ಜಿಪಂ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳೇ ಟಾರ್ಗೆಟ್!
ಕ.ಪ್ರ.ವಾರ್ತೆ ಕೋಲಾರ ಸೆ. 16
ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತೆ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಪ್ರಮುಖ ಸಮಸ್ಯೆಗಳ ಕುರಿತು ರಚನಾತ್ಮಕ ಚರ್ಚೆಗಿಂತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿಕೊಂಡು ಗಲಾಟೆ ಮಾಡಿದ್ದೇ ವಿಶೇಷವಾಗಿತ್ತು.
ಇತ್ತೀಚೆಗೆ ಜಿಲ್ಲೆಯಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದ್ದು ಇದರಿಂದ ರೈತರ ಪರಿಸ್ಥಿತಿ ಏನಾಗಿದೆ, ಕುಡಿಯುವ ನೀರಿಗೆ ಏನಾದ್ರು ಪರಿಹಾರ ಸಿಕ್ಕಿದಿಯೇ ಎಂಬುದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಬದಲು ಎಸ್ಡಿಎಂಸಿಗಳ ಅಧಿಕಾರ ವ್ಯಾಪ್ತಿ ಹಾಗೂ ಕಾಮಗಾರಿಗಳ ಕುರಿತು ಅಕ್ಷೇಪ, ಟೀಕೆಗಳು ಕೇಳಿ ಬಂದಿದ್ದರಿಂದ ಸಭೆಯ ಗಾಂಭೀರ್ಯಕ್ಕೆ ಕಿಮ್ಮತ್ತು ಇಲ್ಲವೇನೋ ಎಂಬ ಅನುಮಾನ ಸೃಷ್ಟಿಯಾಯಿತು.
ಸರ್ಕಾರಿ ಶಾಲೆಗಳಿಗೆ ಎಸ್ಡಿಎಂಸಿ ಅಧ್ಯಕ್ಷರ ನೇಮಕ, ಶಾಲಾ ಕಟ್ಟಡಗಳ ನಿರ್ಮಾಣ ವಿಚಾರದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಜಿಲ್ಲಾ ಪಂಚಾಯಿತಿಯ ಸದಸ್ಯರ ಗಮನಕ್ಕೆ ತರದೆ ಶಾಸಕರ ಒತ್ತಾಸೆಯಂತೆ ಕೆಲಸ ಮಾಡುತ್ತಿದ್ದಾರೆಂದು ಜಿಪಂ ಸದಸ್ಯ ಹಾಗೂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಆನಂದ್ ಸಿಡಿಮಿಡಿಗೊಂಡ ಘಟನೆ ಕೋಲಾರ ಜಿಪಂ ಕೆಡಿಪಿ ಸಭೆಯಲ್ಲಿ ನಡೆಯಿತು.
ಡಿಡಿಪಿಐ ವಿರುದ್ಧ ವಾಗ್ದಾಳಿ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಡಿಡಿಪಿಐ ಪದ್ಮನಾಭ್ ಅವರನ್ನು ಟಾರ್ಗೆಟ್ ಮಾಡಿಕೊಂಡು ವಾಗ್ದಾಳಿ ನಡೆಸಿದ ಎಂ.ಎಸ್.ಆನಂದ್, ಸರ್ಕಾರಿ ಶಾಲೆಗಳ ಎಸ್ಡಿಎಂಸಿಗೆ ಅಧ್ಯಕ್ಷರನ್ನು ಸಮಿತಿಯ ಸದಸ್ಯರೇ ಆಯ್ಕೆ ಮಾಡಬೇಕೆಂಬ ನಿಮಯವಿದ್ದರೂ ಡಿಡಿಪಿಐ ಪದ್ಮನಾಭ್ ಅವರು ಬಂಗಾರಪೇಟೆ ಶಾಸಕರ ಒತ್ತಡಕ್ಕೆ ಮಣಿದು ಶಾಸಕರಿಗೆ ಬೇಕಾದವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆಂದು ಆರೋಪಿಸಿದರು.
