ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುದ್ದಿ ಸಂಕ್ಷೇಪ

Mainashree
Updated On : 16 Sept 2013, 11:51 am

ಪೈಪ್‌ಲೈನ್ ಸಂಪರ್ಕ ಕಲ್ಪಿಸಲು ಆಗ್ರಹ
ಚಿಂತಾಮಣಿ: ನಗರಸಭೆ 22ನೇ ವಾರ್ಡಿನ ಕೋದಂಡರಾಮಸ್ವಾಮಿ ರಸ್ತೆ ಬಳಿ ನೂತನವಾಗಿ ಬೋರ್‌ವೆಲ್ ಕೊರೆಸಿ ತಿಂಗಳು ಕಳೆದರೂ ಅದಕ್ಕೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಿಕೊಡುವಲ್ಲಿ ನಗರಸಭೆಯ ಅಧಿಕಾರಿಗಳು ವಿಫಲಗೊಂಡಿದ್ದಾರೆಂದು ಇಲ್ಲಿನ ನೂರಾರು ನಿವಾಸಿಗಳು ಆರೋಪಿಸಿದ್ದಾರೆ. ಪಟ್ಟಣದ 22ನೇ ವಾರ್ಡ್‌ನ ಆಜಾದ್ ಚೌಕ ಹತ್ತಿರದ ಕೋದಂಡರಾಮಸ್ವಾಮಿ ರಸ್ತೆ ಬಳಿ ನೂತನವಾಗಿ ಬೋರ್‌ವೆಲ್ ಕೊರೆಸಿ 1 ತಿಂಗಳು ಕಳೆಯುತ್ತಿದ್ದರೂ ಇಲ್ಲಿನ ನಿವಾಸಿಗಳಿಗೆ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದರೂ ನಗರಸಭಾ ಸದಸ್ಯರಾಗಲಿ ಅಥವಾ ಅಧಿಕಾರಿಗಳಾಗಲಿ ಸ್ಪಂದಿಸದೆ ಕಾಲಹರಣ ಮಾಡುತ್ತಿದ್ದಾರೆ. ಕೂಡಲೇ ಪೈಪ್‌ಲೈನ್ ಸಂಪರ್ಕ ಕಲ್ಪಿಸಲು ಆಗ್ರಹಿಸಿದ್ದಾರೆ.
ಸಾಕ್ಷರತಾ
ಪ್ರೇರಕರ ಸಭೆ
ಚಿಂತಾಮಣಿ: ಸಾಕ್ಷರ ಭಾರತ್ ನಿರ್ಮಾಣ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿರುವುದರ ಹಿನ್ನೆಲೆಯಲ್ಲಿ ತಾಲೂಕು ಸಾಕ್ಷರತಾ ಸಮಿತಿ ವತಿಯಿಂದ ಪಟ್ಟಣದ ಸರ್ಕಾರಿ ಮಾದರಿ ಬಾಲಕರ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಸಾಕ್ಷರತಾ ಸಮಿತಿ ಕಚೇರಿಯಲ್ಲಿ ಸೆ.17 ರಂದು ಬೆಳಗ್ಗೆ 10.30ಕ್ಕೆ ತಾಲೂಕಿನಾದ್ಯಂತ ಈ ಹಿಂದೆ ಪ್ರೇರಕ- ಉಪಪ್ರೇರಕರಾಗಿ ಸಭೆ ಕರೆಯಲಾಗಿದೆ ಎಂದು ತಾಲೂಕು ಸಾಕ್ಷರತಾ ಸಮಿತಿ ಸಂಯೋಜಕ ವಿ.ಗಂಗುಲಪ್ಪ ತಿಳಿಸಿದ್ದಾರೆ.
