ಬಯಲುಸೀಮೆ ದಾಹ ನೀಗಲು ಮತ್ತೊಂದು ಪ್ಲಾನ್
ಕನ್ನಡಪ್ರಭ ವಾರ್ತೆ, ಕೋಲಾರ, ಸೆ.15
ಪಶ್ಚಿಮಘಟ್ಟಗಳಿಂದ ಮಳೆಗಾಲದಲ್ಲಿ ಹರಿದು ಸಮುದ್ರ ಸೇರುವ ನೀರನ್ನು ಬಯಲುಸೀಮೆ ಜಿಲ್ಲೆಗಳಿಗೆ ನೀಡಲು ಡಾ.ಪರಮಶಿವಯ್ಯ ರೂಪಿಸಿರುವ ಯೋಜನೆಯ ಅನುಷ್ಠಾನಕ್ಕೆ ಸಾಕಷ್ಟು ಬಾರಿ ಒತ್ತಾಯಿಸಿದ್ದ ಜಿಲ್ಲೆಯವರೇ ಆದ ಲಂಡನ್ ನಿವಾಸಿ ಡಾ. ಮಧುಸೀತಪ್ಪ ಸದರಿ ಯೋಜನೆ ಅನುಷ್ಠಾನಕ್ಕೆ ಮುನ್ನವೇ ಮತ್ತೊಂದು ಹೊಸ ಯೋಜನೆಗೆ ಸಂಬಂಧಿಸಿದ ವರದಿಯನ್ನು ರಾಜ್ಯ ಸರ್ಕಾರದ ಮುಂದೆ ಮಂಡಿಸಿದ್ದಾರೆ.
ಡಾ. ಪರಮಶಿವಯ್ಯನವರ ವರದಿ ಜಾರಿಯ ಬಗ್ಗೆ ಅನುಮಾನ ಇರುವುದರಿಂದ ಹೊಸ ಯೋಜನೆಯ ಬಗ್ಗೆ ಡಾ. ಮಧುಸೀತಪ್ಪ ಚಿಂತಿಸಲು ಕಾರಣವಾಗಿದೆ.
2013 ಜುಲೈ ತಿಂಗಳಲ್ಲಿ ಡಾ. ಮಧುಸೀತಪ್ಪ ಬೆಂಗಳೂರು ಹಾಗೂ ಸುತ್ತಮುತ್ತಲಿನ 27 ಬರಪೀಡಿತ ತಾಲೂಕುಗಳಿಗೆ ಕುಡಿಯುವ ನೀರು ಮತ್ತು ಅಂರ್ತಜಲ ಸಮಸ್ಯೆ ನಿವಾರಿಸಲು ಅಘನಾಶಿನಿ ನದಿ ಹಾಗೂ ಲಿಂಗನಮಕ್ಕಿ ಜಲಾಶಯದಿಂದ ನೀರು ಪೂರೈಸುವ ವಿನ್ಯಾಸ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ್ದರು. ಇದಕ್ಕೆ ಪೂರಕವಾಗಿ ಬೃಹತ್ ನೀರಾವರಿ ಸಚಿವರಾದ ಎಂ.ಬಿ. ಪಾಟೀಲರು ಸ್ಪಂದಿಸಿ ಡಾ. ಮಧುಸೀತಪ್ಪ ಅವರಿಗೆ ತಮ್ಮ ವಿನ್ಯಾಸ ವರದಿಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಣೆ ನೀಡಲು ಆಹ್ವಾನಿಸಿದರು. ಆಗಸ್ಟ್ 12ರಂದು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ಉಸ್ತುವಾರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತಮ್ಮ ಪ್ರಾತ್ಯಕ್ಷಿಕೆಯ ಮೂಲಕ ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಅಧಿಕಾರಿಗಳು ಹಾಗೂ ನೀರಾವರಿ ಇಲಾಖೆಯ ಎಂಜಿನಿಯರ್‌ಗಳ ಗಮನ ಸೆಳೆದಿದ್ದಾರೆ.
