20ರಂದು ಪೂರ್ವಭಾವಿ ಸಭೆ
ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನ ಉದ್ಘಾಟನಾ ಸಮಾರಂಭದ ಯಶಸ್ಸಿಗೆ ಕೈಗೊಳ್ಳಬಹುದಾದ ಕಾರ್ಯ ಯೋಜನೆ ಕುರಿತು ಮುಖಂಡರ ಅಭಿಪ್ರಾಯ, ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ಪಡೆಯಲು ಸೆ. 20ರಂದು ಪೂರ್ವಯೋಜಿತ ಸಭೆ ಕರೆಯಲಾಗಿದೆ ಶಾಸಕ ಡಾ. ಕೆ. ಸುಧಾಕರ್ ತಿಳಿಸಿದರು.
ತಾಲೂಕು ಕೇಂದ್ರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಜಿಲ್ಲಾ ಕೇಂದ್ರದಲ್ಲಿ ಹಾಗೂ ಜಿಲ್ಲೆಗೆ ಆಗಬೇಕಾದ ಪ್ರಗತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅರಿವಿದೆ. ಈಗಾಗಲೇ ಸಾಕಷ್ಟು ಸೌಕರ್ಯವನ್ನು ಬಜೆಟ್ನಲ್ಲಿ ಕಲ್ಪಿಸಿದ್ದಾರೆ. ಕೆಲ ಅಭಿವೃದ್ಧಿಗೆ ಚಾಲನೆ ನೀಡಲಿದ್ದಾರೆ. ಮುಂದಿನ ವರ್ಷದಲ್ಲಿ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಿದ್ದಾರೆ. ಅವರು ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ನಮ್ಮ ಅಭೂತಪೂರ್ವ ಕಾರ್ಯಕರ್ತರ ಬೆಂಬಲ ಅವರಿಗೆ ವ್ಯಕ್ತವಾಗಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ ಈ ಭಾಗದಲ್ಲಿ ಸದೃಢವಾಗಿದೆ ಎಂಬ ಸಂದೇಶವನ್ನು ಅಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೂಡಿಸಬೇಕಿದೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಮೂಲಕ ಸಮಾರಂಭಕ್ಕೆ ಕಳೆ ಹೆಚ್ಚಿಸಬೇಕು. ಬೆಳಗಿನ ಸಮಾರಂಭದ ನಂತರ ಊಟದ ವ್ಯವಸ್ಥೆ ಕೂಡ ಇರುತ್ತದೆ ಎಂದು ಹೇಳಿದರು.
ಬೆಂಗಳೂರಿನ ಉಪನಗರವನ್ನಾಗಿ ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿಪಡಿಸಬೇಕೆಂಬ ಒತ್ತಡವನ್ನು ಮುಖ್ಯಮಂತ್ರಿಗಳ ಮೇಲೆ ತಂದಿದ್ದೇವೆ. ನಮ್ಮ ಹೋರಾಟ ಏನಿದ್ದರೂ ಶಾಶ್ವತ ನೀರಾವರಿಗೆ ಆಗಿದೆ.ಅದರೊಂದಿಗೆ ಇನ್ನೂ ಅನೇಕ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದಿಡೋಣ ಎಂದಲ್ಲದೇ, 28 ಗ್ರಾ.ಪಂ. ವ್ಯಾಪ್ತಿಯಿಂದ ವ್ಯಾಪಕವಾಗಿ ಜನ ಬರಬೇಕೆಂದು ನನ್ನ ಆಶಯ. ಮುಖಂಡರು ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ಮುಖಂಡರಾದ ಎಸ್.ವೈ. ಮರಿಯಪ್ಪ, ನವೀನ್ ಕಿರಣ್, ಜಿ.ಆರ್. ಶ್ರೀನಿವಾಸ್, ಸುಬ್ಬರಾಯಪ್ಪ, ಪುರದಗಡ್ಡೆ ಕೃಷ್ಣಪ್ಪ, ಪಿ.ಎಂ. ರಾಮಸ್ವಾಮಿ, ನಾರಾಯಣಸ್ವಾಮಿ, ರಿಯಾಜ್, ನಾರಾಯಣಮ್ಮ, ದೇವಿಕುಮಾರಿ ಮತ್ತಿತರರು ಮಾತನಾಡಿದರು.