ಮತದಾರರಿಗೆ ಶಾಸಕ ಕೃಷ್ಣಾರೆಡ್ಡಿ ಕೃತಜ್ಞತೆ
ಕ.ಪ್ರ.ವಾರ್ತೆ ಚಿಂತಾಮಣಿ ಸೆ. 17
ಸರ್ಕಾರದಿಂದ ದೊರೆಯುವ ಸವಲತ್ತು ಮತ್ತು ಯೋಜನೆಗಳನ್ನು ಅರ್ಹ ಜನಸಾಮಾನ್ಯರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ನಿರ್ವಹಿಸುತ್ತೇನೆ ಎಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹೇಳಿದರು.
ತಾಲೂಕಿನ ಕೈವಾರ ಹೋಬಳಿ ಮಾರಪ್ಪಲ್ಲಿ ಗ್ರಾಮದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿ, ಪಕ್ಷಾತೀತ ಮತ್ತು ಜಾತ್ಯತೀತ ಭಾವನೆಗಳೊಂದಿಗೆ ಕಳೆದ 5 ವರ್ಷಗಳಿಂದ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಸಂಕಷ್ಟಕ್ಕೊಳಗಾದವರಿಗೆ ತನ್ನ ಕೈಯಲ್ಲಾದ ಸಹಾಯ ಮಾಡುತ್ತಾ ಮಾನವಸೇವೆಯೇ ಮಾದವ ಸೇವೆ ಎಂದು ಭಾವಿಸಿ ಕ್ಷೇತ್ರ ಜನತೆ ನನ್ನನ್ನು ವಿಧಾನಸಭೆ ಚುನಾವಣೆಯಲ್ಲಿ ಜಯಗೊಳಿಸಿ ಶಾಸಕನನ್ನಾಗಿ ಮಾಡಿರುವ ಜನತೆಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಸ್ತೇನಹಳ್ಳಿ ಮಾರ್ಗವಾಗಿ ತಳಗವಾರ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರೀಕರಣಕ್ಕಾಗಿ 25 ಲಕ್ಷ ಮಂಜೂರಾಗಿದೆ ಮತ್ತು ಕೈವಾರದಿಂದ ಮಾರಪ್ಪನಹಳ್ಳಿ ರಸ್ತೆಗೆ ಡಾಂಬರೀಕರಣ ಹಾಗೂ ಚಿಂತಾಮಣಿಯಿಂದ ಮಸ್ತೇನಹಳ್ಳಿ ಮಾರ್ಗವಾಗಿ ವಡ್ಡಹಳ್ಳಿಗೆ ನೂತನ ಬಸ್ ಸೌಕರ್ಯ, ಮಾರಪ್ಪನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಕಟ್ಟಡ, ಕುಡಿಯುವ ನೀರಿಗಾಗಿ ಹೊಸದಾಗಿ ಬೋರ್‌ವೆಲ್ ಅಳವಡಿಸಲು ಹಾಗೂ ಇನ್ನಿತರ ಕಾಮಗಾರಿಗಳ ಪಟ್ಟಿಯನ್ನು ಹಂತಹಂತವಾಗಿ ನನ್ನ ಅಧಿಕಾರದ ಅವಧಿಯಲ್ಲಿ ಕಾರ್ಯಗತಗೊಳಿಸುವುದಾಗಿ ತಿಳಿಸಿದರು.
ತಾಲೂಕು ಪಂಚಾಯಿತಿ ಸದಸ್ಯ ಟಿ.ಹೊಸೂರು ಕೃಷ್ಣಪ್ಪ, ಎಪಿಎಂಸಿ ನಿರ್ದೇಶಕ ಕೈವಾರ ಸುಬ್ಬಾರೆಡ್ಡಿ, ಮುಖಂಡರಾದ ಎಂ.ಎನ್. ಕೃಷ್ಣಪ್ಪ, ವೆಂಕಟೇಶ, ನಾರೆಪ್ಪ, ನರಸಿಂಹಯ್ಯ, ಶ್ರೀನಿವಾಸ್, ನಾರಾಯಣಸ್ವಾಮಿ ಇತರರು ಇದ್ದರು.