ಮೂಲ ಸೌಲಭ್ಯಗಳ ಕೊರತೆ: ಪ್ರತಿಭಟನೆ
ಚಿಂತಾಮಣಿ: ವಿದ್ಯಾರ್ಥಿ ನಿಲಯಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ವಿರುದ್ಧ ಮಾದಿಗದಂಡೋರ ಹೋರಾಟ ಸಮಿತಿ ತಾಲೂಕು ಉಪ ತಹಸೀಲ್ದಾರ್ ಮನೋಹರ್ ಮಾಣೆಯವರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಮುರುಗಮಲ್ಲ ಗ್ರಾಮದ ವಸತಿ ನಿಲಯದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟವರ್ಗದ ನೂರಾರು ವಿದ್ಯಾರ್ಥಿಗಳು ಇದ್ದು, ಇವರಿಗೆ ವಿದ್ಯಾರ್ಥಿ ನಿಲಯದಲ್ಲಿ ಕಳೆದ 2 ವರ್ಷಗಳಿಂದ ಕಳಪೆ ಆಹಾರ, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಇನ್ನೂ ಹಲವು ಸಮಸ್ಯೆಗಳು ಕಾಡುತ್ತಿದ್ದರೂ ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಮೇಲ್ವಿಚಾರಕರು ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಎಂ.ವಿ. ರಾಮಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಮಿಟ್ಟಹಳ್ಳಿ ಮಂಜುನಾಥ್, ಮೂರ್ತಿ ವೈಜಕೂರು, ಅಶ್ವಥಪ್ಪ ಇದ್ದರು.
'ಕ್ಷಯ ರೋಗ ಮುಕ್ತ ಸಮಾಜ ನಿರ್ಮಿಸಿ'
ಗೌರಿಬಿದನೂರು: ಕ್ಷಯರೋಗ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ನಾವೆಲ್ಲರೂ ಶ್ರಮಿಸ ಬೇಕೆಂದು ನಾಮಗೊಂಡ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಘುನಾಥ್ ತಿಳಿಸಿದರು.
ಕಡುಬೂರು ಗ್ರಾಮದಲ್ಲಿ ನಡೆದ ಕ್ಷಯರೋಗ ಮುಕ್ತ ಸಮಾಜ ಶಿಬಿರ ಉದ್ಘಾಟಿಸಿ ಮಾತನಾಡಿ, ಮೈಕ್ರೋ ಬ್ಯಾಕ್ಟೀರಿಯಾದಿಂದ ಈ ರೋಗ ಹರಡುತ್ತದೆ, ದೇಶದಲ್ಲಿ ಒಂದೂವರೆ ನಿಮಿಷಕ್ಕೆ ಒಬ್ಬರಂತೆ ