ಮುಖ್ಯೋಪಾಧ್ಯಾಯರ ಸಂಘದಲ್ಲೂ ಪಟ್ಟಭದ್ರರ ಕರಾಮತ್ತು
ಕ.ಪ್ರ.ವಾರ್ತೆ ಕೋಲಾರ ಸೆ. 15
ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರಲ್ಲಿ ಉಂಟಾಗಿರುವ ಅಹಿತಕರ ಪೈಪೋಟಿ ಮತ್ತು ಅರ್ಹರ ಆಯ್ಕೆಗೆ ಪಟ್ಟಭದ್ರ ಹಿತಾಸಕ್ತಿಗಳ ಅಡ್ಡಗಾಲು ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಇನ್ನಿತರ ಸ್ಥಾನಗಳಿಗೆ ನಿಯಮಾನುಸಾರ ಚುನಾವಣೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ಸಂಘದ ಬಗ್ಗೆ ಯಾವುದೇ ಅಪಸ್ವರ ಇಲ್ಲದಂತೆ ನೋಡಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ಪದಾಧಿಕಾರಿಗಳನ್ನು ಘೋಷಣೆ ಮಾಡುತ್ತಿರುವುದು ಪ್ರೌಢಶಾಲಾ ಮುಖ್ಯೋಪಾಧ್ಯಾಯರಲ್ಲಿ ಅಸಮಾಧಾನಕ್ಕೆ ಎಡೆ ಮಾಡಿದೆ.
ಕಳೆದ 15- 20 ವರ್ಷಗಳಿಂದ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘಕ್ಕೆ ನಿಯಮಾನುಸಾರ ಪದಾಧಿಕಾರಿಗಳ ಆಯ್ಕೆ ಆಗುವುದಿರಲಿ, ಸರ್ವ ಸದಸ್ಯರ ಸಭೆಯನ್ನೂ ಕರೆದಿಲ್ಲವೆಂಬ ಆರೋಪ ಕೇಳಿ ಬಂದಿದೆ.
ಸಂಘದಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯದರ್ಶಿಯಾಗಿದ್ದ ಬಾಪೂಜಿ ಪ್ರೌಢಶಾಲೆಯ ಸೋಮಣ್ಣ ಇತ್ತೀಚೆಗೆ ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಹಾಗಾಗಿ ಸಂಘದ ಕಾರ್ಯದರ್ಶಿ ಸ್ಥಾನದಲ್ಲಿ ಇವರು ಮುಂದುವರಿಯಲು ಅವಕಾಶವಿಲ್ಲ.
ಕಾರ್ಯದರ್ಶಿ ಸ್ಥಾನಕ್ಕೆ ಅರ್ಹರನ್ನು ಆಯ್ಕೆ ಮಾಡುವಂತೆ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಸಂಘದ ಗೌರವಾಧ್ಯಕ್ಷರಾಗಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪದ್ಮನಾಭ್ ಅವರಿಗೆ ಮನವಿ ಮಾಡಿದ್ದರು. ಕಾರ್ಯದರ್ಶಿ ಸ್ಥಾನದಲ್ಲಿ ನಿವೃತ್ತ ಸೋಮಣ್ಣ ಮುಂದುವರಿಯುವಂತಿಲ್ಲವೆಂಬ ಕಾರಣದಿಂದ ನಗರದ ನೂತನ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ರುದ್ರಪ್ಪ ಅವರನ್ನು ಹಂಗಾಮಿ ಕಾರ್ಯದರ್ಶಿಯನ್ನಾಗಿ ಸೆ. 2ರಂದು ಘೋಷಣೆ ಮಾಡಲಾಗಿತ್ತು. ಆದರೆ, ರುದ್ರಪ್ಪ ಕಾರ್ಯದರ್ಶಿಯಾದಲ್ಲಿ ನಮ್ಮ ಬೇಳೆ ಬೇಯಲ್ಲವೆಂಬ ಕಾರಣ ಸಂಘದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ರುದ್ರಪ್ಪ ಅವರನ್ನು ಕಾರ್ಯದರ್ಶಿಯನ್ನಾಗಿ ಒಪ್ಪಿಕೊಳ್ಳಲು ಇಷ್ಟಪಡಲಿಲ್ಲ.
ಅಸಮಾಧಾನ: ಈ ನಡುವೆ ಕಾರ್ಯದರ್ಶಿ ಸ್ಥಾನಕ್ಕೆ ಕೆಲವರು ಪೈಪೋಟಿ ನಡೆಸುತ್ತಿರುವುದರಿಂದ ಸಂಘದ ಅಧ್ಯಕ್ಷರೂ ಆದ ಡಿಡಿಪಿಐ ಸಹ ಅಸಹಾಯಕರಾಗಿದ್ದಾರೆನ್ನಲಾಗಿದೆ.
