ರಕ್ತದಾನಕ್ಕೆ ಮುಂದಾಗಿ: ಡಾ. ವಿಶಾಲ್
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಸೆ. 17
ಜಿಲ್ಲೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಪ್ರಾರಂಭಗೊಂಡಿರುವ ರಕ್ತನಿಧಿ ಕೇಂದ್ರಕ್ಕೆ ರಕ್ತದ ಬೇಡಿಕೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ರಕ್ತ ಶೇಖರಿಸಲು ಇನ್ನೂ ಹೆಚ್ಚಿಗೆ ರಕ್ತದಾನ ಶಿಬಿರ ಆಯೋಜಿಸಲು ಮುಂದಾಗಬೇಕೆಂದು ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಘಟಕದ ಅಧ್ಯಕ್ಷರೂ, ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಮನವಿ ಮಾಡಿದರು.
ತಮ್ಮ ಕಚೇರಿಯಲ್ಲಿ ಕರೆದಿದ್ದ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಗೆ ವಿವಿಧ ಇಲಾಖೆಗಳ ನೌಕರರು, ಸಂಘ ಸಂಸ್ಥೆಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಅನೇಕರನ್ನು ಪ್ಯಾಟ್ರನ್ ಆಗಿಯೋ, ಆಜೀವ ಸದಸ್ಯರನ್ನಾಗಿ ಮಾಡಿಕೊಂಡು ಅವರಿಗೆ ಸಂಪರ್ಕವಿರುವ ಹಲವರಿಂದ ರಕ್ತದಾನ ಶಿಬಿರಗಳ ಆಯೋಜನೆ ನಡೆಯಲು ಪ್ರೋತ್ಸಾಹಿಸಬೇಕಾಗಿದೆ ಎಂದರು.
ಸ್ಥಳೀಯ ಸಂಸ್ಥೆಗಳೆನಿಸಿರುವ ಪುರಸಭೆ, ನಗರಸಭೆ, ಪಂಚಾಯಿತಿ ಮಟ್ಟಗಳಲ್ಲಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿವರ್ಗ ಇವರನ್ನು ರೆಡ್‌ಕ್ರಾಸ್ ಸದಸ್ಯರನ್ನಾಗಿ ಮಾಡಿಸಿ ವರ್ಷಕ್ಕೊಮ್ಮೆ ಅವರಿಗೆ ವಿಶೇಷವಾದ ದಿನ, ತಿಂಗಳು, ತಾರೀಕಿನಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜನೆ ಮಾಡುವಂತೆ ಅವರನ್ನು ಪ್ರೋತ್ಸಾಹಿಸಬೇಕೆಂದು ವಿಶಾಲ್ ತಿಳಿಸಿದರು.
ಜಿಲ್ಲೆಯಲ್ಲಿ 2012- 13ನೇ ಸಾಲಿನಲ್ಲಿ 4,777 ಯೂನಿಟ್ ರಕ್ತ ಶೇಖರಣೆಯಾಗಿದ್ದು, 4,634 ಯೂನಿಟ್ ರಕ್ತವನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಅಗತ್ಯವಿರುವ ರೋಗಿಗಳಿಗೆ ನೀಡಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಲ್ಲಿ ಜೂನಿಯರ್ ರೆಡ್‌ಕ್ರಾಸ್ ಘಟಕ ಪ್ರಾರಂಭಿಸಿದ್ದರೂ ಸದಸ್ಯರ ಸಂಖ್ಯೆ ಕಡಿಮೆ ಇದ್ದು, ಅವರಿಗೆ ಅರಿವು ಮೂಡಿಸಿ, ವಿವಿಧ ಸಂಘ- ಸಂಸ್ಥೆಗಳಿಗೆ ಮತ್ತು ಚಿತ್ರನಟರ ಸಂಘದವರಿಗೆ ತಮ್ಮ ಅಭಿಮಾನಿ ನಟರ, ವ್ಯಕ್ತಿಗಳ ಜನ್ಮದಿನ, ಪುಣ್ಯತಿಥಿ, ವಿವಾಹದ ದಿನ ಹೀಗೆ ವಿಶೇಷ ದಿನಗಳಂದು ರಕ್ತದಾನ ಶಿಬಿರ ಆಯೋಜಿಸುವಂತೆ ಮಾಡಬೇಕೆಂದರು.
ಉಪವಿಭಾಗಾಧಿಕಾರಿ ಶಾಂತಲಾ, ಜಿಪಂ ಮುಖ್ಯ ಲೆಕ್ಕಾಧಿಕಾರಿ, ಶಿಕ್ಷಣ ಇಲಾಖೆ ಆರ್‌ಎಂಎಸ್‌ಎ ವಿಭಾಗದ ಮಂಜುನಾಥ್, ರೆಡ್‌ಕ್ರಾಸ್ ಜಿಲ್ಲಾ ಘಟಕದ ಚೆರ್ಮನ್ ಡಾ. ಬಾಬುರೆಡ್ಡಿ, ಉಪಾಧ್ಯಕ್ಷ ಡಾ.ಕೆ.ಪಿ. ಶ್ರೀನಿವಾಸಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಮಂಜುಳ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಜಯರಾಮ್, ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ನಾರಾಯಣಾಚಾರ್, ಖಜಾಂಚಿ ಆರ್. ವೆಂಕಟನಾರಾಯಣ ಇತರರಿದ್ದರು.