'ಮೋದಿಯಿಂದ ದೇಶಕ್ಕೆ ಸಮರ್ಥ ನಾಯಕತ್ವ'
ಗೌರಿಬಿದನೂರು: ನರೇಂದ್ರ ಮೋದಿ ಅವರು ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ದೇಶಕ್ಕೆ ಸಮರ್ಥ ನಾಯಕತ್ವ ಸಿಗಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ ತಿಳಿಸಿದರು.
ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದಕ್ಕೆ ಪಟ್ಟಣದ ಗಾಂಧಿವೃತ್ತದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮೋದಿ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ದೇಶಕ್ಕೆ ಅವರ ಆಡಳಿತದ ಅನಿವಾರ್ಯತೆಯಿದೆ.
ಅವರ ಆಯ್ಕೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಹಾಗೂ ಯುವಜನತೆಯಲ್ಲಿ ಸಂಚಲನ ಮೂಡಿಸಿದೆ. ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆ ಹೆಚ್ಚಲಿದೆ ಎಂದರು.
ವಿಜಯೋತ್ಸವದಲ್ಲಿ ಕೋಮುಲ್ ಮಾಜಿ ಅಧ್ಯಕ್ಷ ಎಸ್. ರಮೇಶ್, ಜಿಪಂ ಮಾಜಿ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ, ಪುರಸಭಾ ಸದಸ್ಯ ಮಾರ್ಕೆಟ್ ಮೋಹನ್, ಜೆ.ವಿ. ಹನುಮೇಗೌಡ, ನಾಮಗೊಂಡ್ಲು ಬೇಕರಿ ಜಯರಾಮರೆಡ್ಡಿ, ರಮೇಶ್‌ರಾವ್, ಕೆ.ವಿ.ಕೃಷ್ಣಮೂರ್ತಿ, ಡಿಪಾಳ್ಯ ಶಶಿಧರ್, ಸೊಸೈಟಿ ರಾಮಾಂಜಿ, ಜಯಣ್ಣ, ಪ್ರಧಾನ ಕಾರ್ಯದರ್ಶಿ ಮುರಳಿಧರ್ ಮುಂತಾದವರು ಉಪಸ್ಥಿತರಿದ್ದರು.