ಅನಧಿಕೃತ ಅಂಗಡಿ ಎತ್ತಂಗಡಿ
ಕ.ಪ್ರ.ವಾರ್ತೆ ಕೋಲಾರ ಸೆ. 16
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತ ಮುತ್ತಲ ಅನಧಿಕೃತ ಅಂಗಡಿಗಳನ್ನು ಜಿಲ್ಲಾಧಿಕಾರಿ ಡಿ.ಕೆ. ರವಿಯವರ ಸೂಚನೆ ಮೇರೆಗೆ ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.
ಕೈಗಾಡಿಗಳಲ್ಲಿ ಹಣ್ಣು-ಹಂಪಲು, ಟೀ ಮತ್ತು ಕಾಫಿ ಸ್ಟಾಲ್ ನಡೆಸುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಕಚೇರಿ ಮಾತ್ರವಲ್ಲದೆ ಆವರಣದಲ್ಲಿನ ಇಲ್ಲಿನ ಕಚೇರಿಗಳ ಕೆಲಸ ಕಾರ್ಯಕ್ಕೆ ತೊಂದರೆ ಆಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಹಾಗೂ ಸೋಮವಾರ ಜಿಲ್ಲಾಧಿಕಾರಿಗಳ ಕಾರಿಗೆ ಕೈಗಾಡಿಯೊಂದು ಅಡ್ಡ ಬಂದು ತೊಂದರೆ ನೀಡಿರುವುದರಿಂದ ಕ್ರಮ ಜರುಗಿಸಲಾಗಿದೆ.
ಒಂದು ಅಥವಾ ಎರಡು ಅಂಗಡಿಯನ್ನು ಎತ್ತಂಗಡಿ ಮಾಡಿಸಿದರೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣದಿಂದ ನಗರಸಭೆಯವರು ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತ ಮುತ್ತಲ ಎಲ್ಲ ಅಂಗಡಿಗಳನ್ನು ಎತ್ತಂಗಡಿ ಮಾಡಿದರು. ಪೊಲೀಸರು ಕಾರ್ಯಾಚರಣೆಗೆ ಬೇಕಾದ ಅಗತ್ಯ ನೆರವು ನೀಡಿದರು.
ಈ ಸಂದರ್ಭದಲ್ಲಿ ಕೆಲ ಅಂಗಡಿಗಳ ಮಾಲೀಕರು ನಾವೇನು ಯಾರಿಗೂ ತೊಂದರೆ ನೀಡುತ್ತಿಲ್ಲ, ಕಚೇರಿಗಳಿಗೆ ಅಡ್ಡಿಯಾಗದ ರೀತಿಯಲ್ಲಿ ಎಲ್ಲೋ ಮೂಲೆಯಲ್ಲಿ ಅಂಗಡಿ ಇಟ್ಟು ಜೀವನ ಸಾಗಿಸುತ್ತಿದ್ದೇವೆ. ಏಕಾಏಕಿ ಎತ್ತಂಗಡಿ ಮಾಡಿದರೆ ತೊಂದರೆ ಆಗುತ್ತದೆ ಎಂದು ಕೇಳಿಕೊಂಡರಾದರೂ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಲಾಗದೆ ಅಂಗಡಿಗಳನ್ನು ತೆರವುಗೊಳಿಸಿದರು.