ಮಳೆಗೆ ರಸ್ತೆ ಬಂಡವಾಳ ಬಯಲು
ಕೋಲಾರ: ನಗರದ ರಸ್ತೆಗಳ ಬಂಡವಾಳ ಇತ್ತೀಚೆಗೆ ಬಿದ್ದ ಮಳೆಯಿಂದ ಬಯಲಾಗಿದೆ.
ಕಾಸಿಗೆ ತಕ್ಕ ಕಜ್ಜಾಯವೆಂಬಂತೆ ರಸ್ತೆ ಕಾಮಗಾರಿಗಳಿಗೆ ನಿಗದಿ ಮಾಡುವ ಹಣ, ಕಮೀಷನ್ ಹಾವಳಿ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ನೀಡುವ ಅನುದಾನದ ಕೊರತೆಯಿಂದ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕುತ್ತು ಉಂಟಾಗಿದೆ.
ನಗರದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕೋಟಿಗಟ್ಟಲೆ ಹಣವನ್ನು ರಸ್ತೆ ಅಭಿವೃದ್ಧಿಗಾಗಿ ಖರ್ಚು ಮಾಡಲಾಗಿದೆ. ಆದರೆ, ಪ್ರಮುಖ ರಸ್ತೆಗಳ ಅಧೋಗತಿ ನಿವಾರಣೆ ಮಾಡಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ಯಾವುದೇ ಒಂದು ರಸ್ತೆಗೆ ಜಲ್ಲಿ ಬಿಚಾವಣೆ, ಡಾಂಬರು ಇಲ್ಲವೇ ಕಾಂಕ್ರಿಟ್ ಕಾಮಗಾರಿ ನಡೆಸಿದ ಮೇಲೆ ಕನಿಷ್ಠ ಒಂದು ವರ್ಷವಾದರೂ ಆ ರಸ್ತೆ ಯಾವುದೇ ಕಾರಣಕ್ಕೂ ಹಾಳಾಗದಂತೆ ನೋಡಿಕೊಳ್ಳುವ ಸಂಬಂಧ ಇಲಾಖೆ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಕರ್ತವ್ಯ. ಆದರೆ, ಕೋಲಾರದ ಬಹುತೇಕ ರಸ್ತೆಗಳು ಕಾಮಗಾರಿ ಮುಗಿದು ಎರಡು ತಿಂಗಳು ಕಳೆಯುವ ಮುನ್ನವೇ ಗುಂಡಿ ಬಿದ್ದು ಮೃತ್ಯುಕೂಪವಾಗುತ್ತಿರುವುದಕ್ಕೆ ಯಾರು ಹೊಣೆ ಎಂಬುದಕ್ಕೆ ಉತ್ತರ ಸಿಗದಂತಾಗಿದೆ.
ನಗರಸಭೆ ವ್ಯಾಪ್ತಿಯ ಬಹುತೇಕ ವಾರ್ಡುಗಳಲ್ಲಿ ಸಿಮೆಂಟ್ ರಸ್ತೆಗಳನ್ನು ಮಾಡಲಾಗಿದೆಯಾದರೂ ಯಾವೊಂದು ರಸ್ತೆಯ ಗುಣಮಟ್ಟ ತೃಪ್ತಿದಾಯಕವಾಗಿಲ್ಲ. ಇದಕ್ಕೆ ತಾಜಾ ನಿದರ್ಶನವೆಂದರೆ ವಾರ್ಡ್ ನಂ.2ರ ಗಾಂಧಿನಗರದಲ್ಲಿ ನಿರ್ಮಿಸಿರುವ ಕಾಂಕ್ರಿಟ್ ರಸ್ತೆಗಳ ಅದ್ವಾನ ಕುರಿತಂತೆ ಲೋಕಾಯುಕ್ತ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಕೆಲ ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಕಳಪೆ ಕಾಮಗಾರಿಯ ಪರಿಶೀಲನೆ ಮಾಡಿ ಅತೃಪ್ತಿ ವ್ಯಕ್ತಪಡಿಸಿರುವುದು.
