ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವರುಣನ ಆರ್ಭಟ; ಶೇಂಗಾ ಸಂಕಟ

Mainashree
Updated On : 14 Sept 2013, 11:45 am

ಕನ್ನಡಪ್ರಭ ವಾರ್ತೆ  ಕೋಲಾರ  ಸೆ.14
ಎಣ್ಣೆಕಾಳು ಬೆಳೆಗಳಲ್ಲಿ ಒಂದಾದ ಶೇಂಗಾ(ನೆಲಗಡಲೆ) ಜಿಲ್ಲೆಯ ರೈತರ ಪಾಲಿಗೆ ಈ ಬಾರಿ ಕಣ್ಣಿರಾಗುವ ಸಾಧ್ಯತೆಯೇ ಹೆಚ್ಚು.
ಜಿಲ್ಲೆಯಲ್ಲಿ ನೆಲಗಡಲೆ ಬಿತ್ತನೆಯ ಗುರಿ ಇದ್ದದ್ದು 11528 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ. ಮಳೆಯ ಕೊರತೆಯಿಂದಾಗಿ ರೈತರು 75೤00 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲು ಸಾಧ್ಯವಾಯಿತು.
ಆದರೆ, ನೆಲಗಡಲೆ ಬಿತ್ತನೆ ಪ್ರದೇಶದಲ್ಲಿ ಕಾಯಿ ಅಭಿವೃದ್ಧಿಗೊಳ್ಳುತ್ತಿರುವಾಗ ಮಳೆ ಬೀಳುತ್ತಿರುವುದರಿಂದ ರೈತರು ಸಂಕಟಕ್ಕೆ ಸಿಲುಕುವಂತಾಗಿದೆ. ನೆಲಗಡಲೆ ಗಿಡಗಳಲ್ಲಿ ಕಾಯಿಗಳ ಬೆಳವಣಿಗೆ ಕಡಿಮೆ ಆಗುತ್ತದೆ. ಇಳುವರಿ ಕುಸಿತವಾಗುವುದರಿಂದ ನಿರೀಕ್ಷೆ ಮಾಡಿದಷ್ಟು ಹಣ ಕೈಗೆ ಸಿಗಲ್ಲವೆಂಬುದು ರೈತರ ಅಳಲು.
ಬಂಗಾರಪೇಟೆಯಲ್ಲಿ 1493 ಹೆಕ್ಟೇರ್, ಕೋಲಾರ- 294, ಮಾಲೂರು- 253, ಮುಳಬಾಗಿಲು- 7623 ಹಾಗೂ ಶ್ರೀನಿವಾಸಪುರ ತಾಲೂಕಿನಲ್ಲಿ 1865 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬೆಳೆ ಬೆಳೆಯಲಾಗುತ್ತಿತ್ತು. ಪ್ರಸ್ತುತ 7500 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗಿದೆ.
ಜಮೀನುಗಳಲ್ಲಿ ಬಿತ್ತನೆ ಕಾರ್ಯ ಖಾಲಿ ಉಳಿಸಿಕೊಂಡ ರೈತರು ಪ್ರಸ್ತುತ ಬೀಳುತ್ತಿರುವ ಮಳೆಯಿಂದ ಶೇಂಗಾ, ಸೂರ್ಯಕಾಂತಿ, ಕುಸುಮೆ, ಹರಳು, ಎಳ್ಳು, ಅಗಸೆ, ಹುಚ್ಚೆಳು ಬಿತ್ತನೆ ಮಾಡಬಹುದಾಗಿದೆಯಾದರೂ ಈ ಹಿಂದೆ ಬಿತ್ತನೆ ಮಾಡಿ ಕಾಯಿ ಬಿಡುವ ಹಂತ ತಲುಪಿರುವ ಎಣ್ಣೆ ಕಾಳುಗಳನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೆ ಕಷ್ಟವಾಗಿರುವುದರಿಂದ ರೈತರು ನಷ್ಟದ ಜೊತೆ ರಾಜಿ ಆಗುವುದು ಅನಿವಾರ್ಯವಾಗಿದೆ.
