ವ್ಯವಸ್ಥಾಪನಾ ಸಮಿತಿಗೆ ಮುಂದುವರಿಕೆಗೆ 'ಹೈ' ಆದೇಶ
ಮಾಲೂರು: ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳವಾದ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ರದ್ದುಪಡಿಸಿ ರಾಜ್ಯ ಉಚ್ಚ ನ್ಯಾಯಾಲಯ ಹಾಲಿ ಸಮಿತಿ ಮುಂದುವರಿಸುವಂತೆ ತಿಳಿಸಿದ್ದು, ರಾಜ್ಯ ಸರ್ಕಾರಕ್ಕೆ ಮುಜುಗರವುಂಟು ಮಾಡಿದೆ.
ರಾಜ್ಯ ಧಾರ್ಮಿಕ ಪರಿಷತ್, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಕಾಯ್ದೆ 1997ರ ಸೆಕ್ಷನ್ 25ರ ಅನ್ವಯ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ 2012 ಮಾ. 17 ರಂದು 9 ಮಂದಿಯ ವ್ಯವಸ್ಥಪನಾ ಸಮಿತಿ ರಚಿಸುವಂತೆ ನೀಡಿದ ಆದೇಶದಂತೆ ಕಳೆದ ಮಾರ್ಚ್‌ನಲ್ಲಿ ಮಾಲೂರಿನ ಉದ್ಯಮಿ ಡಿ.ಟಿ. ಪುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಅವಿರೋಧವಾಗಿ ರಚಿಸಲಾಗಿತ್ತು.
ಸಮಿತಿಯ ಪ್ರತಿ ತಿಂಗಳು ಸಭೆ ಸೇರಿ ದೇವಾಲಯದ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಿ ವರದಿಯನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ರವಾನಿಸಿ ಸೌಲಭ್ಯ ಅನುಷ್ಠಾನಕ್ಕೆ ಮುಂದಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಸ್ತಿತ್ವಕ್ಕೆ ಬಂದ ಮೇಲೆ ಮುಜರಾಯಿ ಇಲಾಖೆಗಳಿಗೆ ಒಳಪಟ್ಟ ಎ ವರ್ಗಕ್ಕೆ ಸೇರಿದ ರಾಜ್ಯದ 41 ದೇವಾಲಯ ಸಮಿತಿಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿ ಮುಂದಿನ ಸಮಿತಿ ಆಯ್ಕೆಯಾಗುವವರಿಗೆ ತಹಸೀಲ್ದಾರ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿತ್ತು. ರಾಜ್ಯ ಸರ್ಕಾರದ ಈ ಆದೇಶ ವಿರೋಧಿಸಿ ದೇವಾಲಯ ಸಮಿತಿಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೈಕೋರ್ಟ್‌ನಲ್ಲಿ ಈ ಬಗ್ಗೆ ನಡೆದ ವಿಚಾರಣೆ ನಡೆಸಿ ನ್ಯಾಯಾಧೀಶ ಹುಲವಾಡಿ ಜಿ.ರಮೇಶ್ ಅವರು ಸರ್ಕಾರದ ಆದೇಶ ರದ್ದುಗೊಳಿಸಿದರು. ಅಲ್ಲದೆ, ಹಾಲಿ ಸಮಿತಿ ಮುಂದುವರಿಸುವಂತೆ ಆದೇಶ ನೀಡಿದ್ದಾರೆ. ಸಮಿತಿ ಪರ ವಕೀಲ ನಟರಾಜ್, ರಾಜರಾಂ ವಾದ ಮಂಡಿಸಿದ್ದರು.