ಸಾಹಿತಿ ಅನಂತಮೂರ್ತಿ ಹೇಳಿಕೆಗೆ ಖಂಡನೆ
ಕೋಲಾರ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವುದಾದರೆ ನಾನು ಬದುಕಿರಲು ಇಷ್ಟಪಡುವುದಿಲ್ಲವೆಂಬ ಹೇಳಿಕೆ ನೀಡಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿಯವರನ್ನು ಕರ್ನಾಟಕ ಸರ್ಕಾರ ಕೂಡಲೇ ಗಡಿಪಾರು ಮಾಡಬೇಕೆಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಆಗ್ರಹಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗುಜರಾತಿನಲ್ಲಿ ನಡೆದಿರುವ ಅಭಿವೃದ್ಧಿ ಹಾಗೂ ಅಲ್ಲಿನ ಜನತೆಯಲ್ಲಿ ಸೌಹಾರ್ದತೆ ಮೂಡಿಸಿರುವ ಮೋದಿಯ ಬಗ್ಗೆ ಅಸೂಯೆ ಹೊಂದಿರುವ ಅನಂತಮೂರ್ತಿ ಉದ್ಧಟತನದ ಹೇಳಿಕೆ ನೀಡುವ ಮೂಲಕ ಜನತೆಯನ್ನು ದಿಕ್ಕುತಪ್ಪಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಮೋದಿಯವರನ್ನು ಕೋಮುವಾದಿ ಎಂದು ಟೀಕಿಸಿರುವ ಅನಂತಮೂರ್ತಿ ದೊಡ್ಡ ಅವಕಾಶವಾದಿ, ತಮ್ಮ ದ್ವಂದ್ವ ನಿಲುವುಗಳ ಮೂಲಕ ಜನತೆಯಿಂದ ದೂರ ಸರಿಯುತ್ತಿದ್ದಾರೆ. ಪ್ರಚಾರಕ್ಕಾಗಿ ಹಾಗೂ ಕಾಂಗ್ರೆಸ್ ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿರುವ ಅನಂತಮೂರ್ತಿ ಕೂಡಲೇ ಮೋದಿ ವಿರುದ್ಧ ನೀಡಿರುವ ಹೇಳಿಕೆ ಹಿಂದಕ್ಕೆ ಪಡೆಯದಿದ್ದರೆ ಅವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.