ಅಭಿವೃದ್ಧಿಯಾಗದ ಸರ್ ಎಂವಿ ಜನ್ಮಸ್ಥಳ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ್ಣ ಸೆ. 14
ಇಡೀ ವಿಶ್ವದ ಗಮನ ಸೆಳೆದಿದ್ದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ಸ್ಥಳವಾದ ತಾಲೂಕಿನ ಮುದ್ದೇನಹಳ್ಳಿ ಅಭಿವೃದ್ಧಿಯನ್ನು ಕಾಣದೇ ಸೊರಗುತ್ತಿದೆ.
ಕೈಗಾರಿಕೆ, ಬ್ಯಾಂಕಿಂಗ್, ನೀರಾವರಿ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹೊಸ- ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಂತಹ ಸರ್ ಎಂ.ವಿಶ್ವೇಶ್ವರಯ್ಯನವರ ಸಾಧನೆ ವರ್ಣಾತೀತ.
ಕೆಆರ್‌ಎಸ್ ಅಣೆಕಟ್ಟು ನಿರ್ಮಿಸುವ ಮೂಲಕ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಿದರು. ಅಲ್ಲದೆ, ದೇಶ ವಿದೇಶಗಳಲ್ಲೂ ಬುದ್ಧಿವಂತಿಕೆ ಉಪಯೋಗಿಸಿ ಶಹಭಾಷ್‌ಗಿರಿ ಪಡೆದುಕೊಂಡರು. ಹೀಗೆ ಇವರ ಸಾಧನೆಯ ಬಗ್ಗೆ ಹೇಳುತ್ತ ಹೋದರೆ ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ಇಂತಹ ಮಹಾನ್ ವ್ಯಕ್ತಿ ಹುಟ್ಟಿದ ಜನ್ಮಸ್ಥಳವು ಆರಕ್ಕೇರದೆ ಮೂರಕ್ಕಿಳಿಯದ ಪರಿಸ್ಥಿತಿಯಲ್ಲಿಯೇ ಇಂದಿಗೂ ಇದೆ.
ಆಗದ ಅಭಿವೃದ್ಧಿ: ಮುದ್ದೇನಹಳ್ಳಿ ಅಭಿವೃದ್ಧಿಯ ವಿಷಯದಲ್ಲಿ ಕೇಳಿ ಬಂದ ಭರವಸೆಗಳಿಗೆ ಏನೂ ಕೊರತೆಯಿಲ್ಲ. ಇವೆಲ್ಲಾ ಅನುಷ್ಠಾನಗೊಂಡಿದ್ದರೆ ಈಗಾಗಲೇ ಮುದ್ದೇನಹಳ್ಳಿ ಇಡೀ ವಿಶ್ವದ ಗಮನ ಸೆಳೆದಿರುತ್ತಿತ್ತು. ಆದರೆ, ಇದಾಗಿಲ್ಲ. ಪ್ರಸ್ತುತ ಸರ್ ಎಂವಿ ಅವರ ಸಮಾಧಿಯ ಸುತ್ತಲೂ ಹಸಿರು ಹುಲ್ಲು, ಅಲಂಕಾರಿಕ ಹೂ- ಗಿಡಗಳನ್ನು ಬೆಳೆಸಿರುವುದನ್ನು ಬಿಟ್ಟರೆ ಅವರ ಖ್ಯಾತಿಗೆ ಅನುಗುಣವಾಗಿ ಅಗತ್ಯ ಬದಲಾವಣೆಗಳು ಆಗಿಲ್ಲ. ಇರುವ ಮಕ್ಕಳ ಉದ್ಯಾನವನ ಕೇವಲ ಹೆಸರಿಗಷ್ಟೇ ಎನ್ನುವಂತಿದ್ದರೆ, ಸರ್ ಎಂವಿ ಅವರು ಬಳಸುತ್ತಿದ್ದ ವಸ್ತುಗಳು, ಗಳಿಸಿದ ಭಾರತರತ್ನ ಸೇರಿದಂತೆ ಖ್ಯಾತ ಪದಕಗಳು, ಅವರಿಗೆ ಸಂಬಂಧಪಟ್ಟ ಅಪರೂಪದ ಚಿತ್ರಗಳು ಕಿರಿಕಿರಿಯಾಗುವಂತಹ ಸಣ್ಣ ಕಟ್ಟಡದಲ್ಲಿವೆ. ಏನಾದರೂ ಪ್ರವಾಸಿಗರಾಗಲಿ ಅಥವಾ ವಿದೇಶಿಗರಾಗಲಿ ಯಾರಾದರೂ ಇಲ್ಲಿಗೆ ಬಂದರೆ ಅವರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ಕೊಡುವವರೇ ಇಲ್ಲ. ಕೇವಲ ಸುಮ್ಮನೆ ಬಂದು ನಿನ್ನಪಾಡಿಗೆ ನೋಡಿಕೊಂಡು ಹೋಗು ಎಂದು ಅಣಕಿಸುವಂತಿದೆ ಇಲ್ಲಿನ ಪರಿಸ್ಥಿತಿ.
