ಕಳಪೆ ಕಾಮಗಾರಿ ವಿರುದ್ಧ ಶಾಸಕರ ಗರಂ
ಚಿಕ್ಕಬಳ್ಳಾಪುರ: ಶಾಸಕರ ನಡಿಗೆ ಜನರ ಕಡೆಗೆ ಕಾರ್ಯಕ್ರಮದ ಎರಡನೇ ದಿನದ ಪಾದಯಾತ್ರೆ ಸಂದರ್ಭದಲ್ಲಿ ಕಳಪೆ ಕಾಮಗಾರಿ ವಿರುದ್ಧ ಶಾಸಕ ಡಾ.ಕೆ. ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.
ಆರನೇ ವಾರ್ಡಿನ ಚರಂಡಿ ಹಾಗೂ ರಸ್ತೆ ಅವ್ಯವಸ್ಥೆಯನ್ನು ಕಂಡು ಕಿಡಿ ಕಾರಿದ ಅವರು, ಅಸಮರ್ಪಕ ಕಾಮಗಾರಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಆರನೇ ವಾರ್ಡ್ ಮುನ್ಸಿಪಲ್ ಕಾಲೇಜು ಮುಂಭಾಗದಿಂದ ಶಾಸಕರ ಪಾದಯಾತ್ರೆ ಪ್ರಾರಂಭವಾಯಿತು. ಆರನೇ ವಾರ್ಡಿನ ಲಿಡ್ಕರ್ ಕಾಲೊನಿ ಸಮೀಪ ನೀರು ಸರಬರಾಜು ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ನೀಲ ನಕ್ಷೆ ತರಿಸಿಕೊಂಡು ತಪಾಸಣೆ ನಡೆಸಿ ಮಾಹಿತಿ ಪಡೆದರು.ಅಸಮರ್ಪಕ ಕಾಮಗಾರಿಗಳನ್ನು ನಡೆಸಿದ್ದನ್ನು ಹಲವೆಡೆ ಗಮನಿಸಿದ ಶಾಸಕರು ಅಧಿಕಾರಿಗಳ ವಿರುದ್ಧ ಗರಂ ಆದರು. ನಗರದ ಆರನೇ ಹಾಗೂ 17ನೇ ವಾರ್ಡಿನಲ್ಲಿ ಚರಂಡಿ ಕಾಂಕ್ರಿಟ್ ಮುಚ್ಚಿಗೆ ಕಳಪೆ ಕಾಮಗಾರಿ ಮಾಡಿದ್ದಕ್ಕೆ ಗುತ್ತಿಗೆದಾರರಾದ ರಾಮದಾಸ್ ಎಂಬುವರಿಗೆ ನಗರಸಭೆ ವರ್ಷದ ಹಿಂದೆಯೇ ನೋಟಿಸ್ ಜಾರಿ ಮಾಡಿತ್ತು. ಆದರೂ ಅದನ್ನು ಅವರು ನಿರ್ಲಕ್ಷಿಸಿರುವುದು ನಗರ ಪ್ರದಕ್ಷಿಣೆ ವೇಳೆ ಶಾಸಕರ ಗಮನಕ್ಕೆ ಬಂತು. ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅವರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಜೆಇ ಆಗಿರುವ ಶ್ರೀದೇವಿ ಅವರಿಗೆ ಶಾಸಕರು ಸೂಚಿಸಿದರು. ಗ್ರಾಮೀಣ ಭಾಗದಲ್ಲಿ ಶೌಚಾಲಯ ಮುಕ್ತ ವಾತಾವರಣ ಸೃಷ್ಟಿಸುವ ಅಭಿಯಾನ ಹಮ್ಮಿಕೊಳ್ಳಬೇಕಾಗಿದೆ. ಶೌಚಾಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 20 ಸಾವಿರ ರು. ಸಹಾಯಧನ ಸಿಗುತ್ತದೆ. ಅಧಿಕಾರಿಗಳು ಇದನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಪೋಸ್ಟರ್ ಅಂಟಿಸಿ ಜಾಗೃತಿ ಮೂಡಿಸಬೇಕೆಂದು ಸೂಚಿಸಿದರು.
ಮುಂದಿನ ಹಂತಗಳಲ್ಲಿ ಎಂಟು, ಒಂಬತ್ತು ಹಾಗೂ ಹತ್ತನೇ ವಾರ್ಡಿನಲ್ಲಿ ಸಂಚಾರ ನಡೆಸಿ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸುವ ಭರವಸೆ ಇತ್ತರು. ಒಂದು ತಿಂಗಳ ಒಳಗೆ ಎಲ್ಲಾ ವಾರ್ಡಿಗಳಿಗೂ ಭೇಟಿ ನೀಡಿ ಸಮಸ್ಯೆ ಆಲಿಸುವ ಹಾಗೂ ಕಾರ್ಯ ಕೈಗೊಳ್ಳುತ್ತೇನೆ ಎಂದರು. ಪೌರಾಯುಕ್ತ ರುದ್ರಮುನಿ ಇದ್ದರು.