ಬಾಲಾರೋಪಿಗಳಿಗೆ ಸೂಕ್ತ ರಕ್ಷಣೆ ಅಗತ್ಯ
ಕ.ಪ್ರ.ವಾರ್ತೆ ಕೋಲಾರ ಸೆ. 17
ಬಾಲಾರೋಪಿಗಳ ವಯಸ್ಸು ಮತ್ತು ಇನ್ನಿತರ ವಿವರಗಳನ್ನು ಪೋಷಕರು ಬಾಲ ನ್ಯಾಯ ಮಂಡಳಿಗೆ ಸರಿಯಾಗಿ ತಿಳಿಸದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ. ದಾಖಲೆಗಳು ಸರಿಯಿದ್ದಲ್ಲಿ ಮಾತ್ರ ಬಾಲಾರೋಪಿಗಳಿಗೆ ಸೂಕ್ತ ರಕ್ಷಣೆ ನೀಡಲು ಸಾಧ್ಯವಾಗುತ್ತದೆ ಎಂದು ಕೆಜಿಎಫ್ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಬಾಲ ನ್ಯಾಯ ಮಂಡಳಿ ಅಧ್ಯಕ್ಷ ಎನ್.ಎಸ್. ಮಮದಾಪುರ್ ತಿಳಿಸಿದರು.
ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಬೆಂಗಳೂರು, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೋಲಾರ ಸಂಯುಕ್ತ ಆಶ್ರಯದಲ್ಲಿ ಬಾಲ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2000 ಹಾಗೂ ತಿದ್ದುಪಡಿ ಕಾಯ್ದೆ 2006 ಅನುಷ್ಠಾನ ಕುರಿತು ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳಿಗೆ ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಎರಡು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪರಾಧಿಗಳ ವಯಸ್ಸು ಹದಿನೆಂಟು ವರ್ಷದೊಳಗೆ ಇರಬೇಕಾಗಿದೆ ಅಂತಹ ಅಪರಾಧಿಗಳನ್ನು ಜೆ.ಜೆ. ನ್ಯಾಯಾಲಯದಲ್ಲಿ ವಿಚಾರಣೆ ಮಾಡಲಾಗುತ್ತದೆ. ಬಾಲ ಅಪರಾಧಿಗಳ ವಯಸ್ಸು ಮತ್ತು ಪೋಷಕರ ವಿವರಗಳನ್ನು ಸರಿಯಾಗಿ ಬಾಲನ್ಯಾಯ ಮಂಡಳಿಗೆ ಸಲ್ಲಿಸಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ರಾಮನಿವಾಸ್ ಸಫಟ್ ಮಾತನಾಡಿ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬಾಲ ಅಪರಾಧಿಗಳ ಕಲ್ಯಾಣ ನೋಡಿಕೊಳ್ಳಲು ಪ್ರತ್ಯೇಕವಾಗಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರಲ್ಲದೆ ಬಾಲಾಪರಾಧಿಗಳನ್ನು ನೋಡಿಕೊಳ್ಳಲು ವಿವಿಧ ಇಲಾಖೆಗಳ ಸಹಕಾರ ಬಹಳ ಮುಖ್ಯವೆಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ. ಜುಲ್ಫಿಖಾರ್ ಉಲ್ಲಾ ಮಾತನಾಡಿ, ನವೆಂಬರ್ ತಿಂಗಳಿನಲ್ಲಿ ಎಲ್ಲಾ ತಾಲೂಕುಗಳಲ್ಲಿ ಮಕ್ಕಳ ಗ್ರಾಮಸಭೆ ಏರ್ಪಡಿಸಲಾಗುವುದು ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಕಲೈಶೆಲ್ವಿ ಮಾತನಾಡಿ, ಹದಿನೆಂಟು ವರ್ಷದೊಳಗಿನ ಮಕ್ಕಳು ಅಪರಾಧ ಮಾಡಿದಾಗ ಪೊಲೀಸ್ ಇಲಾಖೆ ಎಫ್ಐಆರ್ ಕಡ್ಡಾಯವಾಗಿ ದಾಖಲೆ ಮಾಡಬೇಕು ಹಾಗೂ ಮಕ್ಕಳು ವಿವಿಧ ಕಾರಣಗಳಿಂದ ನಾಪತ್ತೆಯಾದರೂ ಎಫ್ಐಆರ್ ದಾಖಲಿಸಬೇಕೆಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಬಾಲನ್ಯಾಯ ಮಂಡಳಿ ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕ ಸ್ಥಾಪಿಸಲಾಗಿದೆ. ಸಾರ್ವಜನಿಕರು ಇವುಗಳ ಉಪಯೋಗ ಪಡೆದುಕೊಳ್ಳಬಹುದೆಂದು ಹೇಳಿದರು.
ಮಕ್ಕಳ ರಕ್ಷಣೆ ಮತ್ತು ಪೋಷಣೆ 2000ರ ಅಧಿನಿಯಮದಲ್ಲಿ ಎಲ್ಲಾ ಮಕ್ಕಳಿಗೂ ಸುರಕ್ಷಿತ ವಾತಾವರಣ ಕಲ್ಪಿಸುವ ಹಾಗೂ ಅವರ ಹಕ್ಕುಗಳನ್ನು ರಕ್ಷಿಸುವ ಭರವಸೆಯನ್ನೂ ಹಾಗೂ ಪ್ರತಿಯೊಂದು ಮಗುವೂ ತನ್ನ ಪೂರ್ಣ ಸಾಮರ್ಥ್ಯದಿಂದ ಅಭಿವೃದ್ಧಿ ಹೊಂದಲು ಸಾಧ್ಯವೆಂಬುದನ್ನು ಮನದಟ್ಟು ಮಾಡಿಕೊಡುವ ದೃಷ್ಟಿಕೋನ ಹೊಂದಲಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶಕುಂತಲಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್ ಇದ್ದರು. ಜಗದೀಶ್ ವಂದಿಸಿದರು.