ಎತ್ತಿನಹೊಳೆ ಯೋಜನೆ ಕೈಗೊಂಡರೆ ತಕ್ಕ ಪಾಠ
ಕ.ಪ್ರ.ವಾರ್ತೆ ಬಾಗೇಪಲ್ಲಿ ಸೆ. 15
ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆ ಕೈಬಿಟ್ಟು ಎತ್ತಿನಹೊಳೆ ಯೋಜನೆಗೆ ಗುದ್ದಲಿ ಪೂಜೆ ಮಾಡುವ ಕೆಲಸಕ್ಕೆ ಕೈಹಾಕಿದರೆ ಮುಂಬರುವ 2014ರ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಅಡಿಗಲ್ಲು ಹಾಕಬೇಕಾಗುತ್ತೆ ಹುಷಾರ್ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ರೈತರ ಸಮಾವೇಶದಲ್ಲಿ ಮಾತನಾಡಿ, ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರು ಮುಂಬರುವ 2014ರ ಚುನಾವಣೆಯನ್ನು ಗುರಿಯನ್ನಾಗಿಸಿಕೊಂಡು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆಯನ್ನು ದಾರಿ ತಪ್ಪಿಸುವ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆಂದು ಆರೋಪಿಸಿದರು.
ಕಳೆದ ಸಮಾರು ವರ್ಷಗಳಿಂದ ಅವಿಭಜಿತ ಕೋಲಾರ- ಚಿಕ್ಕಬಳ್ಳಾಪುರ ಸೇರಿದಂತೆ ಸುಮಾರು 7 ಜಿಲ್ಲೆಗಳಲ್ಲಿ ಸಮರ್ಪಕ ಮಳೆಯಿಲ್ಲದೆ ಕುಡಿಯುಲು ಹಾಗೂ ಕೃಷಿಗೆ ಸಮರ್ಪಕವಾದ ಶಾಶ್ವತ ನೀರಿನ ವ್ಯವಸ್ಥೆ ಇಲ್ಲದೆ ಈ ಜಿಲ್ಲೆಗಳ ರೈತರು ಹಾಗೂ ಜನಸಾಮಾನ್ಯರು ನಗರ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇನ್ನು ಕೆಲವೆ ವರ್ಷಗಳಲ್ಲಿ ಈ ಜಿಲ್ಲೆಗಳು ಮರುಭೂಮಿಗಳಾಗಿ ಪರಿವರ್ತನೆಯಾಗುವ ಪರಿಸ್ಥಿತಿ ಇದ್ದು, ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿ ರೈತ ಸಂಘ ಹೋರಾಟ ಮಾಡುತ್ತಿದೆ. ಆದರೆ, ಪರಮಶಿವಯ್ಯ ವರದಿ ಜಾರಿಗೊಳಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆಯೆಂದು ಆರೋಪಿಸಿದರು.
ಹಳ್ಳಿ, ಪಟ್ಟಣ ಮತ್ತು ನಗರ ಎಂಬ ಭೇದಭಾವವಿಲ್ಲದೆ ಸಮಾನವಾಗಿ ವಿದ್ಯುಚ್ಚಕ್ತಿ ನೀತಿ ಜಾರಿಗೊಳಿಸಬೇಕು, ರಸಗೊಬ್ಬರ ಬೆಲೆ ನಿಯಂತ್ರಿಸಬೇಕು, ಸಹಕಾರಿ ಸಂಘಗಳು ಹಾಗೂ ಬ್ಯಾಂಕ್ಗಳಲ್ಲಿ ರೈತರು ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕು ಶಾಖೆಯ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷ ಜಡಿಯಪ್ಪ ದೇಸಾಯಿ, ಕಾರ್ಯದರ್ಶಿ ಅಬ್ಬಣಿ ಶಿವಣ್ಣ ಮಾತನಾಡಿದರು.
ರೈತ ಮುಖಂಡರಾದ ಪ್ರಸನ್ನ, ರವಿ, ರಾಜಪ್ಪ, ಆರ್. ಬೈರೆಗೌಡ, ಬೈಪ್ಪರೆಡ್ಡಿ, ಲಕ್ಷ್ಮೀನಾರಾಯಣ, ಬಿ.ವಿಜಯರಾಮರೆಡ್ಡಿ, ಕೆ.ವಿವೆಂಕಟರವಣಪ್ಪ, ಎಂ.ಎನ್. ಗಂಗಿರೆಡ್ಡಿ ಮುಂತಾದವರು ಭಾಗವಹಿಸಿದ್ದರು.