'ಯುಪಿಎ ಕಾರ್ಯಕ್ರಮ ಜನರಿಗೆ ತಿಳಿಸಿ'
ಚಿಂತಾಮಣಿ: ಕೇಂದ್ರ ಸರ್ಕಾರದ ಮಹತ್ವವಾದ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಿಳಿಸಿ ಕೇಂದ್ರದಲ್ಲಿ ಮತ್ತೊಮ್ಮೆ ಯುಪಿಎ ಅಧಿಕಾರಕ್ಕೆ ಬರಲು ಶ್ರಮಿಸಬೇಕೆಂದು ಎಐಸಿಸಿ ಕಾರ್ಯದರ್ಶಿ ಡಾ. ಚಲ್ಲಕುಮಾರ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಪಟ್ಟಣದ ಹೊರವಲಯದ ಬೂರಗಮಾಕಲಹಳ್ಳಿಯಲ್ಲಿರುವ ಸಂಜೀವ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಚಿಂತಾಮಣಿ ಮತ್ತು ಮುಂಗಾನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಕೈಗೊಂಡಿರುವ ಹಲವಾರು ಜನಪರ ಕಾರ್ಯಕ್ರಮಗಳನ್ನು ಜನರು ಗುರುತಿಸಿ 10 ವರ್ಷದ ಕಾಲ ಪ್ರಧಾನಮಂತ್ರಿ ಡಾ. ಮನಮೋಹನ್ಸಿಂಗ್ ಆಡಳಿತ ಮಾಡಲು ಕೈ ಬಲಪಡಿಸಿದ ಪರಿಣಾಮ ರಾಷ್ಟ್ರದಲ್ಲಿ ಅಭಿವೃದ್ಧಿ ಕೆಲಸಗಳು ಮಾಡಲು ಸಾಧ್ಯವಾಯಿತು ಎಂದರು.
ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕಾಗಿ ಹಲವಾರು ರಾಷ್ಟ್ರ ನಾಯಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಪಕ್ಷದ ಹಿತಕ್ಕಾಗಿ ದೀನ- ದಲಿತರ ಅಲ್ಪಸಂಖ್ಯಾತರ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವ ಕಾಂಗ್ರೆಸ್ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಮುಖಂಡರಾದ ವಾಣಿಕೃಷ್ಣಾರೆಡ್ಡಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ಸೂಚಿಸಿದರು.
ನಂತರ ವಾಣಿಕೃಷ್ಣಾರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಬೂತ್ ಮಟ್ಟದಿಂದ ಪಟ್ಟಣದವರೆಗೂ ಶ್ರಮಿಸಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಅಧಿಕ ಮತಗಳಿಂದ ಗೆಲ್ಲಿಸಲು ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಬೇಕೆಂದು ಹೇಳಿದರು.
ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷ ಬಿಸ್ಸೇಗೌಡ, ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ನಂದನವನ ಶ್ರೀರಾಮರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲಾ ವೀಕ್ಷಕ ಸಂಪಂಗಿ, ಮುಖಂಡರಾದ ಚೌಡರೆಡ್ಡಿ, ಆನೂರು ಸುಬ್ಬಣ್ಣ, ರಾಯಲ್ ರಾಮಕೃಷ್ಣ, ಗುಡಿರೆಡ್ಡಿ, ವಕೀಲ ಇಬ್ರಾಹಿಂ, ಅಲ್ತಾಫ್ ಪಾಷಾ, ಮುದ್ದುಕೃಷ್ಣ ಯಾದವ್, ಕೈವಾರ ಮಂಜುನಾಥ್ರೆಡ್ಡಿ, ಕಲೀಂ, ಚೊಕ್ಕರೆಡ್ಡಿ, ಖಾದರ್, ಗ್ಯಾಸ್ ಶ್ರೀನಿವಾಸ್, ಮಮತಾ ಮೂರ್ತಿ, ಕುರುಬೂರು ನಟರಾಜ್, ವೆಂಕಟಸ್ವಾಮಿ, ಸೀಕಲ್ ರಾಜಕುಮಾರ್, ಅನ್ವರ್ ಸೇರಿದಂತೆ ಇತರರು ಭಾಗವಹಿಸಿದ್ದರು.