ಸುದ್ದಿ ಸಂಕ್ಷೇಪ
ಪತ್ರಿಕಾ ವಿತರಕರ ಸಂಘದಿಂದ ಶ್ರದ್ಧಾಂಜಲಿ
ಮಾಲೂರು: ಅಪಘಾತದಲ್ಲಿ ಸೋಮವಾರ ಮೃತಪಟ್ಟ ಪತ್ರಿಕಾ ವಿತರಕ ಹಾಗೂ ವಿದ್ಯಾರ್ಥಿ ಗೋವಿಂದರಾಜುವಿಗೆ ಸ್ಥಳೀಯ ಪತ್ರಿಕಾ ವಿತರಕರ ಸಂಘ ಮಂಗಳವಾರ ಶ್ರದ್ಧಾಂಜಲಿ ಸಭೆ ಹಮ್ಮಿಕೊಂಡಿತ್ತು. ಪಟ್ಟಣದ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಜಿಲ್ಲೆಯ ಹಿರಿಯ ಪತ್ರಿಕೆ ವಿತರಕ ಶ್ರೀನಿವಾಸ್ ಶ್ರೇಷ್ಠಿ, ಪ್ರತಿದಿನ ಬೆಳಗಿನ ಜಾವ ಮಳೆ- ಗಾಳಿ ಎನ್ನದೆ ತಪ್ಪದೆ ಪತ್ರಿಕೆ ಹಂಚುವ ವಿತರಕರಲ್ಲಿ ಬಹುಪಾಲು ವಿದ್ಯಾರ್ಥಿಗಳಾಗಿದ್ದು, ತಮ್ಮ ಜ್ಞಾನಾರ್ಜನೆಗಾಗಿ ಪತ್ರಿಕೆ ಹಂಚುವ ಕಾಯಕ ಮಾಡುತ್ತಿದ್ದಾರೆ. ಪತ್ರಿಕೆ ಹಂಚುವವರಿಗಾಗಿ ಗುಂಪು ವಿಮೆ ಮಾಡಿಸುವ ಅಗತ್ಯವಿದೆ ಎಂದರು. ಜಿಲ್ಲಾ ಪತ್ರಿಕಾ ವಿತರಕ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಮಾತನಾದರು. ವಕೀಲ ಕೆ.ಮುನಿಸ್ವಾಮಿ, ವೆಂಕಟೇಶ್ ರಾವ್, ಮಂಜುನಾಥ್, ಹಿರಿಯ ಪತ್ರಕರ್ತ ಕೆಂಪರತ್ನಂ, ಮಣಿ,ರಾಜೇಶ್, ಶಿವು, ಶ್ರೀನಾಥ್, ಕೇಶವಮೂರ್ತಿ, ಮೂರ್ತಿ ಇದ್ದರು.
ಮೋತಕಪಲ್ಲಿ ವಿಎಸ್ಎಸ್ಎನ್ಗೆ ಅವಿರೋಧ ಆಯ್ಕೆ
ಕ.ಪ್ರ. ವಾರ್ತೆ, ಮುಳಬಾಗಲು, ಸೆ.17
ತಾಲೂಕಿನ ಮೋತಕಪಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಸಿಪಿಎಂ ಪಕ್ಷದ ಮಡಿವಾಳ ಜಿ.ಪಾಪಣ್ಣ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ನ ಜೆ. ಕೃಷ್ಣಾರೆಡ್ಡಿ ಅವಿರೋಧವಾಗಿ ಸೋಮವಾರ ಆಯ್ಕೆಯಾದರು.
ನಿರ್ದೇಶಕರಾಗಿ ಜೆಡಿಎಸ್ನ ಎಂ.ಸಿ. ಅಮರನಾಥ್, ಚಿಕ್ಕಚೆನ್ನಪ್ಪ, ಶಿವಣ್ಣ, ವೆಂಕಟೇಶಪ್ಪ, ರಾಮಕ್ಕ, ಅಚಂಪಲ್ಲಿ ಅಮರಪ್ಪ, ಎಂ.ಎನ್. ಬಾಬು, ಎಂ.ಎನ್. ಶಾರದಾ ಆಯ್ಕೆಯಾದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಅಲಂಗೂರು ಶಿವಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ತಾಯಲೂರು ರಮೇಶ್ ಮುಂತಾದವರು ಭಾಗವಹಿಸಿದ್ದರು.