ವಿನ್ಯಾಸ ವರದಿಗೆ ಪೂರಕವಾಗಿ ಉನ್ನತ ಅಧಿಕಾರಿಗಳು ಈ ವರದಿಯ ಬಗ್ಗೆ ಅಧ್ಯಯನ ವರದಿ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಗಮದ ಯೋಜನಾ ತನಿಖಾ ವಿಭಾಗಕಕ್ಕೆ ವಹಿಸಲು ನಿರ್ಧರಿಸಲಾಗಿದೆ.
ವರದಿಯ ಮುಖ್ಯಾಂಶಗಳು: ಯಾವುದೇ ಹೊಸ ಸರೋವರ ನಿರ್ಮಿಸದೇ, ಅರಣ್ಯನಾಶ ಮಾಡದೇ, ಪರಿಸರಕ್ಕೆ ಹಾಗೂ ವಿದ್ಯುಚ್ಛಕ್ತಿಗೆ ತೊಂದರೆಯಾಗದೆ 50 ಟಿಎಂಸಿಯಷ್ಟು ನೀರನ್ನು ಪ್ರತಿವರ್ಷ 27 ಬರಪೀಡಿತ ತಾಲೂಕುಗಳು ಹಾಗೂ ಬೆಂಗಳೂರಿಗೆ ಹರಿಸುವುದು. ಶರಾವತಿ, ಅಘನಾಶಿನಿ ಹಾಗು ಭೇಡ್ತಿ ನದಿಗಳಿಂದ ಪ್ರತಿವರ್ಷ 550 ಟಿಎಂಸಿಯಷ್ಟು ನೀರು ಅರಬೀ ಸಮುದ್ರ ಸೇರುತ್ತಿದೆ. ಲಿಂಗನಮಕ್ಕಿ ಜಲಾಶಯದಿಂದ ಪ್ರತಿವರ್ಷ ಸರಾಸರಿ 180 ಟಿಎಂಸಿಯಷ್ಟು ನೀರು, ವಿದ್ಯುತ್ ಉತ್ಪಾದನೆಯಾದ ನಂತರ ಸಮುದ್ರ ಸೇರುತ್ತಿದೆ. ಲಿಂಗನಮಕ್ಕಿ ನೀರು ವಿದ್ಯುತ್ ಉತ್ಪಾದನೆ ಬಿಟ್ಟರೆ ಕುಡಿಯುವುದಕ್ಕೆ ಅಥವಾ ನೀರಾವರಿಗಾಗಲಿ ಬಳಕೆಯಾಗುತ್ತಿಲ್ಲ. ಆದರೆ, ಲಿಂಗನಮಕ್ಕಿಗೆ ಹತ್ತಿರದಲ್ಲೇ ಇರುವ ಆಘನಾಶಿನಿ ನದಿಯ 160 ಟಿಎಂಸಿ ನೀರು ಹಾಗೂ ಭೇಡ್ತಿ ನದಿಯ 180 ಟಿಎಂಸಿ ನೀರು ವಿದ್ಯುಚ್ಛಕ್ತಿ ಉತ್ಪಾದನೆಯಾಗಲಿ ಅಥವಾ ಕುಡಿಯುವ ನೀರಿಗಾಗಲಿ ಅಥವಾ ನೀರಾವರಿಗಾಗಲಿ ಬಳಕೆಯಾಗದೆ ವ್ಯರ್ಥವಾಗಿ ಸಮುದ್ರ ಸೇರುತ್ತಿದೆ.
