ಡಿಸಿ ವಶಕ್ಕೆ ನಕಲಿ ಗೊಬ್ಬರ, ಕೀಟನಾಶಕ
ಕ.ಪ್ರ.ವಾರ್ತೆ ಕೋಲಾರ ಸೆ.17
ನಗರದ ಕೆಎಸ್‌ಆರ್‌ಟಿಸಿ ಡಿಪೋ ಬಳಿ ಹೈದರಾಬಾದ್ ಮೂಲಕ ನವಭಾರತ ಫರ್ಟಿಲೈಸರ್ ಕಂಪನಿಯವರು ರೈತರೊಬ್ಬರಿಗೆ ಸರಬರಾಜು ಮಾಡಲು ಸಾಗಣೆ ಮಾಡುತ್ತಿದ್ದ ನಕಲಿ ಗೊಬ್ಬರ ಮತ್ತು ರಸಾಯನಿಕ ಕೀಟನಾಶಕ ಔಷಧಗಳನ್ನು ರೈತ ಸಂಘದ ಕಾರ್ಯಕರ್ತರು ತಡೆದು ಜಿಲ್ಲಾಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.
ಜಿಲ್ಲೆಯಲ್ಲಿ ನಕಲಿ ಗೊಬ್ಬರ ಮತ್ತು ರಸಾಯನಿಕ ಕೀಟನಾಶಕ ಔಷಧಗಳ ಮಾರಾಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿಸಿರುವ ರೈತ ಸಂಘದ ಮುಖಂಡರು ಕಂಪನಿಯ ಮಾರಾಟ ಪ್ರತಿನಿಧಿಯನ್ನು ಬಲೆಗೆ ಹಾಕಿಕೊಳ್ಳಲು ನಾಲ್ಕು ದಿನಗಳ ಹಿಂದೆಯೇ ಕಾರ್ಯತಂತ್ರ ರೂಪಿಸಿ ಮಂಗಳವಾರ ಗೊಬ್ಬರ ಮತ್ತು ಬಯೋ ಔಷಧಗಳು ತುಂಬಿದ್ದ ಕ್ಯಾಂಟರ್ ವಾಹನ ಹಿಡಿದು ಜಿಲ್ಲಾಧಿಕಾರಿಗಳ ವಶಕ್ಕೆ ಒಪ್ಪಿಸಿ ಕ್ರಮಕ್ಕೆ ಒತ್ತಾಯಿಸಿದರು.
ಇಟ್ಟಿಗೆ ಕಾರ್ಖಾನೆಯಲ್ಲಿ ಸಂಗ್ರಹಣೆ ಮಾಡುವ ಬೂದಿಗೆ ರಾಸಾಯನ ದ್ರಾವಣ ಮಿಶ್ರಣ ಮಾಡಿ ಅದನ್ನು ಗೊಬ್ಬರವೆಂದು ರೈತರಿಗೆ 50 ಕೆ.ಜಿ ಮೂಟೆಗೆ 700 ನಂತೆ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಕೃಷಿ ಅಧಿಕಾರಿಗಳಿಗೆ 6 ತಿಂಗಳಿಂದ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿಗಳಿಗೆ ದೂರಿದರು.
ಕಳೆದ 4 ದಿನದ ಹಿಂದೆ ಕಂಪನಿಯ ಸೇಲ್ಸ್ ಮ್ಯಾನೇಜರ್ ಅವರನ್ನು ಸಂಪರ್ಕಿಸಿದ ನಾನು ರೈತನಂತೆ ನಾಟಕವಾಡಿ ನಮ್ಮ ತೋಟಕ್ಕೆ 100 ಮೂಟೆ ಗೊಬ್ಬರ ಮತ್ತು ಔಷಧ ಬೇಕೆಂದು ಹೇಳಿ ಮುಂಗಡವಾಗಿ 12 ಸಾವಿರ ನೀಡಿ ರಸೀದಿ ಪಡೆದುಕೊಂಡಿದ್ದೆ. ಗೊಬ್ಬರ ಮತ್ತು ಬಯೋ ಔಷಧ ನೀಡಿದ ಮೇಲೆ ಉಳಿದ ಹಣವನ್ನು ನೀಡುವುದಾಗಿ ಹೇಳಿದ್ದರಿಂದ ಮಂಗಳವಾರ ಸೇಲ್ಸ್ ಮ್ಯಾನೇಜರ್ ಕ್ಯಾಂಟರ್‌ನಲ್ಲಿ ಗೊಬ್ಬರ ಮತ್ತು ಔಷಧ ಸಾಗಿಸುತ್ತಿದ್ದಾಗ ಹೊಂಚು ಹಾಕಿ ವಾಹನ ಹಿಡಿಯಲಾಗಿದ್ದು ಇದರಲ್ಲಿ ಇರುವ ಮಾಲು ನಕಲಿ ಎಂದು ಜಿಲ್ಲಾಧಿಕಾರಿಗಳಿಗೆ ರೈತ ಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ತಿಳಿಸಿದರು.
ದೂರು ನೀಡಿದರೂ ಬರಲಿಲ್ಲ: ನಕಲಿ ಗೊಬ್ಬರ ಮತ್ತು ಔಷಧ ವಿಚಾರವಾಗಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಈಗಲೂ ಸಹ ದೂರವಾಣಿ ಮೂಲಕ ತಿಳಿಸಿದರೂ ಸ್ಥಳಕ್ಕೆ ಬಂದಿಲ್ಲವೆಂದು ದೂರಿದರು.
ಕೋಲಾರ ಡಿವೈಎಸ್ಪಿ ಅವರಿಗೆ ದೂರವಾಣಿ ಮೂಲಕ ತಿಳಿಸಿ ಕ್ಯಾಂಟರ್ ವಾಹನವನ್ನು ತಮ್ಮ ವಶಕ್ಕೆ ನೀಡಿದ್ದೇವೆ. ರೈತರಿಗೆ ಆಗುತ್ತಿರುವ ವಂಚನೆ ತಪ್ಪಿಸಿ, ಕೃಷಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.
ಗೊಬ್ಬರ ಮತ್ತು ಔಷಧಗಳನ್ನು ಪರಿಶೀಲಿಸಿದ ನಂತರ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಿಕ್ಕಣ್ಣ ಮತ್ತು ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಗಾಯತ್ರಿ ಹಾಗೂ ಚಂದ್ರಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು ತಕ್ಷಣ ಕ್ಯಾಂಟರ್‌ನಲ್ಲಿ ಇರುವ ಗೊಬ್ಬರ ಮತ್ತು ಬಯೋ ಔಷಧಗಳ ಮಹಜರು ನಡೆಸಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಿದರು.
ಈ ಕಾರ್ಯಾಚರಣೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ, ನೀಲಕಂಠಪುರ ಮುನೇಗೌಡ, ಜಿಲ್ಲಾ ಕಾರ್ಯದರ್ಶಿ ಮೂರಂಡಹಳ್ಳಿ ಶಿವಾರೆಡ್ಡಿ, ತೇರ್ನಹಳ್ಳಿ ವೆಂಕಟೇಶಗೌಡ, ಆಂಜಿನಪ್ಪ, ಹೂವಳ್ಳಿ ನಾಗರಾಜ್, ನರಸಾಪುರ ಪುರುಷೋತ್ತಮ್, ಗೊಟ್ಟಿಕುಂಟೆ ಕೃಷ್ಣ, ಈಕಂಬಳ್ಳಿ ಮಂಜುನಾಥ್, ವಿದ್ಯಾರ್ಥಿ ಮುಖಂಡ ರಾಜೇಶ್, ಆವಲಪ್ಪ, ಕೆಂಬೋಡಿ ನಾರಾಯಣಸ್ವಾಮಿ ಮುಂತಾದವರು ಭಾಗವಹಿಸಿದ್ದರು.