ಚಿಕೂನ್‌ಗುನ್ಯ ನಿಯಂತ್ರಣಕ್ಕೆ ಗ್ರಾಮಸ್ಥರ ಆಗ್ರಹ
ಬಂಗಾರಪೇಟೆ: ಕ್ಷೇತ್ರಾದ್ಯಂತ ಕಳೆದ ತಿಂಗಳಿಂದ ಚಿಕೂನ್ ಗುನ್ಯ ಗ್ರಾಮೀಣ ಜನರನ್ನು ಅಧಿಕವಾಗಿ ಬಾಧಿಸುತ್ತಿದ್ದರೂ ತಾಲೂಕು ಆರೋಗ್ಯ ಇಲಾಖೆಯು ಕಾಯಿಲೆಯನ್ನು ಹತೋಟಿಗೆ ತರಲು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಗ್ರಾಮಸ್ಥರ ಕಣ್ಣು ಕೆಂಪಾಗುವಂತೆ ಮಾಡಿದೆ.
ಹಲವು ವರ್ಷಗಳ ಹಿಂದೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಚಿಕೂನ್ ಗುನ್ಯ ಈಗ ಮತ್ತೆ ಕಾಣಿಸಿಕೊಂಡು ಜನರನ್ನು ಬಾಧಿಸುತ್ತಿದೆ. ಕಾಮಸಮುದ್ರ ಹೋಬಳಿಯ ದೋಣಿಮಡಗು, ತೊಪ್ಪನಹಳ್ಳಿ, ಕಾಮಸಮುದ್ರ ಮತ್ತಿತರ ಕಡೆ ಬೂದಿಕೋಟೆಯ ಆಲಂಬಾಡಿ ಜೋತೆನಹಳ್ಳಿ ಪಂಚಾಯಿತಿಯಲ್ಲಿ ಈ ಚಿಕೂನ್ ಗುನ್ಯ ಜ್ವರ ಹೆಚ್ಚಾಗಿ ಜನರನ್ನು ಕಾಡುತ್ತಿದೆ. ಪ್ರತಿದಿನ ನೂರಾರು ರೋಗಿಗಳು ಪಟ್ಟಣದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ನೂಕುನುಗ್ಗಲು ಉಂಟಾಗುತ್ತಿದೆ. ಕೂಡಲೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕಾಳಜಿ ವಹಿಸಿ ಗ್ರಾಮಗಳಲ್ಲಿ ಜನರನ್ನು ಕಾಡುತ್ತಿರುವ ಚಿಕೂನ್ ಗುನ್ಯ ಹತೋಟಿಗೆ ತರಲು ವೈದ್ಯರು ಶ್ರಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.