ಇದೊಂದೇ ರಸ್ತೆಯಲ್ಲ. ಕಳೆದ ಐದಾರು ವರ್ಷಗಳಿಂದ ನಗರದ ಮೆಕ್ಕೆ ವೃತ್ತದಿಂದ ಉತ್ತರ ದಿಕ್ಕಿಗೆ ಹೋಗುವ ರಸ್ತೆ ಸೇರಿದಂತೆ ಲೋಕೋಪಯೋಗಿ ಇಲಾಖೆಗೆ ಸೇರಿದ ಪ್ರಮುಖ ರಸ್ತೆಗಳ ದುರಸ್ತಿಗಾಗಿ ಖರ್ಚು ಮಾಡಿರುವ ಹಣದಲ್ಲಿ ಶಾಶ್ವತವಾದ ಗುಣಮಟ್ಟದ ರಸ್ತೆಯನ್ನೇ ನಿರ್ಮಿಸಿ ಸರ್ಕಾರಕ್ಕೆ ನಷ್ಟ ತಪ್ಪಿಸಬಹುದಾಗಿತ್ತು.
ಜನತೆಯ ಸಹಕಾರ ಬೇಕು: ರಸ್ತೆಗಳ ಅಭಿವೃದ್ಧಿಗೆ ಅನುದಾನದ ಕೊರತೆಯ ಜೊತೆಗೆ ಲಭ್ಯವಿರುವ ಹಣದಲ್ಲಿ ಕಾಮಗಾರಿ ನಡೆಯುವಾಗ ವಾಹನಗಳ ಓಡಾಟ ತಡೆಯಲು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ರಸ್ತೆಗಳ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ರಸ್ತೆ ಕಾಮಗಾರಿ ನಡೆಯುವಾಗ ಕನಿಷ್ಠ ಎರಡು ದಿನ ವಾಹನಗಳ ಸಂಚಾರ ನಿಯಂತ್ರಿಸಬೇಕು, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ರಸ್ತೆಯನ್ನು ಬಂದ್ ಮಾಡಬೇಕು. ನಗರದ ಪ್ರಮುಖ ರಸ್ತೆಗಳ ದುರಸ್ತಿಗಾಗಿ ಕನಿಷ್ಠ 50 ಲಕ್ಷ ಬೇಕಾಗಬಹುದು. ಇದರಿಂದ ಶಾಶ್ವತ ಪರಿಹಾರ ಸಿಗುವುದಿಲ್ಲ. ತೇಪೆ ರಸ್ತೆಗಳ ಮೇಲೆ ವಾಹನಗಳ ಸಂಚಾರ ಹಾಗೂ ಮಳೆ ಬೀಳುವುದರಿಂದ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ನಗರಸಭೆ, ಲೋಕೋಪಯೋಗಿ ಇಲಾಖೆಯವರು ರಸ್ತೆಗಳ ಅಭಿವೃದ್ಧಿಗಾಗಿಯೇ ವಿಶೇಷ ಕಾಳಜಿ ವಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಹೊಸ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಸ್ತಾಪನೆ ಕಳುಹಿಸಿ ಅನುದಾನ ತಂದಲ್ಲಿ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳನ್ನು ಕಾಣಬಹುದಾಗಿದೆ.
ಸಿಎಂಗೆ ಮನವಿ ಮಾಡಿ: ಇದೇ ಸೆ.27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋಲಾರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ಕೋರಿ ಮನವಿ ಸಲ್ಲಿಸುವ ಸಂದರ್ಭದಲ್ಲಿ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಮನವಿ ಮಾಡಿದಲ್ಲಿ ಮೃತ್ಯುಕೂಪವಾಗಿರುವ ರಸ್ತೆಗಳಿಗೆ ಮುಕ್ತಿ ಸಿಗಬಹುದು ಎಂದು ನಗರಸಭೆ ಮಾಜಿ ಸದಸ್ಯ ತ್ಯಾಗರಾಜ್ ಅಭಿಪ್ರಾಯಿಸಿದ್ದಾರೆ.
