ಗ್ರಾಪಂ ವ್ಯಾಪ್ತಿಯ ಜಮೀನಿಗೆ 'ಇ- ಸ್ವತ್ತು' ಕಡ್ಡಾಯ
ಬೆಂಗಳೂರು: ಕೃಷಿಯೇತರ ಭೂಮಿಗಳು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿದ್ದರೆ ಅವುಗಳ ನೋಂದಣಿಗೆ 'ಇ- ಸ್ವತ್ತು' ಕಡ್ಡಾಯಗೊಳಿಸಿರುವುದರಿಂದ ರಾಜ್ಯದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ.
ಗ್ರಾಮ ಪಂಚಾಯಿತಿಯಲ್ಲಿ ನೀಡಲಾಗುವ ಇ- ಖಾತಾವನ್ನು ನೀಡಿದರೆ ಮಾತ್ರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಯಾಗುತ್ತದೆ. ಇಲ್ಲದಿದ್ದರೆ ಇಲ್ಲ. ಈ ಪ್ರಕ್ರಿಯೆಯಿಂದ ನೋಂದಣಿ ಸಂಖ್ಯೆಗಳು ಇಳಿಮುಖವಾಗಿದ್ದು, ಭೂಪರಿವರ್ತನೆಯಾಗಿದ್ದರೂ ನಕ್ಷೆ ನಮೂದಿಸಿಕೊಳ್ಳದವರ ಆಸ್ತಿಗಳ ಮಾರಾಟ ಆಗುತ್ತಿಲ್ಲ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಕೃಷಿಯೇತರ ಸ್ವತ್ತುಗಳಿಗೆ 'ಇ- ಸ್ವತ್ತು' ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದೆ. 'ಇ- ಸ್ವತ್ತು' ಇಲ್ಲದೆ ಯಾವ ಉಪ ನೋಂದಣಾಧಿಕಾರಿಯೂ ಸ್ವತ್ತು ನೋಂದಣಿ ಮಾಡುವಂತಿಲ್ಲ. ಹೀಗಾಗಿ, ಎಲ್ಲವೂ ಸಕ್ರಮವಾಗಿಲ್ಲದ ಆಸ್ತಿಗಳ ಮಾಲೀಕರು ಅದನ್ನು ಮಾರಾಟ ಮಾಡಲು ಪರಿತಪಿಸುತ್ತಿದ್ದಾರೆ.
ಗ್ರಾಮ ಪಂಚಾಯಿತಿಗಳು ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ-9 ಮತ್ತು 11 ನೀಡುತ್ತಿದ್ದವು. ಇದನ್ನು ಇದೀಗ ಒಟ್ಟುಗೂಡಿಸಿ 'ಇ-ಸ್ವತ್ತು' ಎಂದು ಹೆಸರಿಸಲಾಗಿದೆ. ಇದು ಗಣಕೀಕೃತವಾಗಿದ್ದು, ಗ್ರಾಮ ಲೆಕ್ಕಗರ ಶಾಹಿ ಸಹಿಯ ಅಗತ್ಯ ಇಲ್ಲ. ಡಿಜಿಟಲ್ ಸಿಗ್ನೇಚರ್ ಮೂಲಕ ಇದು ಕಾರ್ಯನಿರ್ವಹಿಸಲಿದೆ. ಗ್ರಾಮ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರು 'ಇ-ಸ್ವತ್ತು' ಅನ್ನು ಕಂಪ್ಯೂಟರ್ ಮೂಲಕ ವಿತರಿಸಿದರೆ ಮಾತ್ರ ಆ ಆಸ್ತಿ ನೋಂದಣಿಯಾಗುತ್ತದೆ.
