ಜಿಲ್ಲಾ ಖಜಾನೆ ವೈಫಲ್ಯ: ಸರ್ಕಾರಕ್ಕೆ 49.92 ಲಕ್ಷ ನಷ್ಟ
ಕೋಲಾರ: ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿರುವ 49.92 ಲಕ್ಷ ರು. ಹಗರಣಕ್ಕೆ ಜಿಲ್ಲಾ ಖಜಾನೆಯ ವೈಫಲ್ಯವೇ ಕಾರಣವೆಂದು ಮಹಾಲೇಖಪಾಲಕರು ರಾಜ್ಯ ಸರ್ಕಾರಕ್ಕೆ ವರದಿ ನೀಡಿರುವುದರಿಂದ ಜಿಲ್ಲಾ ಖಜಾನೆಯಲ್ಲಿ ತಳಮಳ ಉಂಟಾಗಿದೆ.
ಜಿಲ್ಲಾ ಖಜಾನೆಯ ದ್ವಿತೀಯ ದರ್ಜೆ ಸಹಾಯಕ ಎನ್. ವೆಂಕಟೇಶ್ ಎಂಬುವರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲು ಆಗಿ ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಮಹಾಲೇಖಪಾಲಕರು ನಡೆಸಿರುವ ತನಿಖೆಯಿಂದ ಸಾಬೀತು ಆಗಿರುವುದರಿಂದ ಜಿಲ್ಲಾ ಖಜಾನೆಯ ಮತ್ತಷ್ಟು ಅಧಿಕಾರಿಗಳು ಮನೆಗೆ ಹೋಗುವ ಸಾಧ್ಯತೆಗಳಿವೆ. ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ದಲಿತ ಸಂಘರ್ಷ ಸಮಿತಿ ಲೋಕಾಯುಕ್ತರಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ 2012ರ ನವೆಂಬರರ್ತಿಂಗಳಲ್ಲಿ ಲೋಕಾಯುಕ್ತ ಪೊಲೀಸರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕೆಲ ಅಧಿಕಾರಿಗಳ ಜೊತೆ ಜಿಲ್ಲಾ ಖಜಾನೆಯ ದ್ವಿತೀಯ ದರ್ಜೆ ಸಹಾಯಕ ವೆಂಕಟೇಶ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಣ ದುರುಪಯೋಗವಾಗಿರುವುದು ಬೆಳಕಿಗೆ ಬಂದಿತ್ತು. ಮತ್ತಷ್ಟು ತನಿಖೆಗಾಗಿ ಸರ್ಕಾರದ ಮನವಿ ಮೇರೆಗೆ ಮಹಾಲೇಖಪಾಲಕರು ಜಿಲ್ಲಾ ಖಜಾನೆಯಲ್ಲಿ ಶೋಧನೆ ನಡೆಸಿದಾಗ ಕೆಟಿಸಿ ನಿಯಮ 25 ಮತ್ತು 29 ರನ್ವಯ ಖಜಾನೆಗಳ ಭದ್ರತೆಗಾಗಿ ಸೂಕ್ತ ವ್ಯವಸ್ಥೆ ಮಾಡದಿರುವುದು ಹಾಗೂ ಖಜಾನೆ ವ್ಯವಹಾರಗಳಲ್ಲಿ ಅಂತರಿಕ ಭದ್ರತೆ ಇಲ್ಲದಿರುವುದು ಕಂಡು ಬಂದಿರುವುದನ್ನು ಸರ್ಕಾರಕ್ಕೆ ವರದಿ ಮಾಡಲಾಗಿದೆ.
ದ್ವಿತೀಯ ದರ್ಜೆ ಸಹಾಯಕ ವೆಂಕಟೇಶ್ ಅವರು ಕಳೆದ 17 ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುವ ಮೂಲಕ ಅನೇಕ ಅವ್ಯವಹಾರಗಳಿಗೆ ಕಾರಣರಾಗಿದ್ದಾರೆಂದು ತನಿಖಾಧಿಕಾರಿಗಳು ಅಭಿಪ್ರಾಯಿಸಿದ್ದಾರೆ. ಹಗರಣದಲ್ಲಿ ಜಿಲ್ಲಾ ಖಜಾನೆ ಅಧಿಕಾರಿ ಪಾತ್ರ ಇಲ್ಲದಿದ್ದರೂ ಇಲಾಖೆಯಲ್ಲಿನ ಸಿಬ್ಬಂದಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳದಿರುವ ಬಗ್ಗೆ ಮಹಾಲೇಖಪಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲದೆ, ಇಲಾಖೆಯನ್ನು ಸರಿಪಡಿಸಲು ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.