ತೇಪೆ ಕೆಲಸ ಸಲ್ಲದು
ಕೇವಲ ತೇಪೆ ಕೆಲಸದಲ್ಲೇ ತೃಪ್ತಿಪಡುತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಜನರಿಂದ ಹಿಡಿಶಾಪ ಹಾಕಿಸಿಕೊಳ್ಳುವುದು ತಪ್ಪುತ್ತಿಲ್ಲ. ಈ ರಸ್ತೆಯ ಕಾಮಗಾರಿ ಹೊಣೆ ಹೊತ್ತಿದ್ದ ಗುತ್ತಿಗೆದಾರರು ಸಹ ತೇಪೆ ಕೆಲಸಕ್ಕೆ ಆಸಕ್ತಿ ತೋರದಿದ್ದರೂ ಅಧಿಕಾರಿಗಳು ಅನುದಾನ ಇಲ್ಲ, ರಸ್ತೆಯ ಗುಂಡಿಗಳನ್ನು ಮುಚ್ಚಿದರೆ ಸಾಕು ಎಂದು ವರ್ಕ್ ಆರ್ಡರ್ ನೀಡುತ್ತಿರುವುದರಿಂದ ವಿಧಿ ಇಲ್ಲದೆ ಗುತ್ತಿಗೆದಾರರು ತಮಗೆ ವಹಿಸಿದಷ್ಟು ಕೆಲಸ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ.
ಸುಮಾರು 100 ಮೀಟರ್ ಉದ್ದದ ಗುಣಮಟ್ಟದ ರಸ್ತೆಗೆ ಕನಿಷ್ಠ 3 ರಿಂದ 3.50 ಲಕ್ಷ ಬೇಕಾಗುತ್ತದೆ. 1 ಕಿಮೀ ರಸ್ತೆಗೆ ಟಾರು ಮಿಶ್ರಿತ ಜಲ್ಲಿ ಬಿಚಾವಣೆ ಮಾಡಲು ಕನಿಷ್ಠ 20 ಲಕ್ಷ ಹಾಗೂ ಸಣ್ಣ ಜಲ್ಲಿಯಿಂದ (ಗ್ರ್ಯಾವಲ್) ಮರು ಡಾಂಬರು ಕಾಮಗಾರಿಗೆ 35 ಲಕ್ಷ ಖರ್ಚು ಮಾಡಿದರೆ ಉತ್ತಮ ರಸ್ತೆ ಆಗುತ್ತದೆ. ಆದರೆ, ಸರ್ಕಾರ ಕಾಮಗಾರಿಗೆ ನಿಗದಿ ಮಾಡುವ ಟೆಂಡರ್ ಹಣದ ಮೌಲ್ಯ ಕಡಿಮೆ ಇರುವುದರಿಂದ ಗುತ್ತಿಗೆದಾರರು ಕಾಸಿಗೆ ತಕ್ಕಂತೆ ಕಾಮಗಾರಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಪ್ರಮುಖ ಸಂಚಾರಿ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಕನಿಷ್ಠ 50 ಕೋಟಿ ಬೇಕಾಗುತ್ತದೆ. ಗುಣಮಟ್ಟದ ಮರಳು, ಡಾಂಬರು ಬಳಸಿ ಕಾಮಗಾರಿ ನಡೆಸಿದಲ್ಲಿ ರಸ್ತೆಗಳು ಕನಿಷ್ಠ ಒಂದು ವರ್ಷ ಹಾಳಾಗದೆ ಸುಸ್ಥಿತಿಯಲ್ಲಿ ಇರುತ್ತದೆ. ಜೊತೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗುತ್ತಿಗೆದಾರರಿಂದ ಹೆಚ್ಚಿನ ಕಮಿಷನ್ ಅಪೇಕ್ಷಿಸುವುದರಿಂದ ಕಾಮಗಾರಿಯ ಗುಣಮಟ್ಟ ಕೆಡಲು ಕಾರಣವಾಗುತ್ತದೆ.
ಪಾ.ಶ್ರೀ.ಅನಂತರಾಮ್