ಕೃಷಿಯೇತರ ಭೂಮಿಯ ಆಸ್ತಿಗಳು ಭೂಕಂದಾಯ ಕಾಯ್ದೆಗೆ ಅನುಗುಣವಾಗಿ ಪರಿವರ್ತನೆಯಾಗಿ, ಅನುಮೋದಿತ ಬಡಾವಣೆಯಲ್ಲಿರಬೇಕು. ವಸತಿ ಇಲಾಖೆ ನೀಡಿದ್ದಾದರೆ, ಅದರ ಆದೇಶದಂತಿರುವ ಆಸ್ತಿ ಆಗಿರಬೇಕು. ಗ್ರಾಮಠಾಣಾ ವ್ಯಾಪ್ತಿಯ ಆಸ್ತಿಯಾಗಿದ್ದರೆ ತಹಸೀಲ್ದಾರ್ ನೀಡುವ ಕಚ್ಚಾ ನಕ್ಷೆ, ಸರ್ಕಾರ ಸುತ್ತೋಲೆ ಸಂಖ್ಯೆಯನ್ನು ಆಧರಿಸಿರಬೇಕು. ಇದು ನಮೂನೆ-9ರ ನಿಬಂಧನೆಗಳು.
ಇನ್ನು ನಮೂನೆ-11ರಂತೆ ಪಂಚಾಯತ್ರಾಜ್ ನಿಯಮಗಳನ್ವಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೃಷಿಯೇತರ ಆಸ್ತಿಗಳಿಗೆ ವಿತರಿಸುವ ನಮೂನೆಯಲ್ಲಿ ಭೂಮಿ, ಕಟ್ಟಡಗಳ ಬೇಡಿಕೆ, ವಸೂಲಿ, ಬಾಕಿಗಳ ವಹಿಗಳಿರುತ್ತವೆ. ಇವೆರಡೂ ಸೇರಿದ ಮಾಹಿತಿಯೇ ಗಣಕೀಕೃತ 'ಇ-ಸ್ವತ್ತು'.
ಗ್ರಾಮ ಪಂಚಾಯಿತಿಗಳಲ್ಲಿ ಕೃಷಿ ಭೂಮಿಗಳಿಗೆ ಪಹಣಿ (ಆರ್ಟಿಸಿ) ಮೂಲಕ ಆಸ್ತಿ ಮಾಲೀಕತ್ವ ದೃಢೀಕರಿಸಲಾಗುತ್ತದೆ. ಆದರೆ ಕೃಷಿಯೇತರ ಭೂಮಿಗಳಲ್ಲಿ ಆರ್ಟಿಸಿ ಒಂದೇ ಮಾನದಂಡ ಆಗುವುದಿಲ್ಲ. ಕೃಷಿಯೇತರ ಭೂಮಿ ಆದ ಮೇಲೆ ಅದು ಬಡಾವಣೆ ಆಗಿದ್ದೇ ಆದರೆ ಅದನ್ನು ನಗರ ಯೋಜನೆ ಪ್ರಾಧಿಕಾರವು ಅನುಮೋದಿಸಬೇಕು. ಇಂತಹ ದಾಖಲೆಗಳನ್ನು ಪರಿಶೀಲಿಸಿ 'ಇ-ಸ್ವತ್ತು' ಪ್ರಮಾಣಪತ್ರ ನೀಡುತ್ತದೆ. ಇದಿದ್ದರೆ ಮಾತ್ರ ನೋಂದಣಿ ಸಾಧ್ಯ.
ಒಂದು ಆಸ್ತಿಗೆ 'ಇ- ಸ್ವತ್ತು' ಪಡೆಯಲು 45 ದಿನ ಅಗತ್ಯವಾಗಿದ್ದು, ಪಿಡಿಒಗಳು ಇದನ್ನು ನೀಡುತ್ತಾರೆ. ಆದರೆ ಪಿಡಿಒಗಳಿಗೆ ಹೊಸ ಪ್ರಕ್ರಿಯೆ ಅಥವಾ ಸಾಫ್ಟ್ವೇರ್ನ ಮಾಹಿತಿ ಇಲ್ಲ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಇದನ್ನು ಅಳವಡಿಸಿಯೇ ಇಲ್ಲ. ಹೀಗಾಗಿ ಆಸ್ತಿಗೆ 'ಇ-ಸ್ವತ್ತು' ಸಿಗುತ್ತಿಲ್ಲ. ನಮಗೆ ಹಣ ತುರ್ತು ಅಗತ್ಯವಾಗಿದ್ದರೂ ಆಸ್ತಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ತೊಂದರೆಯಾಗುತ್ತಿದೆ ಎಂದು ಮಾಗಡಿಯ ರಮೇಶಪ್ಪ ನುಡಿಯುತ್ತಾರೆ.
