ಚುಟುಕು ಪರಿಣಾಮಕಾರಿ ಸಾಹಿತ್ಯ: ಡಾ. ಅರಸ್
ಕ.ಪ್ರ.ವಾರ್ತೆ ಕೋಲಾರ ಸೆ. 15
ಚುಟುಕು ಪ್ರತಿಯೊಬ್ಬರ ಬದುಕಿನ ಲಾಲಿತ್ಯ ಹಾಗೂ ಪ್ರಜ್ಞಾವಂತಿಕೆ ಮೂಡಿಸುವ ಪರಿಣಾಮಕಾರಿ ಕಿರು ಸಾಹಿತ್ಯ. ಚುಟುಕುಗಳು ಯಾರ ಸ್ವತ್ತು ಅಲ್ಲ. ಜನಸಾಮಾನ್ಯರ ಮನಸ್ಸಿನ ಭಾವನೆಯಿಂದ ಅರಳುವಂತಹದ್ದು ಎಂದು ಚುಟುಕು ಸಾಹಿತ್ಯ ಪರಿಷತ್ನ ರಾಜ್ಯ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಚುಟುಕು ಸೌರಭ ಕಾವ್ಯೋತ್ಸವವನ್ನು ಚುಟುಕು ಚಿತ್ತಾರ ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಕೆಲಸ ಮಾಡುವ ವ್ಯಕ್ತಿಗಳಿಂದ ಚುಟುಕು ಸಾಹಿತ್ಯಕ್ಕೆ ನ್ಯಾಯ ಸಿಗುತ್ತಿಲ್ಲ, ಮಹಾಕಾವ್ಯ ಬರೆದಿರುವೆನೆಂದು ಬೀಗುವರಿಂದಲೂ ಸಾಹಿತ್ಯ ಲೋಕಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗುತ್ತಿಲ್ಲ. ಹಾಗಂತ ಚುಟುಕು ಕವಿಗಳು ನಿರಾಸೆಯಿಂದ ಬಳಲುವ ಅಗತ್ಯವಿಲ್ಲ, ಚುಟುಕು ಸಾಹಿತ್ಯವೇ ಜನರ ಮನದಲ್ಲಿ ಹೆಚ್ಚು ಕಾಲ ಉಳಿಯುವಂತಹದ್ದು ಎಂದರು.
ಕಸಾಪ ಸ್ಪರ್ಧಿಯಲ್ಲ: ಚುಟುಕು ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ಪರ್ಧಿಯಲ್ಲ. ಶತಮಾನೋತ್ಸವ ಸಂಭ್ರಮದಲ್ಲಿರುವ ಕಸಾಪ 25 ವರ್ಷವನ್ನಾಚರಿಸಿಕೊಳ್ಳುತ್ತಿರುವ ಚುಟುಕು ಸಾಹಿತ್ಯ ಪರಿಷತ್ತಿನ ಮಾತೃ ಸಂಸ್ಥೆ. ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸಿ ಸಾಹಿತ್ಯ ಕ್ಷೇತ್ರದಲ್ಲಿ ಚುಟುಕು ಕವಿಗಳು ತಮ್ಮನ್ನು ತೋಡಗಿಸಿಕೊಂಡಿದ್ದಾರೆಂದು ನುಡಿದರು.
ವ್ಯತ್ಯಾಸ ಹುಡುಕಾಟ: ಕಾರ್ಯಕ್ರಮದ ಸರ್ವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ನ ಅಧ್ಯಕ್ಷ ಗಂಗಾಧರ ಕೂಡ್ಲಿ ಮಾತನಾಡಿ, ಚುಟುಕು ಮತ್ತು ಕಾವ್ಯದ ನಡುವಿನ ವ್ಯತ್ಯಾಸವೇನು ಎಂಬುದನ್ನು ಅನೇಕ ಶತಮಾನಗಳಿಂದ ಕಾವ್ಯ ಮೀಮಾಂಸಕರು ಉತ್ತರ ಹುಡುಕುತ್ತಿದ್ದಾರೆ. ಕಾವ್ಯ ಹೀಗೆಯೇ ಇರಬೇಕು, ಅದರ ವ್ಯಾಖ್ಯಾನ ಹೀಗೆಯೇ ಇರಬೇಕು ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಹೀಗಾಗಿ ಕಾವ್ಯ ಹುಟ್ಟುತ್ತಲೇ, ಕಟ್ಟುತ್ತಲೇ ಇದೆ ಎಂದು ನುಡಿದರು.
