ಎಸ್ಡಿಎಂಸಿಗಳಿಗೆ ಸಮವಸ್ತ್ರ ಖರೀದಿ ಹೊಣೆಗೆ ಆಕ್ಷೇಪ
ಕ.ಪ್ರ.ವಾರ್ತೆ ಕೋಲಾರ ಸೆ. 16
ಸರ್ಕಾರಿ ಶಾಲೆಯ ಶಿಕ್ಷಕರಿಗೆ ಈಗಾಗಲೇ ವಿವಿಧ ಯೋಜನೆಗಳ ಅನುಷ್ಠಾನದಿಂದ ಸಾಕಷ್ಟು ಹೊರೆಯಾಗುತ್ತಿದ್ದು ಇದರ ಜೊತೆಗೆ ಮಕ್ಕಳಿಗೆ ಸಮವಸ್ತ್ರಗಳನ್ನು ಹೊಲಿಸಿ, ವಿತರಣೆ ಮಾಡುವ ಜವಾಬ್ದಾರಿ ನೀಡಿದಲ್ಲಿ ಪಾಠ-ಪ್ರವಚನಗಳಿಗೆ ತೊಂದರೆ ಆಗುತ್ತದೆ ಎಂದು ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಮೋಲ್ ಮೋಹನ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಜಿ.ಪಂ. ಕೆಡಿಪಿ ಸಭೆಯಲ್ಲಿ ಡಿಡಿಪಿಐ ಪದ್ಮನಾಭ್ ಅವರು ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರಕ್ಕಾಗಿ 1,94,78,140 ರು.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ, ಈ ಹಣ ಶಿಕ್ಷಣ ಇಲಾಖೆಗೆ ಬದಲು ನೇರವಾಗಿ ಎಸ್.ಡಿ.ಎಂ.ಸಿ.ಗಳಿಗೆ ಆನ್ಲೈನ್ ಮೂಲಕ ಪಾವತಿಸಿದ್ದು, ಸಮವಸ್ತ್ರ ವಿತರಣೆಯಲ್ಲಿ ಇಲಾಖೆ ಹಸ್ತಕ್ಷೇಪ ಮಾಡುವಂತಿಲ್ಲ ಎಂದರು.
ಇದರಿಂದ ಬೇಸತ್ತ ಸಿಮೋಲ್ ಮೋಹನ್, ಈ ಮುಂಚೆ ಮಕ್ಕಳಿಗೆ ಇಲಾಖೆಯಿಂದಲೇ ಸಮವಸ್ತ್ರಗಳನ್ನು ಹೊಲಿಸಿ ಕೊಡಲಾಗುತ್ತಿತ್ತು. ಈಗ ಎಸ್.ಡಿ.ಎಂ.ಸಿ.ಗಳ ಮೂಲಕ ವಿತರಣೆ ಮಾಡುವುದರಿಂದ ಶಿಕ್ಷಕರಿಗೆ ಹೊರೆಯಾಗುತ್ತದೆ ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿದ ಡಿಡಿಪಿಐ, ಸರ್ಕಾರದ ಆದೇಶವನ್ನು ಪ್ರಶ್ನೆ ಮಾಡುವುದಕ್ಕೆ ಆಗುವುದಿಲ್ಲ, ಎಸ್.ಡಿ.ಎಂ.ಸಿ.ಗಳು ಪ್ರತಿ ಮಕ್ಕಳಿಗೆ 200 ರು.ನಂತೆ ಸಮವಸ್ತ್ರಗಳನ್ನು ಸಿದ್ಧಪಡಿಸಿಕೊಡಲು ಜವಾಬ್ದಾರಿ ನೀಡಲಾಗಿದೆ. ಸಮಿತಿಯವರು ತಾವೇ ಬಟ್ಟೆ ಖರೀದಿ ಮಾಡಿ ಉಡುಪು ಸಿದ್ಧಪಡಿಸಿಕೊಡುವ ಜವಾಬ್ದಾರಿಯನ್ನು ಎನ್.ಜಿ.ಓಗಳಿಗೆ ಇಲ್ಲವೇ ಸಮಿತಿಯಿಂದಲೇ ಹೊಲಿಸಿ ಕೊಡುತ್ತಾರೆ, ಇದರಲ್ಲಿ ಇಲಾಖೆಯ ಪಾತ್ರವೇನೂ ಇಲ್ಲ ಎಂದರು.
ಅಕ್ರಮ ನಡೆದಿಲ್ಲ: ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಜಿ.ಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಡಿಡಿಪಿಐಗೆ ಸೂಚಿಸಿದಾಗ, ಜಿಲ್ಲೆಯ ಬಹುತೇಕ ಶಾಲೆಗಳಿಂದ ಕ್ರೀಡಾ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದಂತೆ ವರದಿ ತರಿಸಿಕೊಂಡಿದ್ದೇನೆ. ಯಾವುದೇ ಶಾಲೆಯಲ್ಲೂ ಅಕ್ರಮ ನಡೆದಿಲ್ಲ, 4 ಸಾವಿರ ರು.ಗಳಿಗೆ ಸಿಗುವುದೇ ಕೆಲ ಕ್ರೀಡಾ ಸಾಮಗ್ರಿಗಳು, ಅಕ್ರಮವೆಸಗುವುದು ಹೇಗೆ ಸಾಧ್ಯವೆಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
ಹಾಗೊಂದು ವೇಳೆ ಸದಸ್ಯರು ನಿರ್ದಿಷ್ಟವಾದ ಶಾಲೆಗಳಲ್ಲಿ ಅಕ್ರಮ ನಡೆದಿರುವುದನ್ನು ತಿಳಿಸಿದಲ್ಲಿ ತನಿಖೆ ಮಾಡಿ ಸದರಿ ಶಾಲೆಗಳ ಮುಖ್ಯೋಪಾಧ್ಯಾಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇನೆಂದು ಹೇಳಿದರಾದರೂ ಸದಸ್ಯರು ಶಾಲೆಗಳ ಹೆಸರು ತಿಳಿಸಲು ಧೈರ್ಯ ತೋರಲಿಲ್ಲ.
ಸಿಬ್ಬಂದಿ ಕೊರತೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಶಕುಂತಲಾ ಅಂಗನವಾಡಿ ಕೇಂದ್ರಗಳ ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿ ಗುರುಮೂರ್ತಿ ಎಂದಿನಂತೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ಸಭೆಯ ಗಮನಕ್ಕೆ ತಂದರು.