ಬಂಗಾರಪೇಟೆ ತಾಲೂಕಿನ ಹುದುಕುಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ಕಟ್ಟಡ ನಿರ್ಮಿಸಲು ಎಸ್ಡಿಎಂಸಿಗೆ ಸರ್ಕಾರ ಹಣ ಬಿಡುಗಡೆ ಮಾಡಿದ್ದರೂ ಕಾಮಗಾರಿ ಕೈಗೊಂಡಿಲ್ಲ. ಡಿಡಿಪಿಐಯವರು ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆಂದು ಗರ್ಜಿಸಿದರು. ಆನಂದ್ ಅವರ ಆರೋಪಗಳಿಗೆ ನಗು ನಗುತ್ತಲೇ ಉತ್ತರ ನೀಡಿದ ಡಿಡಿಪಿಐ ಪದ್ಮನಾಭ್, ನನಗೆ ಎಲ್ಲರೂ ಒಂದೇ, ಕೆಲವು ಸಂದರ್ಭದಲ್ಲಿ ಜನಪ್ರತಿನಿಧಿಗಳಿಂದ ಒತ್ತಡ ಬರುವುದು ಸಹಜ. ಹಾಗಂತ ನಾನೇನು ಸರ್ಕಾರದ ನಿಮಯ ಮೀರಿ ಕೆಲಸ ಮಾಡುತ್ತಿಲ್ಲ. ಎಸ್ಡಿಎಂಸಿಗೆ ಅಧ್ಯಕ್ಷರನ್ನು ಶಾಸಕರ ಸೂಚನೆ ಮೇರೆಗೆ ನೇಮಕ ಮಾಡಬಹುದೆಂದು ಸರ್ಕಾರದ ಸೂಚನೆಯಿದೆ. ಅದರಂತೆ ನನ್ನ ಕೆಲಸ ನಿರ್ವಹಿಸಿದ್ದೇನೆ. ಬೇಕಾದರೆ ಸರ್ಕಾರದ ಆದೇಶವನ್ನು ನಿಮಗೆ ತಿಳಿಸುತ್ತೇನೆಂದು ಸ್ಪಷ್ಟನೆ ನೀಡಿದರು.
ಜಿ.ಪಂ ಅಧ್ಯಕ್ಷರ ಬುದ್ಧಿವಾದ: ಡಿಡಿಪಿಐರವರ ಈ ಸ್ಪಷ್ಟನೆಯಿಂದ ಕುಪಿತರಾದ ಎಂ.ಎಸ್.ಆನಂದ್, ನೀವು ಶಾಸಕರು ಹೇಳಿದಂತೆ ಕೇಳುವುದಾದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ, ನಮಗೆ ನಿಮ್ಮ ಸೇವೆ ಅಗತ್ಯವಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರ ಕಾಲದಲ್ಲಿ ಎಸ್ಡಿಎಂಸಿಗಳಿಗೆ ಶಾಸಕರು ಸೂಚಿಸಿದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಸೂಚನೆಯಿತ್ತು. ನಂತರ ಈ ಆದೇಶ ಬದಲಾಗಿದ್ದರೂ ತಾವು ಹಳೆಯ ಕಥೆಯನ್ನು ಹೇಳುತ್ತಿದ್ದೀರಾ ಎಂದು ಗಟ್ಟಿದನಿಯಲ್ಲಿ ಡಿಡಿಪಿಐ ಅವರೊಂದಿಗೆ ಜಟಾಪಟಿಗೆ ಇಳಿದಾಗ ಪರಿಸ್ಥಿತಿ ಅರಿತ ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಅಧಿಕಾರಿಗಳ ಜತೆಯಲ್ಲಿ ಗಲಾಟೆ ಬೇಡ. ಲೋಪಗಳು ಇದ್ದರೆ ನನ್ನ ಗಮನಕ್ಕೆ ತನ್ನಿ ಸರಿಪಡಿಸುತ್ತೇನೆಂದು ಬುದ್ಧಿವಾದ ಹೇಳಿದರು.
ಕ್ರೀಡಾಧಿಕಾರಿ ವಿರುದ್ಧ ಗರಂ: ಶಿಕ್ಷಣ ಇಲಾಖೆಯ ನಂತರ ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಇಲಾಖೆಯ ಅಧಿಕಾರಿ ರುದ್ರಪ್ಪ ವಿರುದ್ಧ ಸದಸ್ಯರು ಮಾತ್ರವಲ್ಲದೆ ಸಿಇಒ ಝುಲ್ಫಿಖಾರ್ ಉಲ್ಲಾ ಅವರು ಸಹ ಗುಡುಗಿದ್ದರಿಂದ ಅಧಿಕಾರಿಯು ಬೆಚ್ಚಿಬಿದ್ದರು.
ಜಿಪಂ ಉಪಾಧ್ಯಕ್ಷೆ ಅಲುವೇಲಮ್ಮ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಮೋಲ್ ಮೋಹನ್, ಜಿಪಂ ಉಪ ಕಾರ್ಯದರ್ಶಿ ಬದನೂರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.