ಕಠಿಣ ಪರಿಶ್ರಮವೇ ಸಾಧನೆಗೆ ದಾರಿ: ಡಾ. ಸುಧಾಕರ್
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಸೆ. 15
ಪ್ರತಿವರ್ಷದಂತೆ ನಗರದ ಸರ್ ಎಂ. ವಿಶ್ವೇಶ್ವರಯ್ಯ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕಿನ ಮುದ್ದೇನಹಳ್ಳಿಗೆ ತೆರಳಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿದರು.
ನಗರದಿಂದ ಬ್ಯಾಂಡ್ಸೆಟ್ ಮತ್ತು ಪಥಸಂಚಲನ ತಂಡದೊಂದಿಗೆ ಸರ್ ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರವನ್ನು ಮುತ್ತಿನ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ನಡೆಸಲಾಯಿತು.
ನಂತರ ಮುದ್ದೇನಹಳ್ಳಿಯಲ್ಲಿರುವ ಸರ್ ಎಂವಿ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. ಶಾಸಕ ಡಾ. ಕೆ. ಸುಧಾಕರ್ ಮತ್ತು ರಾಜ್ಯ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಡಿ. ಸತ್ಯಮೂರ್ತಿ ಸರ್ ಎಂವಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಗುಣಗಾನ: ಕಾಡುವ ಬಡತನದ ನಡುವೆಯೂ ಶಿಕ್ಷಣ ಪಡೆದು ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು ಜನಪಯೋಗಿ ಯೋಜನೆಗಳನ್ನು ಜಾರಿಗೆ ತಂದು ಇಡೀ ವಿಶ್ವದ ಗಮನ ಸೆಳೆದರು. ಇವರನ್ನು ವಿದ್ಯಾರ್ಥಿಗಳು ಮಾದರಿಯಾಗಿ ತೆಗೆದುಕೊಳ್ಳಬೇಕೆಂದು ಶಾಸಕ ಡಾ. ಕೆ. ಸುಧಾಕರ್ ಮನವಿ ಮಾಡಿದರು.
ವಿಶ್ವೇಶ್ವರಯ್ಯನವರಿಗೆ ಬಾಲ್ಯದಲ್ಲಿದ್ದ ಕನಸು ಎಲ್ಲರಿಗೂ ಗೊತ್ತಿದೆ. ಅವರು ಅಳವಡಿಸಿಕೊಂಡ ಮಾರ್ಗ, ಜೀವನ ಕ್ರಮ ನಮಗೆಲ್ಲಾ ಕಲಿಯುವ ವಿಧಾನ. ಮನೆಯಲ್ಲಿ ದೀಪ ಇಲ್ಲದೆ ಬೀದಿದೀಪದಲ್ಲಿ ಓದಿ ಬೆಳೆದವರು. ಇಂದಿನಂತೆ ಒಂದು ಕಿಮೀ ದೂರದಲ್ಲಿ ಶಾಲಾ- ಕಾಲೇಜು ಇದ್ದ ದಿನವಲ್ಲ. ಸರ್ ಎಂವಿ ಅವರು ಚಿಕ್ಕಬಳ್ಳಾಪುರದವರೆಗೆ ನಡೆದುಕೊಂಡು ಬಂದು ಶಾಲೆಯಲ್ಲಿ ಓದುತ್ತಿದ್ದರು. ಬಡತನದ ನಡುವೆಯೂ ಉತ್ತಮ ಶಿಕ್ಷಣ ಪಡೆದುಕೊಂಡು ಸಾಧಕರಾದರು. ಮೈಸೂರು ಸಾಮ್ರಾಜ್ಯದ ದಿವಾನರಾದರು. ತಮ್ಮ ಪ್ರತಿಭೆಯಿಂದ ಭಾರತ ರತ್ನ, ಸರ್ ಪ್ರಶಸ್ತಿ ಪಡೆದುಕೊಂಡರು ಎಂದರು.
ಕಠಿಣ ಪರಿಶ್ರಮವೇ ಸಾಧನೆಗೆ ದಾರಿ. ಇದರಲ್ಲಿ ಸಾಗಿದಾಗ ನಮ್ಮ ಬದುಕು ಹಸನಾಗುತ್ತದೆ. ಶ್ರೀಮಂತ ಉತ್ತಮ ವ್ಯಕ್ತಿ ಅನ್ನಲಾಗದು. ಪರಿಪೂರ್ಣ ವ್ಯಕ್ತಿ ನಿಜವಾದ ಸಾಧಕರೆನಿಸುತ್ತಾರೆ ಎಂದ ಅವರು, ಬದುಕಿನಲ್ಲಿ ಎಷ್ಟು ಜನರಿಗೆ ಅನುಕೂಲವಾಗುವ ಕಾರ್ಯ ಮಾಡಿದ್ದೀರಿ, ಆ ಮೂಲಕ ಯಾರ ಭವಿಷ್ಯಕ್ಕೆ ಬೆಳಕಾಗಿದ್ದೀರಿ ಅನ್ನುವುದರ ಮೇಲೆ ನಿಮ್ಮ ಹಿರಿತನ ನಿರ್ಧಾರವಾಗುತ್ತದೆ. ಉತ್ತಮ ಕೆಲಸ ಮಾಡುವ ಮೂಲಕ ದೊಡ್ಡ ವ್ಯಕ್ತಿಗಳೆಂದು ನೀವೆಲ್ಲಾ ಕರೆಸಿಕೊಳ್ಳುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಡಿ. ಸತ್ಯಮೂರ್ತಿ, ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ಸರ್ ಎಂ. ವಿಶ್ವೇಶ್ವರಯ್ಯ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎ.ವಿ. ಭೈರೇಗೌಡ, ವೆಂಕಟಪತಿರಾಜು, ರಾಮಕೃಷ್ಣ, ದೇವರಾಜ್, ಪುರದಗಡ್ಡೆ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.