ಶ್ರೀನಿವಾಸಪುರದ ಯಲ್ದೂರಿಗೆ ನೂತನ ಬಸ್ ಸಂಚಾರ ಶುರು
ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗ್ರಾಮೀಣ ಭಾಗದ ಜನರ ಸಂಚಾರದ ಹಿತದೃಷ್ಟಿಯಿಂದ ಸಂಸ್ಥೆಗೆ ನಷ್ಟವಾದರೂ ಬಸ್ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ರಮೇಶ್ ತಿಳಿಸಿದರು.
ಅವರು ಶುಕ್ರವಾರ ಅಣ್ಣಿಹಳ್ಳಿ ಗ್ರಾಮದಲ್ಲಿ ಶ್ರೀನಿವಾಸಪುರದಿಂದ ಯಲ್ದೂರು, ಹೋಳೂರು, ಅಣ್ಣಿಹಳ್ಳಿ ಮಾರ್ಗವಾಗಿ ಕೋಲಾರಕ್ಕೆ ಬರುವ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಗ್ರಾಮೀಣ ಪ್ರದೇಶದ ಸಾರಿಗೆ ಸಂಪರ್ಕ ಕಲ್ಪಿಸಲು ನೂತನ ಬಸ್ಗಳನ್ನು ಅಳವಡಿಸಲಾಗುತ್ತಿದೆ. ಆದರೆ ರಸ್ತೆಗಳ ದುರಸ್ತಿಗಳನ್ನು ಸಮರ್ಪಕವಾಗಿ ನೆರವೇರಿಸಬೇಕೆಂದರು.
ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಆರ್.ಕೃಷ್ಣಪ್ಪ ಯಲ್ದೂರಿನಿಂದ ಹೋಳೂರು ಮಾರ್ಗವಾಗಿ ಕೋಲಾರಕ್ಕೆ ಬರುವುದರಿಂದ ಸಮಯ ಮತ್ತು ಬಸ್ ದರ ತುಂಬಾ ಕಡಿಮೆಯಾಗುತ್ತದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಯಾಣಿಕರಿಗೆ ಅನುಕೂಲವಾಗಲು ಕೋಲಾರದಿಂದ ಶ್ರೀನಿವಾಸಪುರಕ್ಕೆ ಯಲ್ದೂರು ಮಾರ್ಗವಾಗಿ ನೂತನ ಬಸ್ ಅಳವಡಿಸಿರುವುದು ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.
ನೂತನ ಬಸ್ ಶ್ರೀನಿವಾಸಪುರ ಬೆಳಿಗ್ಗೆ 6.30 ಕ್ಕೆ ಬಿಟ್ಟು ಯಲ್ದೂರು, ಹೋಳೂರು, ಬೆಣ್ಣಂಗೂರು, ಚಿಲ್ಲಪನಹಳ್ಳಿ, ಅಣ್ಣಿಹಳ್ಳಿ, ಮತ್ತಿಕುಂಟೆ ಮಾರ್ಗವಾಗಿ ಕೋಲಾರಕ್ಕೆ 8.30ಕ್ಕೆ ತಲುಪುತ್ತದೆ.
ಸಂಜೆ 5 ಗಂಟೆಗೆ ಕೋಲಾರ ಬಿಟ್ಟು ಅದೇ ಮಾರ್ಗವಾಗಿ ಶ್ರೀನಿವಾಸಪುರಕ್ಕೆ ರಾತ್ರಿ 7 ಗಂಟೆಗೆ ತಲುಪುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಅಣ್ಣಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ನಾಗರಾಜ, ಎಸ್.ಡಿ.ಎಂ.ಸಿ ಅಧ್ಯಕ್ಷ ಮತ್ತಿಕುಂಟೆ ಬಿ.ಶ್ರೀನಿವಾಸ, ನೆನಮನಹಳ್ಳಿ ರಾಜೇಂದ್ರ, ಬಸ್ ಚಾಲಕ ಸುರೇಶ್ ಇದ್ದರು.