ಹುರುಳಿಗೆ ಒಳ್ಳೆಯ ಕಾಲ: ದ್ವಿದಳ ಧಾನ್ಯವಾದ ಹುರುಳಿಗೆ ಪ್ರಸ್ತುತ ಸುರಿಯುತ್ತಿರುವ ಮಳೆ ವರದಾನವೆಂದು ಕೃಷಿ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗದೆ ಖಾಲಿ ಉಳಿದಿರುವ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆಯಬಹುದಾಗಿದೆ. ಮೇವಿನ ಜೋಳ ಬೆಳೆಯುವುದಕ್ಕೂ ಇದು ಸಕಾಲವಾಗಿದೆ. ಜಿಲ್ಲೆಯಲ್ಲಿ ಸುಮಾರು 8500 ಹೆಕ್ಟೇರ್ ಪ್ರದೇಶದಲ್ಲಿ ಹುರುಳಿ ಬಿತ್ತನೆಯ ಗುರಿ ಹೊಂದಲಾಗಿದೆ. ಮುಂಗಾರು ಹಂಗಾಮಿನಲ್ಲಿ ಅನೇಕ ರೈತರು ಹುರುಳಿ ಬಿತ್ತನೆ ಮಾಡಿದ್ದರಾದರೂ ಮಳೆ ಕೈಕೊಟ್ಟಿದ್ದರಿಂದ ಕಂಗಾಲು ಆಗಿದ್ದರು. ಈಗ ಮಳೆ ಆಗುತ್ತಿರುವುದರಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲೆಯಲ್ಲಿ ಏಕದಳ ಮತ್ತು ದ್ವಿದಳ ಹಾಗೂ ಎಣ್ಣೆಕಾಳು ಬೆಳೆಗಳು ಸೇರಿ ಒಟ್ಟು ಬಿತ್ತನೆ ಪ್ರದೇಶ 1.02ಲಕ್ಷ ಹೆಕ್ಟೇರ್. ಬಿತ್ತನೆ ಆಗಿರುವುದು 77095(ಶೇ.76)ಹೆಕ್ಟೇರ್ ಪ್ರದೇಶದಲ್ಲಿ. ಈ ಪೈಕಿ ನೆಲಗಡಲೆ ನೆಲಕಚ್ಚುವ ಸಾಧ್ಯತೆಯೇ ಹೆಚ್ಚು. ಏಕದಳ ಧಾನ್ಯ 72 ಸಾವಿರ ಹೆಕ್ಟೇರ್ ಪೈಕಿ 58,600 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ 15500 ಹೆಕ್ಟೇರ್ ಪೈಕಿ 10800 ಹೆಕ್ಟೇರ್ ಪ್ರದೇಶದಲ್ಲಿ ಹಾಗೂ ಎಣ್ಣೆ ಕಾಳು 14100 ಹೆಕ್ಟೇರ್ ಪೈಕಿ 7500 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ.
ಮಳೆಯ ಪ್ರಮಾಣ: ಜಿಲ್ಲೆಯಲ್ಲಿ ಸೆಪ್ಟೆಂಬರ್ 13ರವರೆಗೆ 724.4 ಮಿಮೀ ಮಳೆಯಾಗಿದೆ. ವಾಡಿಕೆ ಮಳೆ 726 ಮಿಮೀ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 245.3 ಮಿಮೀ ಮಳೆಯಾಗಿತ್ತು. ಈ ತಿಂಗಳು ಇನ್ನು 16 ದಿನ ಬಾಕಿ ಉಳಿದಿದ್ದು, ಉತ್ತಮ ಮಳೆ ನಿರೀಕ್ಷೆ ಮಾಡಲಾಗಿದೆ.
ಈ ತಿಂಗಳಲ್ಲಿ ಬಂಗಾರಪೇಟೆ ತಾಲೂಕಿನಲ್ಲಿ ಸೆ. 13ರವರೆಗೆ 183.6 ಮಿಮೀ, ಕೋಲಾರ- 123.2, ಮಾಲೂರು-117.8, ಮುಳಬಾಗಿಲು-144.8 ಹಾಗೂ ಶ್ರೀನಿವಾಸಪುರ ತಾಲೂಕಿನಲ್ಲಿ 155 ಮಿಮೀ ಮಳೆಯಾಗಿದೆ.
ಶನಿವಾರ ಸಹ ಮಳೆ ಮುಂದುವರಿದಿದ್ದು, ಸೆ.16 ರಿಂದ ಆಶ್ಲೇಷಾ, ಮಖಾ ಹಾಗೂ ಪೂಫ ಮಳೆಯಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಕೊಂಚ ಚೈನತ್ಯ ಮೂಡುವ ಭರವಸೆಯನ್ನು ರೈತರು ಹೊಂದಿದ್ದಾರೆ.
 ಪಾ.ಶ್ರೀ.ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement