ಪರಮಶಿವಯ್ಯ ವರದಿ ಮೂಲೆಗುಂಪು
ಕ.ಪ್ರ.ವಾರ್ತೆ ಗುಡಿಬಂಡೆ ಸೆ.17
ಬಯಲುಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ಅಂರ್ತಜಲ ಮಟ್ಟ ಕುಸಿತದಿಂದ ಇಲ್ಲಿನ ನೀರು ಕಲುಷಿತಗೊಂಡು ವಿಷವಾಗಿದ್ದು, ಅದೇ ನೀರನ್ನು ಈ ಭಾಗದ ಜನತೆ ಕುಡಿಯುತ್ತಿರುವುದರಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆಂದು ಅವಿಭಜಿತ ಕೋಲಾರ ಜಿಲ್ಲೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿ.ವಿ. ಶ್ರೀರಾಮರೆಡ್ಡಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಅವಿಭಜಿತ ಕೋಲಾರ ಜಿಲ್ಲೆ ಶಾಶ್ವತ ನೀರಾವರಿ ಹೋರಾಟ ಸಮಿತಿಯ ತಾಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಇವರಿಬ್ಬರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರ ಹಿತ ಕಾಯುವ ಸಲುವಾಗಿ ಹಾಗೂ ವೋಟ್ ಬ್ಯಾಂಕ್ ಕಾಪಾಡಿಕೊಳ್ಳುವ ದುರುದ್ದೇಶದಿಂದ ಪರಮಶಿವಯ್ಯ ವರದಿಯನ್ನು ದಿಕ್ಕು ತಪ್ಪಿಸಲು ಹಾಗೂ ಅದನ್ನು ಮೂಲೆಗುಂಪು ಮಾಡಲು ಎತ್ತಿನಹೊಳೆ ಯೋಜನೆಯೆಂಬ ಕುತಂತ್ರ ಹೂಡಿದೆ ಎಂದು ಆರೋಪಿಸಿದರು.
ನೀರಾವರಿ ಸಮಸ್ಯೆಗಳನ್ನು ರಾಜಕೀಯ ಸಮಸ್ಯೆಗಳನ್ನಾಗಿಸಿದ್ದು, ರಾಜ್ಯ ಸರ್ಕಾರ ಕಳೆದ ಬಜೆಟ್ ಮಂಡನೆಯಲ್ಲಿ ಎತ್ತಿನಹೊಳೆ ಯೋಜನೆ ಜಾರಿಗೊಳಿಸಲು 1500 ಕೋಟಿ ಮೀಸಲಿಟ್ಟಿದ್ದಾರೆ. ಆದರೆ, ಇದುವರೆಗೂ ಈ ಯೋಜನೆಗೆ ಯಾವುದೇ ರೀತಿಯ ಯೋಜನಾ ವರದಿಯಾಗಲಿ, ಪರಿಸರ ಇಲಾಖೆಯ ಅನುಮತಿಯಾಗಲಿ ಅಥವಾ ಕೇಂದ್ರ ನೀರಾವರಿ ಇಲಾಖೆಯಿಂದ ಅನುಮತಿಯಾಗಲಿ ಪಡೆಯದೇ ಅನುದಾನ ಮೀಸಲಿರಿಸಿದೆ. ಆದರೆ, ಇದರ ಬಗ್ಗೆ ಯಾವುದೇ ಜನಪ್ರತಿನಿಧಿಯಾಗಲಿ ಇದರ ಬಗ್ಗೆ ಧ್ವನಿ ಎತ್ತದೇ ಇರುವುದು ಒಂದು ರೀತಿಯ ದುರಂತವೇ ಸರಿ ಎಂದರು. ನಂತರ ಮಾತನಾಡಿದ ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ, ಸದಾ ಹರಿಯುವ ನದಿಯಾಗಲಿ, ಯಾವುದೇ ನೀರಾವರಿ ವ್ಯವಸ್ಥೆಯಾಗಲಿ ಇಲ್ಲದಿರುವ ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆ ವರದಾನವಾಗಿದೆ. ಈ ರಾಜ್ಯದ ಮೂರನೇ ಒಂದು ಭಾಗದಷ್ಟು ಜನರ ಉಳಿವಿನ ಪ್ರಶ್ನೆಯಾಗಿದೆ. ಈ ಚಳವಳಿ ತೀವ್ರಗೊಳಿಸಲು ಮನೆಗೊಬ್ಬರು ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಈ ವೇಳೆ ಡಾ.ಅನಿಲ್ ಶಾಶ್ವತ ನೀರಾವರಿ ಅನಿವಾರ್ಯತೆ ಮತ್ತು ತಾಲೂಕಿನಲ್ಲಿ ಮಳೆ ಪ್ರಮಾಣ, ಬತ್ತಿದ ಕೊಳವೆ ಬಾವಿಗಳ ವಿವರ ಮತ್ತು ಪ್ಲೊರೈಡ್‌ದಿಂದ ಆಗುತ್ತಿರುವ ದುಷ್ಪರಿಣಾಮಗಳ ಕಿರುಚಿತ್ರ ಪ್ರದರ್ಶನ ಮಾಡಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಅವಿಭಜಿತ ಕೋಲಾರ ಜಿಲ್ಲೆ ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಮುನಿರೆಡ್ಡಿ, ಮುಖಂಡರಾದ ಅಶ್ವತ್ಥರೆಡ್ಡಿ, ನಂಜಿರೆಡ್ಡಿ, ಅಶ್ವತ್ಥಪ್ಪ, ಎಚ್.ಪಿ. ಲಕ್ಷ್ಮೀನಾರಾಯಣ, ಅಶೋಕ, ಜಯರಾಮರೆಡ್ಡಿ, ಜನವಾದಿ ಮಹಿಳಾ ಸಂಘಟನೆಯ ಪವಿತ್ರಮ್ಮ, ಸಿಐಟಿಯು ಭಾಗ್ಯಮ್ಮ ಸೇರಿದಂತೆ ಹಲವರು ಇದ್ದರು.