ಯತ್ನಿಸುತ್ತಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ ಜೆಡಿಎಸ್ನ ಮತ್ತೊಬ್ಬ ಸದಸ್ಯ ಜಯಸಿಂಹ ಸಹ ಸಹ ಮತ ವ್ಯಕ್ತಪಡಿಸಿದ್ದರಿಂದ ಜೆಡಿಎಸ್ ಅಭ್ಯರ್ಥಿಯಾಗುವ ಕನಸು ಭಗ್ನಗೊಂಡಿತು.
ಕಾಂಗ್ರೆಸ್ನ ಗಂಗಮ್ಮನವರನ್ನು ಜೆಡಿಎಸ್ ಮುಖಂಡರು ಸೆಳೆಯಲು ಯತ್ನಿಸಿದರಾದರೂ ಹಿರಿಯ ಸಹಕಾರಿ ಅಬ್ಬಣಿ ಶಂಕರ್ ಅವರು ಗಂಗಮ್ಮನವರನ್ನು ತಮ್ಮ ಜೊತೆ ಕರೆತಂದು ಯಾವುದೇ ರಾಜಕೀಯ ಅವಘಡ ನಡೆಯದಂತೆ ನೋಡಿಕೊಂಡರು.
ಈಗಾಗಲೇ ಅಖಂಡ ಕೋಚಿಮುಲ್ ಅಧ್ಯಕ್ಷರಾಗಿ ಕೆಲಸ ಮಾಡಿರುವ ಗುಡಿಯಪ್ಪ ಮತ್ತೊಮ್ಮೆ ಹಾಲು ಒಕ್ಕೂಟದ ಅಧ್ಯಕ್ಷರಾಗುವ ಮೂಲಕ ಕಾಂಗ್ರೆಸ್ ಹಿಡಿತಕ್ಕೆ ಕೋಚಿಮುಲ್ ಸಿಕ್ಕಿದಂತಾಗಿದೆ.
ಚುನಾವಣಾಧಿಕಾರಿಯಾಗಿ ಕೋಲಾರ ತಹಸೀಲ್ದಾರ್ ನಾಗರಾಜ್ ಕಾರ್ಯನಿರ್ವಹಿಸಿದರು. ಗುಡಿಯಪ್ಪನವರನ್ನು ಮಾಜಿ ಅಧ್ಯಕ್ಷ ಮಂಜುನಾಥ್ ರೆಡ್ಡಿ ಅಭಿನಂದಿಸಿದರು, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಹನುಮೇಶ್ ಹಾಗೂ ಅಧಿಕಾರಿ ವರ್ಗವಿತ್ತು.