ಕೇವಲ ಭರವಸೆ: ಸರ್ ಎಂವಿ ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಮುದ್ದೇನಹಳ್ಳಿ ಅಭಿವೃದ್ಧಿಗೆ ಭರವಸೆಗಳ ಸುರಿಮಳೆಯಾಗಿತ್ತು. ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಇಲ್ಲಿ ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಐಐಟಿ ಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಿದ್ದರು. ಆದರೆ, ಐಐಟಿ ಬೇರೆ ರಾಜ್ಯದ ಪಾಲಾಯಿತು. ಇನ್ನೂ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ತರಬೇತಿ ಕೇಂದ್ರ ಪ್ರಾರಂಭಿಸಲಾಗುವುದು. ಇದಕ್ಕಾಗಿ 200 ಎಕರೆ ಪ್ರದೇಶ ಗುರುತಿಸಲಾಗಿದೆ ಎಂದಿದ್ದು ಕೇವಲ ಮುದ್ದೇನಹಳ್ಳಿ ಸಮೀಪದ ಗುಡ್ಡವೊಂದರ ಕೆಳಗೆ. ಇದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯಕ್ಕೆ ಸೇರಿದ ಜಾಗ ಎಂದು ನಾಮಫಲಕ ಹಾಕಿದ್ದೇ ಇಲ್ಲಿಯವರೆಗಿನ ಬುರುಡೆ ಸಾಧನೆಯಾಗಿದೆ. ಮಾಸ್ಟರ್ ಸ್ಕಿಲ್ ಟ್ರೇನಿಂಗ್ ಸೆಂಟರ್ ಸ್ಥಾಪನೆಯು ಇನ್ನೂ ದೂರದ ಮಾತಾಗಿದೆ.
ಗಣಿಗಾರಿಕೆಗೆ ತತ್ತರ: ಆಮೆಗತಿಯಲ್ಲಿ ಅಭಿವೃದ್ಧಿಯಾಗುತ್ತಿದ್ದರೂ ಅಕ್ರಮ ಗಣಿಗಾರಿಕೆ ಮಾತ್ರ ಇಲ್ಲಿ ಜೋರಾಗಿ ನಡೆಯುತ್ತಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಯಾವುದೇ ಕಾಳಜಿಯನ್ನು ತೋರದೆ ನಿಯಮಗಳನ್ನು ಗಾಳಿಗೆ ತೂರಿ ಕ್ವಾರಿಯಲ್ಲಿ ಕಲ್ಲುಗಳನ್ನು ಸಿಡಿಸುತ್ತಿರುವುದು. ಯಾವುದೇ ಲೆಕ್ಕವಿಲ್ಲದೇ ಯರ್ರಾಬಿರ್ರಿ ಕಲ್ಲುಗಳನ್ನು ಲಾರಿಗಳಲ್ಲಿ ಸಾಗಾಣೆ ಮಾಡುತ್ತಿರುವುದು ಮಾತ್ರ ರಾಜಾರೋಷವಾಗಿಯೇ ನಡೆಯುತ್ತಿದೆ. ಇಲ್ಲಿನ ಪ್ರಭಾವಿಗಳ ಒತ್ತಡಕ್ಕೆ ಮಣಿದು ಮುದ್ದೇನಹಳ್ಳಿಯ ಅಭಿವೃದ್ಧಿಗೆ ಮೀನಮೇಷ ಎಣಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಜಿಲ್ಲಾಡಳಿತದಿಂದ ಆಚರಣೆ ಇಲ್ಲ
ಎಲ್ಲೆಡೆ ಸೆ. 15 ರಂದು ಸರ್ ಎಂ.ವಿ. ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಹುಟ್ಟಿದ ಜಿಲ್ಲೆಯಲ್ಲಿಯೇ ಅವರ ಜನ್ಮದಿನ್ನ ಆಚರಿಸಲು ಜಿಲ್ಲಾಡಳಿತ ಮುಂದಾಗುತ್ತಿಲ್ಲ. ಈ ಹಿಂದೆ ಸರ್ ಎಂ.ವಿ.ಅವರ 150ನೇ ಜನ್ಮದಿನದ ಸಂದರ್ಭದಲ್ಲಿ ಕೇವಲ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರ ಸೂಚನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ಕಾರ್ಯಕ್ರಮ ಆಚರಿಸಲಾಗಿತ್ತು. ಆ ನಂತರ ಸರ್ ಎಂವಿ ಅವರ ಜನ್ಮದಿನ ಮರೆತು ಹೋಗಿದ್ದು, ಈ ವರ್ಷ ಸರಳವಾಗಿಯಾದರೂ ಕಾರ್ಯಕ್ರಮ ಆಯೋಜಿಸುವ ಕೆಲಸಕ್ಕೆ ಹೋಗಿಲ್ಲ.
ಎನ್. ವೆಂಕಟೇಶ್