ರುದ್ರಪ್ಪ ಕಾರ್ಯದರ್ಶಿಯಾದರೆ 10ನೇ ತರಗತಿ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆಯ ಮುದ್ರಣ ಸ್ಕೀಂನಲ್ಲಿ ಹಣ ನುಂಗಲು ಸಾಧ್ಯವಾಗುವುದಿಲ್ಲವೆಂಬ ಕಾರಣಕ್ಕೆ ಡಿಡಿಪಿಐಯವರ ಆದೇಶ ತಿರಸ್ಕಾರ ಮಾಡಿರುವ ಕೆಲವರು ಗುರುವಾರ ಡಿಡಿಪಿಐ ಕರ್ತವ್ಯದ ಮೇಲೆ ಬೆಂಗಳೂರಿಗೆ ಹೋಗಿದ್ದಾಗ ಪ್ರಶ್ನೆಪತ್ರಿಕೆ ಮುದ್ರಣಕ್ಕೆ ಸಂಬಂಧಿಸಿದಂತೆ ಹಂಗಾಮಿ ಕಾರ್ಯದರ್ಶಿಯಾಗಿದ್ದ ರುದ್ರಪ್ಪ ಅವರನ್ನು ದೂರವಿಟ್ಟು ಸಭೆ ನಡೆಸಿ ಸದರಿ ಸಭೆಗೆ ಈ ಹಿಂದಿನ ಕಾರ್ಯದರ್ಶಿ ಸೋಮಣ್ಣ ಅವರನ್ನು ಕರೆಸಿಕೊಂಡು ಪ್ರಶ್ನೆ ಪತ್ರಿಕೆಯ ವಿಚಾರವಾಗಿ ಚರ್ಚಿಸಿರುವುದಲ್ಲದೆ, ಡಯೆಟ್ನ ಉಪನ್ಯಾಸಕ ಸಿ. ಶ್ರೀನಿವಾಸ್ ಅವರಿಗೆ ಸಂಘದ ಉಸ್ತುವಾರಿ ಹಾಗೂ ಪ್ರಶ್ನೆ ಪತ್ರಿಕೆಯ ಉಸ್ತುವಾರಿ ನೋಡಿಕೊಳ್ಳುವಂತೆ ತೀರ್ಮಾನಿಸಿರುವುದು ಸಂಘದ ಉಳಿದ ಪದಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಡಯೆಟ್ನ ಉಪನ್ಯಾಸಕ ಸಿ. ಶ್ರೀನಿವಾಸ್ ಮುಖ್ಯೋಪಾಧ್ಯಾಯರಲ್ಲ. ಆದರೂ ಸಂಘದ ಖಜಾಂಚಿಯಾಗಿ ಕೆಲಸ ಮಾಡಿದ್ದಾರೆ. ಬಿಆರ್ಸಿಗಳ ಸಮನ್ವಯಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಪ್ರಶ್ನೆ ಪತ್ರಿಕೆಯ ಉಸ್ತುವಾರಿ ನೋಡಿಕೊಳ್ಳಲು ನಿಯೋಜಿಸಿರುವುದು ಸರಿಯೇ ಎಂಬ ಪ್ರಶ್ನೆ ಕೇಳಿ ಬಂದಿದೆ. ಡಿಡಿಪಿಐ ಅನುಪಸ್ಥಿತಿಯಲ್ಲಿ ಪ್ರಶ್ನೆ ಪತ್ರಿಕೆಯ ವಿಚಾರವಾಗಿ ಬಿಇಒ ಜಯರಾಮರೆಡ್ಡಿ ಸಭೆ ನಡೆಸಿದ್ದಾರೆ. ಹಂಗಾಮಿ ಕಾರ್ಯದರ್ಶಿಯಾಗಿ ಘೋಷಣೆಯಾಗಿದ್ದ ರುದ್ರಪ್ಪ ಅವರನ್ನು ಮೂಲೆಗುಂಪು ಮಾಡಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಸರಿಯಲ್ಲವೆಂದಿರುವ ಸಂಘದ ಪದಾಧಿಕಾರಿಗಳು ಕೆಲವರು, ಸಂಘದ ಹಿತಕ್ಕಿಂತ ಪ್ರಶ್ನೆ ಪತ್ರಿಕೆಯಿಂದ ಸಿಗುವ ಹಣದ ಮೇಲಿನ ವ್ಯಾಮೋಹದಿಂದ ನೀತಿ- ನಿಯಮ ಉಲ್ಲಂಘಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನೇಕ ವರ್ಷಗಳಿಂದ ಸಂಘದ ಮುಖೇನ 8, 9 ಮತ್ತು 10ನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಮುದ್ರಣಗೊಳಿಸಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಮಾಡಲಾಗುತ್ತಿತ್ತು. ಜಿಲ್ಲೆಯ 69 ಸಾವಿರ ವಿದ್ಯಾರ್ಥಿಗಳಿಂದ ಪ್ರಶ್ನೆಪತ್ರಿಕೆ ಮುದ್ರಣಕ್ಕಾಗಿ 24 ರಂತೆ ಸಂಗ್ರಹ ಮಾಡುವುದು ಸಂಘದ ಗುರಿ.
