ಸುದ್ದಿ ಸಂಕ್ಷೇಪ
ಚಿಕ್ಕಬಳ್ಳಾಪುರಕ್ಕೆ ನಾಳೆ ಕೃಷ್ಣಬೈರೇಗೌಡ
ಚಿಕ್ಕಬಳ್ಳಾಪುರ: ಕೃಷಿ ಸಚಿವ ಕೃಷ್ಣಬೈರೇಗೌಡ ಸೆ. 18 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅವರು ಬುಧವಾರ ಬೆಳಗ್ಗೆ 10.30ಕ್ಕೆ ಚಿಕ್ಕಬಳ್ಳಾಪುರಕ್ಕೆ ಆಗಮಿಸುವರು. ಬೆಳಗ್ಗೆ 11 ಗಂಟೆಗೆ ಕ್ಷೇತ್ರ ತಪಾಸಣೆ ನಡೆಸುವರು. ಮಧ್ಯಾಹ್ನ 2.30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿದೆ. ನಂತರ ಸಂಜೆ 4.30ಕ್ಕೆ ಕೇಂದ್ರ ಸಚಿವರು ಹಾಗೂ ಲೋಕಸಭಾ ಸದಸ್ಯರು ಶಾಸಕರು, ವಿಧಾನ ಪರಿಷತ್ ಸದಸ್ಯರು, ಅಧ್ಯಕ್ಷರು, ಜಿ.ಪಂ.,ಇತರೆ ಜನಪತ್ರಿನಿಧಿಗಳೊಂದಿಗೆ ಚರ್ಚೆ ನಡೆಸುವರು. ನಂತರ ಸಂಜೆ 5.30 ಕ್ಕೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ
ಚಿಕ್ಕಬಳ್ಳಾಪುರ: ಜಿಲ್ಲಾ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಸಹಶಿಕ್ಷಕರ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡುವವರೆಗೆ ಅಥವಾ ಮಾರ್ಚ್ -2014 ವರೆಗೆ ಹಾಗೂ ಅಡ್‌ಹಾಕ್ ವ್ಯವಸ್ಥೆಯಡಿ 240 ಪ್ರಾಥಮಿಕ ಮತ್ತು 32 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಆಯ್ಕೆಮಾಡಿಕೊಳ್ಳಲು ಸರ್ಕಾರ ಆದೇಶ ಸಂಖ್ಯೆ ಇಡಿ 87ಯೋಯೋಕ 2013 ದಿನಾಂಕ 14-08-2013ರಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅನುಮತಿ ನೀಡಲಾಗಿದ್ದ ಆದೇಶವನ್ನು ಸರ್ಕಾರಿ ಆದೇಶ ಸಂಖ್ಯೆ ಇಡಿ 194ಎಸ್‌ಟಿಬಿ 2013, ಬೆಂಗಳೂರು, ದಿನಾಂಕ13-09-2013ರಂತೆ ಮಾರ್ಪಡಿಸಿ, ಸಂಬಂಧಿಸಿದ ಖಾಲಿ ಹುದ್ದೆಗಳನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅಧಿಕಾರ ನೀಡಿ ಆದೇಶಿಸಲಾಗಿದೆ ಎಂದು ಜಿಲ್ಲಾ ಉಪನಿರ್ದೇಶಕ ಅಜಿತ್ ಪ್ರಸಾದ್ ತಿಳಿಸಿದ್ದಾರೆ. ಅಭ್ಯರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಪ್ರಕಟಿಸಿರುವ ಖಾಲಿ ಹುದ್ದೆಗಳಿರುವಂತಹ ಶಾಲೆಯ ಮುಖ್ಯೊಪಾಧ್ಯಾಯರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ನಾಳೆ ತರಬೇತಿಗಳಿಗೆ ಮಾರ್ಗದರ್ಶನ ಸಭೆ
ಗುಡಿಬಂಡೆ: ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯಡಿ ಪಟ್ಟಣದ ಬಡಜನತೆಗೆ ವಿವಿಧ ಕಸುಬುಗಳಲ್ಲಿ ತರಬೇತಿ ನೀಡಲು ಮಾರ್ಗದರ್ಶನ ಸಭೆಯೊಂದನ್ನು 18ರ ಬುಧವಾರ ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಿದೆ. ಈ ಸಭೆಯಲ್ಲಿ ಅರ್ಹರು ಪಾಲ್ಗೊಂಡು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆಯೆಂದು ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ತಿಳಿಸಿದ್ದಾರೆ.