ಡಾ. ಮಧುಸೀತಪ್ಪ ಅವರ ವರದಿಯ ಪ್ರಕಾರ ಅಘನಾಶಿನಿ ನದಿಯಿಂದ 35 ಟಿಎಂಸಿಯಷ್ಟು ನೀರನ್ನು ಲಿಂಗನಮಕ್ಕಿ ಜಲಾಶಯದಲ್ಲಿ ಸಂಗ್ರಹಿಸಿ, ಲಿಂಗನಮಕ್ಕಿಯ 15 ಟಿಎಂಸಿಯನ್ನು ಸೇರಿಸಿ ಒಟ್ಟು 50 ಟಿಎಂಸಿಯಷ್ಟು ನೀರನ್ನು ಏತ ನೀರಾವರಿಯ ಮೂಲಕ ಶಿವಮೊಗ್ಗ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಮೂಲಕ ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುವುದು.
ವಿದ್ಯುತ್ ಉತ್ಪಾದನೆ: ಈ ಜಿಲ್ಲೆಗಳ 27 ತಾಲೂಕುಗಳ 5415 ಕೆರೆಗಳನ್ನು, ಹೆಸರಘಟ್ಟ, ತಿಪ್ಪಗೊಂಡನಹಳ್ಳಿ ಸರೋವರಗಳನ್ನು ಪ್ರತಿವರ್ಷ ತುಂಬಲಾಗುವುದು. ಲಿಂಗನಮಕ್ಕಿಯಲ್ಲಿ ಪ್ರತಿವರ್ಷ ಸರಾಸರಿ 5440 ಮಿಲಿಯನ್ ಯೂನಿಟ್ಸ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಪ್ರತಿ ಟಿಎಂಸಿಗೆ ಲಿಂಗನಮಕ್ಕಿಯಲ್ಲಿ ಪ್ರತಿವರ್ಷ 30 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗಯತ್ತದೆ. ಅಂದರೆ ನಾವು 15 ಟಿಎಂಸಿಯಷ್ಟು ನೀರನ್ನು ಲಿಂಗನಮಕ್ಕಿಯಿಂದ ತೆಗೆದರೆ ವರ್ಷಕ್ಕೆ 450 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತದೆ. ಅದಲ್ಲದೆ ಒಟ್ಟು 50 ಟಿಎಂಸಿಯಷ್ಟು ನೀರನ್ನು ಲಿಫ್ಟ್ ಮೂಲಕ ಬರಪೀಡಿತ ಜಿಲ್ಲೆಗಳಿಗೆ ಸಾಗಿಸಲು 1200 ಮಿಲಿಯನ್ ಯೂನಿಟ್ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಕರ್ನಾಟಕದಲ್ಲಿ ವಿದ್ಯುಚ್ಛಕ್ತಿಯ ಅಭಾವ ಕಾಡುತ್ತಿರುವಾಗ ಲಿಂಗನಮಕ್ಕಿಯಿಂದ ನೀರು ತೆಗೆಯುವುದು ಸಮಂಜಸವೇ, ಅಲ್ಲದೆ ಲಿಂಗನಮಕ್ಕಿ ಜಲಾಶಯ ದಕ್ಷಿಣ ಭಾರತದ ಎಲೆಕ್ಟ್ರಿಕಲ್ ಗ್ರೇಡಿನ ಬೆನ್ನೆಲುಬಾಗಿದೆ. ಇದನ್ನು ನಿವಾರಿಸಲು ಡಾ. ಮಧುಸೀತಪ್ಪ ಲಿಂಗನಮಕ್ಕಿಯ ಪಕ್ಕದಲ್ಲೇ ಹಾದು ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಅಂಜಕ್ಕಿ ಹಳ್ಳ ಹಾಗು ಮಾವಿನಗುಂಡಿ ಹಳ್ಳದಿಂದ 15 ಟಿಎಂಸಿ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ತಿರುಗಿಸಲು ಸೂಚಿಸಿದ್ದಾರೆ. ಇದಲ್ಲದೆ ಭೇಡ್ತಿ ನದಿಯ 180 ಟಿಎಂಸಿ ನೀರಿನಲ್ಲಿ 25 ಟಿಎಂಸಿ ನೀರನ್ನು ಗುರುತ್ವಾಕರ್ಷಣೆಯ ಮೂಲಕ ಕಾಳಿ ನದಿಯ ವಿದ್ಯುತ್ ಕಾಂಪ್ಲೆಕ್ಸನ ಅಂಗವಾದ ತಟ್ಟಿಹಳ್ಳಿ ಜಲಾಶಯಕ್ಕೆ ತಿರುಗಿಸಲು ಸೂಚಿಸಿದ್ದಾರೆ.
