ಅಸಮರ್ಪಕ ವೇತನ: ಕ್ರಮಕ್ಕೆ ಆಗ್ರಹ
ಚಿಕ್ಕಬಳ್ಳಾಪುರ: ಅಸಮರ್ಪಕ ವೇತನದಿಂದ ತೊಂದರೆ ಅನುಭವಿಸುತ್ತಿರುವ ಅತಿಥಿ ಉಪನ್ಯಾಸಕರು, ರಾಜ್ಯ ಸರ್ಕಾರ ತಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಾಳ ಮುನಿಯಪ್ಪ, ಅತಿಥಿ ಉಪನ್ಯಾಸಕರು ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚಿನ ಅವಧಿ ದುಡಿಯುತ್ತಿದ್ದರೂ ಸಹ ಸಮರ್ಪಕವಾಗಿ ವೇತನ ನೀಡಲಾಗುತ್ತಿಲ್ಲ. ಬದಲಿಗೆ ಸರ್ಕಾರಿ ಕಾಲೇಜಿನ ಉಪನ್ಯಾಸಕರು ಕಡಿಮೆ ಅವಧಿಯ ಕೆಲಸವನ್ನು ಮಾಡುತ್ತಿದ್ದರೂ ಸಹ ಹೆಚ್ಚಿನ ಸಂಬಳವನ್ನು ಕೊಟ್ಟು ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದರು.
ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳಿಗೊಮ್ಮೆ ವೇತನ ನೀಡುವಂತಹುದು. ತಿಂಗಳುಗಟ್ಟಲೇ ವೇತನವನ್ನು ಬಾಕಿ ಉಳಿಸಿಕೊಳ್ಳುತ್ತಿರುವುದರಿಂದ ಸಮರ್ಪಕವಾಗಿ ಕೆಲಸವನ್ನು ಮಾಡಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ ಅವರು, ಕೆಲಸದ ಮೇಲೆ ಅನವಶ್ಯಕ ಒತ್ತಡವನ್ನು ಹಾಕುತ್ತಿರುವುದರಿಂದ ಅತಿಥಿ ಉಪನ್ಯಾಸಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮನವಿ ಪತ್ರಗಳನ್ನು ಸಲ್ಲಿಸುವುದರ ಜತೆಗೆ ಹೋರಾಟಗಳನ್ನು ಮಾಡಿಕೊಂಡು ಬಂದು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿಕೊಂಡು ಬರಲಾಗುತ್ತಿದೆ. ಆದರೂ ಸಹ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಈ ಕಾರಣದಿಂದ ಸೆ.25 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು.ಆ ನಂತರ ಸಹ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್ ಮಾತನಾಡಿ, ಅತಿಥಿ ಉಪಾನ್ಯಾಸಕರಿಗೆ ಸೇವಾ ಭಧ್ರತೆ ಇಲ್ಲ. ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಕಾಯಂ ಮಾಡದೇ ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ ಎಂದ ಅವರು, ರಾಜ್ಯದಲ್ಲಿ 1.72.000 ಸರ್ಕಾರಿ ಉಪನ್ಯಾಸಕರ ಹುದ್ದೆ ಖಾಲಿ ಇದ್ದರೂ ಸರ್ಕಾರ ನೇಮಕಾತಿಗೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಶೇ.80 ರಷ್ಟು ಹುದ್ದೆಗಳನ್ನು ಅತಿಥಿ ಉಪಾನ್ಯಾಸಕರಿಗೆ ಮೀಸಲಿಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕಿನ ಅತಿಥಿ ಉಪಾನ್ಯಾಸಕರು ಉಪಸ್ಥಿತರಿದ್ದರು.