ನಾವು ನಿವೇಶನಗಳನ್ನು ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ ಮೂರು ತಿಂಗಳಿಂದ ಒಂದು ನೋಂದಣಿಯೂ ಆಗಿಲ್ಲ. ನಾವು ಭೂಮಾಲೀಕರಿಗೆ ಭಾಗಶಃ ಹಣವನ್ನು ನೀಡಿದ್ದೇವೆ. ಉಳಿದ ಹಣ ನೀಡಿ ನೋಂದಣಿಯಾಗಬೇಕು. 'ಇ-ಸ್ವತ್ತು'ನಿಂದ ಪ್ರಕ್ರಿಯೆ ಮುಗಿಯುತ್ತಿಲ್ಲ. ಇದೀಗ ಭೂಮಾಲೀಕರು ಹೆಚ್ಚಿನ ಹಣ ಕೇಳುತ್ತಿದ್ದಾರೆ. ಸಣ್ಣ ಬಡಾವಣೆ ನಿರ್ಮಿಸಲು ಹೂಡಿಕೆ ಮಾಡಿರುವ ನಮ್ಮಂತಹ ಹಲವು ಡೆವೆಲಪರ್ಗಳಿಗೆ ಸಾಕಷ್ಟು ಸಮಸ್ಯೆ ಆಗಿದೆ ಎನ್ನುತ್ತಾರೆ ನೆಲಮಂಗದಲ್ಲಿರುವ ಡೆವಲಪರ್ ಮೂರ್ತಿ.
ಹೈಕೋರ್ಟ್ ಆದೇಶದಂತೆ ಈ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ. ನಗರ ಪ್ರದೇಶಗಳ ಹೊರಭಾಗದಲ್ಲಿ ಇಂತಹ ಅಕ್ರಮ ಬಡಾವಣೆಗಳಿದ್ದವು. ಅವುಗಳಿಗೆ ಸೂಕ್ತವಾದ ದಾಖಲೆಗಳು ಹಾಗೂ ಅನುಮೋದಿತ ನಕ್ಷೆಗಳು, ಸಂಬಂಧಪಟ್ಟ ಪ್ರಾಧಿಕಾರದ ಪ್ರಮಾಣಪತ್ರಗಳು ಇರುತ್ತಿರಲಿಲ್ಲ. ಇಂತಹ ಆಸ್ತಿ ಖರೀದಿಸುವವರು ನಂತರ ಖಾತೆ ಅಥವಾ ಇತರೆ ದಾಖಲೆಗಳನ್ನು ಪಡೆಯಬೇಕಾದಾಗ ತೊಂದರೆ ಅನುಭವಿಸುತ್ತಿದ್ದರು. ಹೀಗಾಗಿ, 'ಇ-ಸ್ವತ್ತು' ಪ್ರಾರಂಭಿಸಲಾಗಿದೆ. ಆರಂಭದ ದಿನದಲ್ಲಿ ವಿಳಂಭವಾಗಬಹುದು. ಕೆಲವೇ ದಿನದಲ್ಲಿ ಎಲ್ಲವೂ ಸರಿಯಾಗುತ್ತದೆ. ಇದೆಲ್ಲ ಖರೀದಿದಾರರ ಹಿತಾಸಕ್ತಿಯಿಂದಲೇ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ವಿವರಿಸುತ್ತಾರೆ.