ಪ್ರಶ್ನೆಪತ್ರಿಕೆಯ ಸ್ಕೀಂನಿಂದ ಸಂಗ್ರಹಿಸಿದ ಹಣದಲ್ಲಿ ಮುದ್ರಣ ಖರ್ಚು, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಿಕೆಯ ಬಾಬ್ತು, ಸಾಗಾಣೆ ಸೇರಿದಂತೆ ಇನ್ನಿತರ ಖರ್ಚು ಹೊರತುಪಡಿಸಿ ಕಳೆದ 20 ವರ್ಷಗಳಿಂದ ಸಾವಿರಾರು ರು. ಉಳಿಕೆ ಹಣವನ್ನು ಬ್ಯಾಂಕಿನಲ್ಲಿ ಉಳಿತಾಯ ಮಾಡಿ ಸರ್ವ ಸದಸ್ಯರ ಸಭೆಯಲ್ಲಿ ಲೆಕ್ಕ ತೋರಿಸಬೇಕಾಗಿತ್ತು. ಆದರೆ, ಇತ್ತೀಚೆಗೆ ಡಿಡಿಪಿಐ ಅವರಿಗೆ ಕೇವಲ 1200 ಉಳಿತಾಯ ಹಣ ನೀಡಿರುವುದು ಅನುಮಾನಗಳಿಗೆ ಎಡೆ ಮಾಡಿದೆ.
ಕಳೆದ ವರ್ಷ ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಶೇಖರಯ್ಯ ಎಂಬವರು ಪ್ರಶ್ನೆ ಪತ್ರಿಕೆ ಸ್ಕೀಂನಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಮೇರೆಗೆ ತನಿಖೆ ನಡೆಸಿ ಇನ್ನು ಮುಂದೆ 8 ಮತ್ತು 9ನೇ ತರಗತಿ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಮುದ್ರಣದ ಉಸ್ತುವಾರಿ ವಹಿಸಿಕೊಳ್ಳದಂತೆ ಸೂಚಿಸಿದ್ದರು. ಹಾಗಾಗಿ ಈ ಎರಡು ತರಗತಿ ಹೊರತುಪಡಿಸಿ 10ನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಯ ಜವಾಬ್ದಾರಿಯನ್ನು ಮಾತ್ರ ಸಂಘ ಹಾಗೂ ಶಿಕ್ಷಣ ಇಲಾಖೆಯವರು ಜಂಟಿಯಾಗಿ ವಹಿಸಿಕೊಂಡಿದ್ದಾರೆ.