ಈ ಕ್ರಮದಿಂದ ವಿದ್ಯುತ್ ಉತ್ಪಾದನೆಗೆ ಯಾವುದೆ ತೊಂದರೆಯಾಗುವುದಿಲ್ಲ. ಅಲ್ಲದೆ, ಬರಪೀಡಿತ ಜಿಲ್ಲೆಗಳಿಗೆ ನೀರು ಸಾಗಿಸಲು ಬೇಕಾದ ಹೆಚ್ಚುವರಿ ವಿದ್ಯುತ್‌ಅನ್ನು ಸಹ ಉತ್ಪಾದನೆ ಮಾಡಬಹುದು. ವಿದ್ಯುತ್ ಉತ್ಪಾದನೆಯನ್ನು ಸೋಲಾರ್, ವಿಂಡ್ ಹಾಗೂ ಥರ್ಮಲ್ ಘಟಕಗಳಿಂದ ಮಾಡಬಹುದು. ಆದರೆ, ಪ್ರಾಶಸ್ತ್ಯವಾದ ನೀರನ್ನು ಉತ್ಪಾದನೆ ಮಾಡಲಾಗುವುದಿಲ್ಲ ಎಂಬುದನ್ನು ತಮ್ಮ ವರದಿಯಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ. ಡಾ. ಪರಮಶಿವಯ್ಯ ವರದಿ ಅನುಷ್ಠಾನಕ್ಕೆ ಕರಾವಳಿ ಭಾಗದ ಜನತೆ ವಿರೋಧ ವ್ಯಕ್ತಪಡಿಸಿದ್ದಾರೆ. ಎತ್ತಿನಹೊಳೆ ಯೋಜನೆಗೂ ಅಪಸ್ವರ ಉಂಟಾಗಿದೆ. ಸಣ್ಣ ಯೋಜನೆಯ ಮೂಲಕ ಕೋಲಾರ, ಮಾಲೂರು ಹಾಗೂ ಬಂಗಾರಪೇಟೆ ಹಾಗೂ ಕೆಲ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಕಳೆದ 8 ವರ್ಷಗಳ ಹಿಂದೆ ರೂಪಿಸಿದ ಯರಗೋಳ್ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆಯಿಂದ ತಕರಾರು ಇರುವಾಗ ಡಾ. ಮಧುಸೀತಪ್ಪ ಅವರ ಹೊಸ ಪ್ರಯೋಗಕ್ಕೆ ಕಿಮ್ಮತ್ತು ಸಿಗುವುದೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಈಗಾಗಲೇ ರಾಜ್ಯದ ನೀರಿಗಾಗಿ ಕ್ಯಾತೆ ತೆಗೆಯುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಸವಾಲು ಒಡ್ಡಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಈ ಯೋಜನೆಗೆ ವಿರೋಧ ವ್ಯಕ್ತವಡಿಸದಂತೆ ಯಾವ ರೀತಿ ಸಂಧಾನ ಮತ್ತು ಸಾಮರಸ್ಯ ಮೂಡಿಸಲಾಗುತ್ತದೆ ಎಂಬುದನ್ನು ಡಾ. ಮಧುಸೀತಪ್ಪ ವರದಿಯಲ್ಲಿ ತಿಳಿಸಿದ್ದಲ್ಲಿ ಸರ್ಕಾರಕ್ಕೆ ಯೋಜನೆಯ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ಅನುಕೂಲವಾಗುತ್ತಿತ್ತು.
ಪಾ.ಶ್ರೀ.ಅನಂತರಾಮ್