ಸಾಂಬಾರಿನಲ್ಲಿ ವಿದ್ಯಾರ್ಥಿನಿ ಬೀಳಲು ಬೇಜವಾಬ್ದಾರಿ ಕಾರಣ: ಆರೋಪ
ಕ.ಪ್ರ.ವಾರ್ತೆ ಗೌರಿಬಿದನೂರು ಸೆ. 17
ತಾಲೂಕಿನ ಡಿ.ಪಾಳ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಬಿಸಿಯೂಟದ ಸಾಂಬಾರಿನ ಪಾತ್ರೆಯಲ್ಲಿ ಬಿದ್ದು ಗಾಯಗೊಂಡಿರುವುದಕ್ಕೆ ಮುಖ್ಯ ಶಿಕ್ಷಕ ಕೃಷ್ಣಪ್ಪ ಹಾಗೂ ಶಿಕ್ಷಕ ಸಿಬ್ಬಂದಿಯ ಬೇಜವಾಬ್ದಾರಿತನ ಕಾರಣ. ಅವರನ್ನು ಅಮಾನತುಗೊಳಿಸಬೇಕೆಂದು ಡಿ.ಪಾಳ್ಯ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬಿಸಿಯೂಟ ಕೆಲಸ ನಿರ್ವಹಿಸಲು ಹಾಗೂ ತರಕಾರಿ ತರಲು ಒಬ್ಬ ಶಿಕ್ಷಕನ್ನು ನಿಯೋಜಿಸಲಾಗಿತ್ತು.
ಆದರೆ, ಅದರ ನಿರ್ವಹಣೆಯನ್ನೂ ತಾನೇ ಮಾಡಬೇಕೆಂದು ಮುಖ್ಯ ಶಿಕ್ಷಕ ಕೃಷ್ಣಪ್ಪ ವಹಿಸಿಕೊಂಡು ಸೂಕ್ತ ನಿರ್ವಹಣೆ ಮಾಡದೆ ಬೇಜವಾಬ್ದಾರಿತನವೇ ಈ ಘಟನೆಗೆ ಕಾರಣ ಎನ್ನಲಾಗಿದ್ದು, ಸದರಿ ಮುಖ್ಯ ಶಿಕ್ಷಕ ಕೃಷ್ಣಪ್ಪನೂ ಇದೇ ಗ್ರಾಮದ ವಾಸಿಯಾಗಿದ್ದು, ಅವರು 8 ವರ್ಷಗಳಿಂದ ಇದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಖ್ಯಶಿಕ್ಷಕ ಕೃಷ್ಣಪ್ಪ ನಿರ್ಲಕ್ಷ್ಯ: ಆರೋಪ
ಕ.ಪ್ರ.ವಾರ್ತೆ ಗೌರಿಬಿದನೂರು ಸೆ. 17
ಘಟನೆಗೆ ಮುಖ್ಯೋಪಾಧ್ಯಾಯರಾದ ಕೃಷ್ಣಪ್ಪ ಅವರೇ ಕಾರಣ. ಅವರು ಮತ್ತು ಸಹಶಿಕ್ಷಕರ ನಡುವೆ ಸಾಮರಸ್ಯ ಇರಲಿಲ್ಲ. ಆಗಾಗ ಗಲಾಟೆಯಾಗುತ್ತಿತ್ತು. ಇತ್ತೀಚೆಗೆ ಮುಖ್ಯಶಿಕ್ಷಕ ಕೃಷ್ಣಪ್ಪ ಅಕ್ಕಿ ಕಳ್ಳತನಕ್ಕೆ ಗುರಿಯಾಗಿದ್ದರು. ಈ ಸಂದರ್ಭದಲ್ಲಿ ಡಿಡಿಪಿಐ ಅವರಿಂದ ಎಚ್ಚರಿಕೆ ಸೂಚನೆ ಕೊಡಿಸಲಾಗಿತ್ತು. ಅನೇಕ ಸಲ ಈತನನ್ನು ಬದಲಾಯಿಸಬೇಕೆಂದು ಒತ್ತಡ ಹೆಚ್ಚಿತ್ತು. ಈಗ ಈತನ ನಿರ್ವಹಣಾ ವೈಫಲ್ಯದಿಂದ ಈ ದುರ್ಘಟನೆ ನಡೆದಿದೆ. ತಕ್ಷಣವೇ ಈತನನ್ನು ಅಮಾನತ್ತುಗೊಳಿಸುವಂತೆ ಡಿಡಿಪಿಐಗೆ ಸೂಚಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್ ತಿಳಿಸಿದ್ದಾರೆ.
'ಪಶು ಆಹಾರ ತೂಕದಲ್ಲಿ ವ್ಯತ್ಯಾಸ'
ಚಿಕ್ಕಬಳ್ಳಾಪುರ: ಕಡಿಮೆ ತೂಕದ ಪಶು ಆಹಾರ ಮೂಟೆಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತ ಪ್ರತಿಭಟನೆ ನಡೆಸಿದರು.