ಸಂಘಕ್ಕೆ ಪ್ರಾಮಾಣಿಕ ವ್ಯಕ್ತಿ ಕಾರ್ಯದರ್ಶಿಯಾದಲ್ಲಿ ಪ್ರಶ್ನೆ ಪತ್ರಿಕೆ ಸ್ಕೀಂನಲ್ಲಿ ಅವ್ಯವಹಾರ ನಡೆಸಲು ತೊಂದರೆ ಆಗುತ್ತದೆ ಹಾಗೂ ನಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ವ್ಯಕ್ತಿಯಿದ್ದರೆ ಸಂಘ ಹಿಡಿತದಲ್ಲಿರುತ್ತದೆ ಎಂಬ ದುರುದ್ದೇಶದಿಂದ ಪಟ್ಟಭದ್ರ ಹಿತಾಸಕ್ತಿಗಳು ಸಂಘದ ಅಧ್ಯಕ್ಷರು ಆಗಿರುವ ಡಿಡಿಪಿಐ ಅವರನ್ನು ದಿಕ್ಕುತಪ್ಪಿಸಿ ಸಂಘಕ್ಕೆ ಮಸಿ ಬಳೆಯುತ್ತಿರುವುದರಿಂದ ಕೂಡಲೇ ಸರ್ವ ಸದಸ್ಯರ ಸಭೆ ಕರೆದು ಲೆಕ್ಕ ಪರಿಶೀಲನೆಯ ಜೊತೆಗೆ ಅರ್ಹ ಉಳ್ಳವರನ್ನು ಪದಾಧಿಕಾರಿಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ: ಡಿಡಿಪಿಐ
ಗುರುವಾರ ಬೆಂಗಳೂರಿನಲ್ಲಿ ಸಭೆ ಇದ್ದ ಕಾರಣ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಸಭೆಗೆ ಹಾಜರಾಗರಿಲ್ಲ. ಸೆ. 24ರಿಂದ 10ನೇ ತರಗತಿ ಮಧ್ಯವಾರ್ಷಿಕ ಪರೀಕ್ಷೆ ಇರುವುದರಿಂದ ಸಭೆಯನ್ನು ಬಿಇಒ ಜಯರಾಮರೆಡ್ಡಿ ಕರೆದಿದ್ದರು. ಸಂಘದಲ್ಲಿ ಕಾರ್ಯದರ್ಶಿ ಹುದ್ದೆ ಖಾಲಿ ಇದೆ.
ರುದ್ರಪ್ಪ ಅವರನ್ನು ಹಂಗಾಮಿ ಕಾರ್ಯದರ್ಶಿಯನ್ನಾಗಿ ಘೋಷಣೆ ಮಾಡಲಾಗಿತ್ತು. ಏಕೆ ಅವರು ಸಭೆಯಲ್ಲಿ ತಮ್ಮ ಪಾತ್ರ ನಿರ್ವಹಿಸಲಿಲ್ಲವೆಂಬುದು ಅರ್ಥವಾಗುತ್ತಿಲ್ಲ ಎಂದು ಡಿಡಿಪಿಐ ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಗೌರವಾಧ್ಯಕ್ಷರಾಗಿರುವ ಪದ್ಮನಾಭ್ ತಿಳಿಸಿದ್ದಾರೆ.
ಪ್ರಶ್ನೆಪತ್ರಿಕೆ ಮುದ್ರಣ ವ್ಯವಹಾರದಲ್ಲಿ ಹಣ ದುರುಯೋಗದ ಬಗ್ಗೆ ನನಗೂ ಕೆಲವರಿಂದ ದೂರು ಬಂದಿದೆ. ಅದಕ್ಕಾಗಿಯೇ ಬ್ಯಾಂಕ್ಪಾಸ್ಬುಕ್ ಮಾತ್ರ ತೆಗೆದಿಟ್ಟುಕೊಂಡಿದ್ದೇನೆ. 1200 ನಗದು ಮುಟ್ಟಿಲ್ಲ. 20 ವರ್ಷಗಳಿಂದ ಸಾಕಷ್ಟು ಹಣ ಉಳಿತಾಯ ಖಾತೆಯಲ್ಲಿ ಇರಬೇಕಾಗಿತ್ತು. ಈ ಕುರಿತು ಅಕ್ಚೋಬರ್ ತಿಂಗಳಲ್ಲಿ ನಡೆಯುವ ಸಂಘದ ಸರ್ವಸದಸ್ಯರ ಸಭೆಯಲ್ಲಿ ಪರಿಶೀಲನೆ ಮಾಡುತ್ತೇನೆ. ಹಣ ದುರುಪಯೋಗವಾಗಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುತ್ತೇನೆ.
ಸಂಘದಲ್ಲಿ ಮುಂಚೆಯಿಂದಲೂ ಪದಾಧಿಕಾರಿಗಳ ಆಯ್ಕೆ ಒಂದು ರೀತಿಯಲ್ಲಿ ನಡೆಯುತ್ತಿದೆ. ನಾನು ಕೇವಲ ಗೌರವ ಅಧ್ಯಕ್ಷನಷ್ಟೇ. ಸರ್ವಸದಸ್ಯರ ಸಭೆಯಲ್ಲಿ ಸಂಘವನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವುದಕ್ಕೆ ಎಲ್ಲರ ಬಳಿ ಚರ್ಚಿಸುತ್ತೇನೆ. ಲೆಕ್ಕಪತ್ರ ಬಹಿರಂಗಪಡಿಸುವೆ ಎಂದು ತಿಳಿಸಿದ್ದಾರೆ.