'ಬೆಂಗಳೂರು ಕೊಳಚೆ ನೀರು ಬಳಕೆಗೆ ಕಾನೂನು ತೊಡಕಿಲ್ಲ'
ಮಾಲೂರು: ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಪಡೆಯಲು ಯಾವುದೇ ಕಾನೂನಿನ ಅಡ್ಡಿ ಇಲ್ಲ. ತಮಿಳುನಾಡಿನ ಅಡ್ಡಿಗೆ ಯೋಚಿಸುವುದೆ ಬೇಡ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ರೈತ ಸಮಾವೇಶದಲ್ಲಿ ಮಾತನಾಡಿ, ಬೆಂಗಳೂರಿನ ಕೊಳಚೆ ನೀರು ಬಳಕೆಗೆ ಯಾವುದೇ ಕಾನೂನಿನ ಅಡ್ಡಿಯಿಲ್ಲ. ಮಾಲೂರು-ಬಂಗಾರಪೇಟೆ ತಾಲೂಕಿನ ಕೆರೆಗಳಿಗೆ ನೀರು ಹರಿಸಬಹುದಾದ ಈ ಮುಗಳೂರು- ವರ್ತೂರು ಕೋಡಿ ಯೋಜನೆಗೆ ಸಂಪೂರ್ಣ ಸಹಕಾರವಿದೆ. ಈ ಬಗ್ಗೆ ಜಲಸಂಪನ್ಮೂಲ ಮಂತ್ರಿಗಳೊಡನೆ ಚರ್ಚಿಸುವುದಾಗಿ ತಿಳಿಸಿದರು. ಬೆಂಗಳೂರು ಕೊಳಚೆ ನೀರು ವರ್ಷಕ್ಕೆ ಸಾವಿರಾರು ಟಿಎಂಸಿನಷ್ಟು ವ್ಯರ್ಥವಾಗಿ ಹರಿದುಹೋಗುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕಳೆದ ದಶಕದಿಂದ ಹೋರಾಟ ಮಾಡುತ್ತಿರುವ ಸ್ಥಳೀಯ ರೈತ ಡಾ. ಗೋಪಾಲ್ ಗೌಡ ಅಭಿನಂದನಾರ್ಹರು. ಯಥೇಚ್ಛವಾಗಿ ನೀರಿನ ಸಂಪತ್ತು ಇದ್ದರೂ ಸದ್ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಕೃತಕ ಬರಪ್ರದೇಶ ಸೃಷ್ಟಿಯಾಗುತ್ತಿದೆ ಎಂದರು.