ಏಕವ್ಯಕ್ತಿ ರೇಖಾಚಿತ್ರ ಪ್ರದರ್ಶನ
ಕೋಲಾರ: ಶಿಕ್ಷಕ ಕೆ.ವಿ. ಕಾಳಿದಾಸ ಅವರು ಕೇವಲ 5 ರು.ಗಳ ಜೆಲ್ ಪೆನ್ನಿನಿಂದ ರಚಿಸಿರುವ ರೇಖಾಚಿತ್ರ ಪ್ರದರ್ಶನ ಕಲಾಭಿಮಾನಿಗಳ ಗಮನ ಸೆಳೆಯಿತು.
ಅನೇಕ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಕಾಳಿದಾಸ ಅವರು, ಇದೇ ಮೊದಲ ಬಾರಿಗೆ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಮೆಚ್ಚುಗೆ ಗಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಚುಟುಕು ಸೌರಭ ಕಾವ್ಯೋತ್ಸವ ಕಾರ್ಯಕ್ರಮದಲ್ಲಿ ಕಾಳಿದಾಸ 25ಕ್ಕೂ ಹೆಚ್ಚು ರೇಖಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಹೆಸರಾಂತ ಕಲಾವಿದ ಎಚ್.ಎಸ್. ನಾಗರಾಜ್ ಅವರು ಚಿತ್ರ ಪ್ರದರ್ಶನ ಉದ್ಘಾಟಿಸಿ ಕಾಳಿದಾಸ ಅವರ ಪರಿಶ್ರಮವನ್ನು ಕೊಂಡಾಡಿದರು. ಬೆಂಗಳೂರಿನ ಕೆನ್ ಕಲಾ ಶಾಲೆಯಲ್ಲಿ ತರಬೇತಿ ಪಡೆದಿರುವ ಇವರು ಎಂಎ ಪದವಿಧರರು. ಪ್ರಸ್ತುತ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಾಲಾ ಮಕ್ಕಳಿಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸುವುದಲ್ಲದೆ, ಕವಿತೆಗಳ ರಚನೆಯಲ್ಲೂ ತರಬೇತಿ ನೀಡಿ ಮಕ್ಕಳ ಕವನ ಸಂಕಲನವನ್ನು ಹೊರತಂದಿದ್ದಾರೆ.
ರಂಗಭೂಮಿ ನಟ ಹಾಗೂ ನಿರ್ದೇಶಕರಾಗಿಯೂ ಬಹುಮುಖ ಪ್ರತಿಭೆಯನ್ನು ಹೊಂದಿರುವ ಕಾಳಿದಾಸ ಕೇವಲ 5 ರು.ಗಳ ಜೆಲ್ ಪೆನ್ನಿನಿಂದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಗಾಂಧೀಜಿ, ಅಂಬೇಡ್ಕರ್, ಪ್ರಕೃತಿ ಹಾಗೂ ಪ್ರಾಣಿಗಳ ಚಿತ್ರಗಳನ್ನು ಬಿಡಿಸಿದ್ದಾರೆ.
ರೇಖಾಚಿತ್ರ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ್, ಶಿಕ್ಷಕ ಹಾ.ಮಾ. ರಾಮಚಂದ್ರ, ನರಸಿಂಹಪ್ಪ ಮೂಡಲಗೋಲ್ಲಹಳ್ಳಿ ಮತ್ತಿತರರು ಇದ್ದರು.