ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ಸುಧಾಕರ್
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಸೆ. 16
ಕ್ರೀಡೆಗಳನ್ನು ಪ್ರತಿಯೊಬ್ಬರು ಆಡುವುದರ ಮೂಲಕ ದೈಹಿಕವಾಗಿ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು. ಇದರ ಜತೆಗೆ ಮನಸ್ಸಿಗೆ ಸಂತೋಷ ಮತ್ತು ಮನರಂಜನೆ ಮಾಡುತ್ತದೆ ಎಂದು ಶಾಸಕ ಡಾ.ಕೆ. ಸುಧಾಕರ್ ತಿಳಿಸಿದರು.
ಅವರು ನಗರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪೈಕಾ (ಗ್ರಾಮೀಣ), ದಸರಾ ಮತ್ತು ಮಹಿಳಾ ಕ್ರೀಡಾಕೂಟಗಳನ್ನು ಉದ್ಘಾಟಿಸಿದ ನಂತರ ಮಾತನಾಡುತ್ತಾ, ಜಿಲ್ಲೆಯಲ್ಲಿರುವ ಪ್ರತಿ ಮಗುವಿಗೆ ಕ್ರೀಡೆಗಳಲ್ಲಿ ಸಕ್ರಿಯಾವಾಗಿ ಭಾಗವಹಿಸುವಂತೆ ಮಾಡಬೇಕು. ಪ್ರಾಥಮಿಕ ಹಂತ ಮಕ್ಕಳಿಗೆ ಕ್ರೀಡೆಗಳಲ್ಲಿ ಆಸಕ್ತಿಗೊಳ್ಳುವ ಆಟಗಳನ್ನು ದೈಹಿಕ ಶಿಕ್ಷಕರು ಕಲಿಸಬೇಕು ಎಂದು ಹೇಳಿದರು.
ಮಕ್ಕಳಿಗೆ ಕ್ರೀಡೆಗಳು ಆಸಕ್ತಿಯನ್ನು ಹಾಗೂ ಉತ್ಸಾಹವನ್ನು ತುಂಬುವಂತೆ ಮಾಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರೀಡೆಗಾಗಿ ಸಾಕಷ್ಟು ಹಣವನ್ನು ಮೀಸಲಿಡುತ್ತಿದೆ.ಇದರ ಲಾಭವನ್ನು ಕ್ರೀಡಾಪಟುಗಳು ಬಳಸಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿರುವ ಕ್ರೀಡಾಪಟುಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಮಾದರಿಯಾಗಬೇಕು ಎಂದು ಸಂದೇಶ ನೀಡಿದರು.
ಜಿ.ಪಂ. ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಮಾತನಾಡಿ ರಾಜ್ಯಕ್ಕೆ ಹಾಗೂ ಕೇಂದ್ರಕ್ಕೆ ಒಳ್ಳೆಯ ಹೆಸರು ತರುವಂತಹ ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಾಧನೆ ಮಾಡಬೇಕು. ಭಾರತ ದೇಶ ಅಂತಾರಾಷ್ಟ್ರೀಯ ಕ್ರೀಡಾರಂಗದಲ್ಲಿ ದಿನೇ ದಿನೇ ಪ್ರಗತಿ ಹೊಂದುತ್ತಿದ್ದು, ಗ್ರಾಮೀಣ ಭಾಗದ ಪ್ರದೇಶಗಳಿಂದ ಕ್ರೀಡೆಗಳನ್ನು ಏರ್ಪಡಿಸುವುದರಿಂದ ಸೂಕ್ತವಾದ ಪ್ರತಿಭೆಯುಳ್ಳ ಕ್ರೀಡಾಪಟುಗಳು ರೂಪುಗೊಳ್ಳುತ್ತಾರೆ ಎಂದು ಹೇಳಿದರು.
ಜಿಲ್ಲೆಯ 6 ತಾಲೂಕುಗಳಿಂದ ಸುಮಾರು 200 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕ್ರೀಡಾಪಟು ಭರತ್ ಮತ್ತು ತಂಡದವರು ಕ್ರೀಡಾಜ್ಯೋತಿಯನ್ನು ಹೊತ್ತು ತಂದರು.
ಜಿ.ಪಂ. ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ, ಕ್ರೀಡಾ ಅಧಿಕಾರಿ ಮುನಿಸ್ವಾಮಿ, ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಹಾಗೂ ದೈಹಿಕ ಶಿಕ್ಷಕ ಮಾರುತಿ ಹಾಜರಿದ್ದರು.