ಜಿಲ್ಲಾಡಳಿತ ಭವನ ಉದ್ಘಾಟನೆಗೆ ಮುಹೂರ್ತ ನಿಗದಿ: ಆಕ್ರೋಶ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಸೆ.17
ಜಿಲ್ಲಾಡಳಿತ ಭವನ ಉದ್ಘಾಟನೆಗೆ ಸೆ. 20 ಮುಹೂರ್ತ ನಿಗದಿಯಾಗಿರುವುದರ ನಡುವೆ ಜಿಲ್ಲೆಯ ಹಲವೆಡೆ ಅಸಮಾಧಾನದ ಹೊಗೆಯಾಡುತ್ತಿದೆ.
ಕಟ್ಟಡಕ್ಕೆ ಸರ್ ಎಂವಿ ಹೆಸರಿಡುವ ನಿರ್ಧಾರದ ವಿಷಯದಲ್ಲಿ ಮೌನ ವಹಿಸಿರುವುದು ಮತ್ತು ಕಾರ್ಯಕ್ರಮಕ್ಕೆ ಆಹ್ವಾನಿಸುವಲ್ಲಿ ಕೆಲವರನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಅಸಮಾಧಾನಕ್ಕೆ ಕಾರಣವಾಗಿದೆ. ಸೆ. 20 ರಂದು ನಡೆಯುವ ಕಾರ್ಯಕ್ರಮಕ್ಕೆ ಮಾಜಿ ಸಚಿವ ಮುಮ್ತಾಜ್ ಅಲಿಖಾನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದರೂ ತಾವು ಭಾಗವಹಿಸುವುದಿಲ್ಲ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರು ತಿಳಿಸಿದ್ದಾರೆ.
ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ನಗರದ ಹೊರವಲಯದಲ್ಲಿರುವ ಅಣಕನೂರು ಬಳಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಜಾಗ ಹುಡುಕಿದ್ದು, ಆಗ 20 ಕೋಟಿಯನ್ನು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ್ದರು. ಆ ಸಂದರ್ಭದಲ್ಲಿ ಜಿಲ್ಲಾಡಳಿತ ಭವನಕ್ಕೆ ಸರ್ ಎಂವಿ ಹೆಸರಿನ್ನಿಡಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿ ಬಂದಿತ್ತು. ಈ ಕಾರಣದಿಂದ ಚರ್ಚಿಸಿ, ಜಿಲ್ಲೆಯಲ್ಲಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಜನಿಸಿದ ಹಿನ್ನೆಲೆಯಲ್ಲಿ ಅವರ ಹೆಸರಿನ್ನಿಡಲು ತೀರ್ಮಾನಿಸಲಾಗಿತ್ತು. ಜತೆಗೆ ತಾವು ಈ ಬಗ್ಗೆ ಜನರಿಗೆ ಭರವಸೆ ನೀಡಿದ್ದು ಇದೀಗ ತಮ್ಮ ಮಾತು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಕೊರಗು ತಮ್ಮನ್ನು ಕಾಡುತ್ತಿದೆ. ಈಗಿನ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಕೇಳಿದಾಗ ಅಸಮರ್ಪಕ ಉತ್ತರ ಕೇಳಿ ಬಂದಿದ್ದು ತಮಗೆ ಅಸಮಾಧಾನವಾಗಿದೆ ಎಂದು ತಿಳಿಸಿದ್ದಾರೆ.