ಆಕರ್ಷಕ ಬರನಿವಾರಕ ಗಣಪ
ಮಾಲೂರು: ಬ್ರಿಟಿಷರ ವಿರುದ್ಧ ಹೋರಾಟಕ್ಕಾಗಿ ಬಾಲಗಂಗಾಧರ್ ತಿಲಕ್ ಪ್ರಾರಂಭಿಸಿದ ಗಣೇಶೋತ್ಸವವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಇಲ್ಲಿನ ಹಿಂದೂಸ್ತಾನ್ ಯುವ ವೃಂದವು ಪ್ರತಿವರ್ಷವು ರಾಜ್ಯದಲ್ಲಿ ಕಾಡುತ್ತಿರುವ ಸಮಸ್ಯೆಗಳ ಪರಿಹಾರವನ್ನು ವಿಶೇಷ ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿ ಗಣೇಶೋತ್ಸವದ ಉದ್ದೇಶದ ಸಾರ್ಥಕತೆ ಪಡೆಯುವ ಹಾಗೆ ಮಾಡಿದ್ದಾರೆ. ಕಳೆದ ಬಾರಿ ಶಿಕ್ಷಣ ಅಭಿಯಾನದ ಅರಿವು ಮೂಡಿಸುವ ಸಲುವಾಗಿ ಶಿಕ್ಷಕ ಗಣಪನನ್ನು ಪ್ರತಿಷ್ಠಾಪಿಸಿ ತಾಲೂಕಿನ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಭೇಟಿ ನೀಡುವಂತೆ ಮಾಡಿದ ಹಿಂದೂಸ್ತಾನ ಯುವ ವೃಂದದ ಯುವಕರು, ಈ ಬಾರಿ ದಶಕದಿಂದ ಕಾಡುತ್ತಿರುವ ಬರಗಾಲ ನಿವಾರಣೆ ಮಾಡುವ ಯೋಜನೆಗಳನ್ನು ರೂಪಕ ಆಳವಡಿಸಿದ್ದಾರೆ. ಜಿಲ್ಲೆಯಲ್ಲಿ ಆವರಿಸಿರುವ ಬರಗಾಲದ ಸಂಕಷ್ಟ ಪರಿಹಾರಿಸಲು ಸಂಕಷ್ಟಹರ ಗಣಪನನ್ನು ಸ್ಥಾಪಿಸಿದ್ದಾರೆ. ಅಲ್ಲದೆ, ಬರಗಾಲಕ್ಕೆ ಕಾರಣವಾಗುತ್ತಿರುವ ಅಂಶಗಳನ್ನು ಗೊಂಬೆ ದೃಶ್ಯಗಳ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಜಿಲ್ಲೆಯ ಅಂರ್ತಜಲ ಹೆಚ್ಟಿಸಬೇಕಾದರೆ ಡಾ. ಪರಮಶಿವಯ್ಯ ವರದಿಯೇ ಅಂತಿಮವಾಗಬೇಕೆಂಬ ಕೂಗನ್ನು ಹಾಗೂ ಮುಗಳೂರು ಕಾಲುವೆ ನೀರಿನ ಯೋಜನೆಯ ಅವಶ್ಯಕತೆ ತಿಳಿಸುವ ಗಣಪ ಎಲ್ಲರ ಗಮನ ಸೆಳೆಯುತ್ತಿದೆ. ಪ್ರತಿಸಂಜೆ ನಂತರ ದೀಪಾಲಂಕಾರದಲ್ಲಿ ವಿಶೇಷವಾಗಿ ಕಾಣುವ ಬರ ನಿವಾರಕ ಗಣಪನನ್ನು ನೋಡಲು ಮಾಲೂರಿನ ಧರ್ಮರಾಯ ದೇವಾಲಯ ರಸ್ತೆಯ ಹಿಂದೂಸ್ತಾನ್ ವೃತ್ತಕ್ಕೆ ಬರಬೇಕು.