ತರಗತಿ ಬಹಿಷ್ಕರಿಸಿ ಪ್ರತಿಭಟನೆ
ಚಿಂತಾಮಣಿ: ಆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಅನ್ಯಾಯವಾಗುತ್ತಿದೆಯೆಂದು ಆರೋಪಿಸಿ ನೂರಾರು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ಗ್ರಾಮದಲ್ಲಿ ನಡೆದಿದೆ. ಆನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ಪಾಠ- ಪ್ರವಚನಗಳಿಗೆ ತೊಂದರೆಯಾಗುತ್ತಿದೆ. ಕಳೆದ ಹಲವು ತಿಂಗಳಿಂದ ಗಣಿತ ಮತ್ತು ಹಿಂದಿ ಭಾಷೆಗೆ ಸಂಬಂಧಿಸಿ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮೇಲಧಿಕಾರಿಗಳು ಶಿಕ್ಷಕರನ್ನು ಭರ್ತಿ ಮಾಡದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ. ರಂಗಯ್ಯ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ, ಮುಂದಿನ ದಿನಗಳಲ್ಲಿ ಶಿಕ್ಷಕರ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ವೈದ್ಯರ ಮನೆಯಲ್ಲಿ ಕಳ್ಳತನ
ಬಂಗಾರಪೇಟೆ: ಪಟ್ಟಣದ ಶ್ಯಾಮ್ ಆಸ್ಪತ್ರೆಯಲ್ಲಿರುವ ವೈದ್ಯರ ಮನೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿ 4 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿರುವ ಪ್ರಕರಣ ಕಳೆದ ರಾತ್ರಿ ನಡೆದಿದೆ. ಪಟ್ಟಣದ ಹೊರವಲಯದಲ್ಲಿರುವ ಶ್ಯಾಮ್ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅಶೋಕವರ್ದನ್ ಅವರು ಆಸ್ಪತ್ರೆಯ ಒಂದು ಭಾಗದಲ್ಲಿ ವಾಸವಾಗಿದ್ದು, ಸೆ.14ರಂದು ಬೇರೆ ಊರಿಗೆ ತೆರಳಿದ್ದರು. ಸೋಮವಾರ ಬೆಳಗ್ಗೆ ಬಂದು ನೋಡಿದಾಗ ತಮ್ಮ ಮನೆಯ ಬಾಗಿಲು ಮುರಿದಿದ್ದು ಬೀರುವಿನಲ್ಲಿದ್ದ 4 ಲಕ್ಷ ನಗದನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಈ ಘಟನೆಗೆ ತಮ್ಮ ಆಸ್ಪತ್ರೆಯಲ್ಲಿ ಈ ಹಿಂದೆ ಅಥವಾ ಪ್ರಸ್ತುತ ಕೆಲಸ ಮಾಡುವ ನೌಕರರು ಕೆಲಸ ಮಾಡುವವರು ಈ ಕೃತ್ಯ ನಡೆಸಿರಬಹುದು ಎಂದು ವೈದ್ಯರು ಅನುಮಾನವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಚಿಟ್ನಹಳ್ಳಿಯಲ್ಲಿಂದು ಕೃಷಿ ವಸ್ತು ಪ್ರದರ್ಶನ
ಕೋಲಾರ: ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದ ಆಶ್ರಯದಲ್ಲಿ ಕೃಷಿ ಮತ್ತು ರೇಷ್ಮೆ ಕೃಷಿ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ತಾಲೂಕಿನ ಚಿಟ್ನಹಳ್ಳಿಯ ಸಮುದಾಯ ಭವನದ ಮುಂಭಾಗ ಸೆ.17ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೂ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.
ಪದವಿ ಫಲಿತಾಂಶ ವಿಳಂಬ ಖಂಡಿಸಿ ಪ್ರತಿಭಟನೆ
ಕೋಲಾರ: ಬೆಂಗಳೂರು ವಿಶ್ವವಿದ್ಯಾಲಯ ಪದವಿ ಫಲಿತಾಂಶವನ್ನು ಪ್ರಕಟಿಸುವಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಗರದ ಬಾಲಕರ ಕಾಲೇಜು ವೃತ್ತದಿಂದ ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಬೆಂಗಳೂರು ವಿವಿಯ ವಿರುದ್ಧ ದೂರು ಸಲ್ಲಿಸಿದ ವಿದ್ಯಾರ್ಥಿಗಳು, ಫಲಿತಾಂಶ ವಿಳಂಬದಿಂದ ವಿದ್ಯಾರ್ಥಿಗಳಿಗೆ ಆತಂಕ ಉಂಟಾಗಿರುವುದರಿಂದ ಸರ್ಕಾರ ಮಧ್ಯ ಪ್ರವೇಶ ಮಾಡಿ ಸಮಸ್ಯೆ ನಿವಾರಿಸಬೇಕೆಂದು ಆಗ್ರಹಿಸಿದರು. ಈಗಾಗಲೇ ತರಗತಿಗಳು ಪ್ರಾರಂಭವಾಗಿ 2 ತಿಂಗಳು ಕಳೆದಿವೆ. ಬಿಬಿಎಂ 2ನೇ ಸೆಮಿಸ್ಟರ್ ಫಲಿತಾಂಶ ಬಿಟ್ಟರೆ ಬೇರಾವ ಪರೀಕ್ಷೆಗಳ ಫಲಿತಾಂಶವು ಪ್ರಕಟವಾಗಿಲ್ಲವೆಂದು ವಿದ್ಯಾರ್ಥಿಗಳು ಆರೋಪಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ತಿನ ಮುಖಂಡರಾದ ಮುರಳಿ, ಸುನೀಲ್, ರಾಜುಗೌಡ, ಸುರೇಶ್, ಪ್ರವೀಣ್, ಹರೀಶ್, ಸುರೇಂದ್ರ, ನಾಗೇಶ್, ಸೋಮು, ಹರೀಶ್ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement