ಮೋದಿಯಿಂದ ದೇಶದ ಅಭಿವೃದ್ಧಿ ಅಸಾಧ್ಯ
ಕ.ಪ್ರ. ವಾರ್ತೆ, ಕೋಲಾರ, ಸೆ.16
ಗುಜರಾತ್ ರಾಜ್ಯದಲ್ಲಿ ಭ್ರೂಣಹತ್ಯೆಗಳು ತಡೆಯಲಾಗದ ಅಲ್ಲಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿಯಾದರೆ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮೀ ಪ್ರಶ್ನಿಸಿದರು.
ನಗರದ ಲಯನ್ಸ್ ಕ್ಲಬ್ನಲ್ಲಿ ಸೋಮವಾರ ಜನವಾದಿ ಮಹಿಳಾ ಸಂಘಟನೆಯ ಕೋಲಾರ ಜಿಲ್ಲಾ 4ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಗುಜರಾತ್ ರಾಜ್ಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗುವುದಕ್ಕೆ ಭ್ರೂಣಹತ್ಯೆ ಕಾರಣವಾಗಿದೆ. ಅಲ್ಲಿನ ಜನ ಕರ್ನಾಟಕದ ಬಳ್ಳಾರಿ ಸೇರಿದಂತೆ ಇನ್ನಿತರ ಕಡೆಗಳಿಂದ ಲಂಬಾಣಿ ಹೆಣ್ಣು ಮಕ್ಕಳನ್ನು ಗುಜರಾತಿಗೆ ಕರೆದುಕೊಂಡು ಮಾರಾಟ ಮಾಡುತ್ತಿದ್ದಾರೆ, ಇದನ್ನು ತಡೆಯಲಾಗದ ಮೋದಿಯವರಿಗೆ ದೇಶದ ಹೆಣ್ಣು ಮಕ್ಕಳ ಸಂರಕ್ಷಣೆ ಹೇಗೆ ಸಾಧ್ಯವಾಗುತ್ತದೆ, ಇಂತಹ ವ್ಯಕ್ತಿಯಿಂದ ದೇಶದ ಅಭಿವೃದ್ಧಿ ನಿರೀಕ್ಷೆ ಮಾಡುವುದು ಕಷ್ಟವೆಂದರು.
ಮಹಿಳೆಯರು ದೌರ್ಜನ್ಯ ಮುಕ್ತ ಬದುಕು ನಡೆಸುವಂತಹ ವಾತಾವರಣ ನಿರ್ಮಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯ ಎಂದು ಕೆ.ಎಸ್. ಲಕ್ಷ್ಮೀ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ 4700 ಅತ್ಯಾಚಾರ: ದೇಶದಲ್ಲಿ ಪ್ರತಿ ಮೂರು ನಿಮಿಷಕ್ಕೊಂದು ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳ, 20 ನಿಮಿಷಕ್ಕೊಂದು ಅತ್ಯಾಚಾರ, ಪ್ರತಿ ದಿನ ಕೊಲೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 4700 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಇನ್ನೂ ಅದೆಷ್ಟೋ ಪ್ರಕರಣಗಳನ್ನು ರಾಜಿ ಮಾಡಿಸುತ್ತಿದ್ದಾರೆಂದರು.
ದೌರ್ಜನ್ಯದ ಜೊತೆಗೆ ಮಹಿಳೆಯನ್ನು ಅಪೌಷ್ಟಿಕತೆ ತೀವ್ರವಾಗಿ ಕಾಡುತ್ತಿದ್ದು, ದೇಶದ ಒಟ್ಟು ಮಹಿಳೆಯರಲ್ಲಿ ಶೇ.50ಕ್ಕೂ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹೆರಿಗೆಯ ಸಮಯದಲ್ಲಿ ಸಾವಿರಾರು ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ.
ಹುಟ್ಟುವ ಮಕ್ಕಳಲ್ಲಿ ಶೇ.50ರಷ್ಟು ಮಂದಿ ಅಪೌಷ್ಟಿಕತೆಯಿಂದ ಕಡಿಮೆ ತೂಕವನ್ನು ಹೊಂದಿರುತ್ತಾರೆ ಎಂದು ವಿವರಿಸಿದ ಅವರು, ಅಗತ್ಯ ವಸ್ತುಗಳ ದರಗಳು ತೀವ್ರವಾಗಿ ಏರಿಕೆಯಾಗಿರುವುದರಿಂದ ಮಹಿಳೆಯರು ಶಕ್ತಿಯುತ ಆಹಾರ ದೊರೆಯದೇ ಇರುವುದು ಕಾರಣವಾಗಿದೆ ಎಂದು ತಿಳಿಸಿದರು.
ಸರ್ಕಾರ ಬಿಪಿಎಲ್ ಮತ್ತು ಎಪಿಎಲ್ ತಾರತಮ್ಯವಿಲ್ಲದೇ ಎಲ್ಲರಿಗೂ ಪಡಿತರ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಬೇಕೆಂದು ಅವರು ಒತ್ತಾಯಿಸಿದರಲ್ಲದೆ, ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಮಾಡಬೇಕೆಂದು ಕರೆ ನೀಡಿದರು.
ನೂತನ ಜಿಲ್ಲಾ ಸಮಿತಿ ರಚನೆ: ಸಮ್ಮೇಳನದ ಕೊನೆಯಲ್ಲಿ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ವಿ. ಗೀತಾ, ಉಪಾಧ್ಯಕ್ಷರಾಗಿ ಜಯಲಕ್ಷ್ಮೀ, ಆಂಜನಮ್ಮ, ಕಾರ್ಯದರ್ಶಿಯಾಗಿ ಜ್ಯೋತಿ, ಸಹ ಕಾರ್ಯದರ್ಶಿಗಳಾಗಿ ಕೆ.ಎಂ. ಸುಶೀಲ, ಜಯಲಕ್ಷ್ಮೀ, ಖಜಾಂಚಿಯಾಗಿ ಲೋಕೇಶ್ವರಿ ಆಯ್ಕೆಯಾದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಅಂಬರೀಷ್, ಕಾರ್ಯದರ್ಶಿ ವಾಸುದೇವರೆಡ್ಡಿ, ಡಿವೈಎಫ್ಐನ ಜಿಲ್ಲಾ ಕಾರ್ಯದರ್ಶಿ ವಿಜಯಕೃಷ್ಣ ಹಾಗೂ ಜನವಾದಿ ಮಹಿಳಾ ಸಂಘಟನೆಯ ವಿವಿಧ ತಾಲೂಕುಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.