ನಗರದ ಬಿ.ಬಿ. ರಸ್ತೆಯ ಬಾಲಾಜಿ ಟಾಕೀಸ್ ಮುಂಭಾಗವಿರುವ (ಆವತಿ ಗೊಬ್ಬರದ ಅಂಗಡಿ) ರಸಗೊಬ್ಬರ ಮತ್ತು ಬೂಸಾ ಅಂಗಡಿಗೆ ಮುತ್ತಿಗೆ ಹಾಕಿದ ರೈತರು ಅಂಗಡಿ ಮಾಲೀಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ರಾಸುಗಳಿಗೆ ಪಶು ಆಹಾರವನ್ನು ಹಾಕಲು ಮೂಟೆಗಳನ್ನು ಕೊಂಡು ಹೋಗಿದ್ದು ಬೂಸಾ ಮೂಟೆಗಳಲ್ಲಿ ಎರಡ್ಮೂರು ಕೆಜಿ ತೂಕ ಕಡಿಮೆ ಬರುತ್ತಿದೆ. ಈ ಮೂಲಕ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ನೂರಾರು ರೈತರು ಅಂಗಡಿಗೆ ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ ಕೆಲ ಸಮಯ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ನಗರ ಠಾಣೆಯ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಪತ್ರಿಕಾ ವಿತರಕನ ಕುಟುಂಬಕ್ಕೆ ನೆರವು
ಕೋಲಾರ: ರಸ್ತೆ ಅಪಘಾತದಲ್ಲಿ ಮಡಿದ ಮಾಸ್ತಿಯ ಪತ್ರಿಕಾ ವಿತರಕ ಹಾಗೂ ವಿದ್ಯಾರ್ಥಿ ಎಂ.ವಿ. ಗೋವಿಂದರಾಜುಗೆ ಶ್ರದ್ಧಾಂಜಲಿ ಅರ್ಪಿಸಿರುವ ಕೋಲಾರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘವು 5 ಸಾವಿರವನ್ನು ಮೃತರ ಪೋಷಕರಿಗೆ ನೀಡಿದೆ. ಮಾಲೂರನಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿದ್ದ ಸಂಘದ ಪದಾಧಿಕಾರಿಗಳು ಸಹಾಯಧನವನ್ನು ನೀಡುವ ಮೂಲಕ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕೋಲಾರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸಶೆಟ್ಟಿ, ಅಧ್ಯಕ್ಷ ವಿ.ರಮೇಶ್, ಉಪಾಧ್ಯಕ್ಷ ಸಿ.ರಮೇಶ್, ಕಾರ್ಯದರ್ಶಿ ಎನ್.ಮಂಜುನಾಥ್ ಇತರರು ಇದ್ದರು.
ವಿಭಾಗ ಮಟ್ಟಕ್ಕೆ ಆಯ್ಕೆ
ಮಾಲೂರು: ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು 2013- 14ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಗುಂಪು ಆಟಗಳಲ್ಲಿ ವಾಲಿಬಾಲ್ ಮತ್ತು ಬಾಲ್ಬ್ಯಾಡ್ಮಿಂಟನ್ ಪಂದ್ಯಗಳಲ್ಲಿ ಗೆಲವು ಸಾಧಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಾಲಿಬಾಲ್ ಪಂದ್ಯದಲ್ಲಿ ಇದುವರೆಗೆ 3 ಬಾರಿ ರಾಜ್ಯ ಮಟ್ಟಕ್ಕೆ, ವಿಭಾಗ ಮಟ್ಟಕ್ಕೆ 14 ಬಾರಿ ಆಯ್ಕೆಯಾಗಿದ್ದು, ಬಾಲ್ಬ್ಯಾಡ್ಮಿಂಟನ್ನಲ್ಲಿ 10 ಬಾರಿ ರಾಜ್ಯಮಟ್ಟಕ್ಕೂ ಹಾಗೂ 7 ಬಾರಿ ವಿಭಾಗಮಟ್ಟಕ್ಕೂ ಕಾಲೇಜು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದು, ಚೈತ್ರ(ವಾಲಿಬಾಲ್) ಹಾಗೂ ಅನುಷ(ಬಾಲ್ ಬ್ಯಾಡ್ಮಿಂಟನ್) ನೇತೃತ್ವದ ವಿಜೇತ ತಂಡವನ್ನು ಎಂಡಿಎಂಸಿ ಅಧ್ಯಕ್ಷ ಎಂ.ಪಿ. ವಿಜಯಕುಮಾರ್, ಪ್ರಾಂಶುಪಾಲ ಕೆ.ವೆಂಕಟೇಶಪ್ಪ, ವಿ.ನಾರಾಯಣಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಟಿ.ಕೆ. ಗೋವಿಂದಗೌಡ ಅಭಿನಂದಿಸಿದ್ದಾರೆ.