ಸಾಹಿತ್ಯದ ಯಾವುದೇ ಪ್ರಕಾರವನ್ನು ಓದುವ ಮೊದಲು ಭಾಷೆಯ ಪರಂಪರೆ ಏನಿದೆ ಎಂಬ ಪರಿಜ್ಞಾನ ಇರಬೇಕು. ಚುಟುಕುಗಳು ಚಿಕ್ಕದಾಗಿದ್ದರೂ ದೊಡ್ಡ ಮಹಾಕಾವ್ಯವನ್ನು ಶಬ್ದ, ಸಾಲುಗಳಲ್ಲಿ ಹೇಳುವ ಸಾಮರ್ಥ್ಯ ಪಡೆದಿದೆ. ಚುಟುಕಗಳು ಸಂಕ್ಷಿಪ್ತ ಪ್ರಕಾರದ ಕಾವ್ಯದ ರೂಪ ಎಂದು ಹೇಳಿದರು.
ಪುಸ್ತಕ ಬಿಡುಗಡೆ: ಮೈಸೂರಿನ ಕೌಸ್ತುಭ ಮಾಸ ಪತ್ರಿಕೆಯ ಸಂಪಾದಕಿ ರತ್ನ ಹಾಲಪ್ಪಗೌಡ ಅವರು ಚುಟುಕು ಸೌರಭ ಸಂಕಲನ ಬಿಡುಗಡೆಗೊಳಿಸಿದರು. ರಮೇಶ ಭಟ್ಟ ಕಲ್ಲೂರು ರಚಿಸಿರುವ ಭಟ್ಟನಾಥ ಶತಕ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್ ಬಿಡುಗಡೆಗೊಳಿಸಿದರು. ಎಂ. ನಾರಾಯಣಸ್ವಾಮಿ ರಚಿಸಿರುವ ಸುನಾದ ಕೃತಿಯನ್ನು ವೃತ್ತ ನಿರೀಕ್ಷಕ ಕೆ.ಎನ್. ರಮೇಶ್ ಬಿಡುಗಡೆಗೊಳಿಸಿ ಮಾತನಾಡಿದರು.
ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಗೋಕುಲ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕಾರ್ಯಾಧ್ಯಕ್ಷ ಅರವಿಂದ ಭೀ ಕಟ್ಟಿ ಆಶಯ ನುಡಿಗಳನ್ನಾಡಿದರು. ಜಿ.ಟಿ. ರಾಮಚಂದ್ರಪ್ಪ, ಮಹೇಶ್ ರಾವ್ ಕದಂ, ಶರಣಪ್ಪ ಗಬ್ಬೂರು, ಕುಂತೂರು ಚಂದ್ರಪ್ಪ, ಕಾಳಿದಾಸ, ಲಕ್ಷ್ಮಣ್ ಇದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕಳೆದ ನಾಲ್ಕು ದಶಕಗಳಿಂದ ಜಿಲ್ಲೆಯಲ್ಲಿ ನಾಡು-ನುಡಿಯ ಸೇವೆ ಸಲ್ಲಿಸಿ ಮೈಸೂರಿನಲ್ಲಿ ನೆಲೆಸಲು ತೆರಳುತ್ತಿರುವ ಜಿಲ್ಲಾ ಚುಕುಟು ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷ, ಕಲಾವಿದ ಅರವಿಂದ ಭೀ ಕಟ್ಟಿ ಹಾಗೂ ಅನುರಾಧಾ ಕೆಟ್ಟಿ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಚುಟುಕು ಸಾಹಿತ್ಯದಲ್ಲಿ ಹಾಸ್ಯ ಪ್ರಜ್ಞೆ ಕುರಿತು ಉಪನ್ಯಾಸ, ಚುಟುಕು ಸೌರಭ ಕಾವ್ಯಗೋಷ್ಠಿಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಕವಿಗಳು ತಮ್ಮ ಚುಟುಕನ್ನು ವಾಚಿಸಿದರು.
ಗೌರವಾಧ್ಯಕ್ಷ ಡಾ. ಕೆ.ಎಂ.ಜೆ. ಮೌನಿ ಸ್ವಾಗತಿಸಿದರು. ರವೀಂದ್ರ ಸಿಂಗ್ ನಿರೂಪಿಸಿದರು. ಪಿ. ನಾರಾಯಣಪ್ಪ ವಂದಿಸಿದರು.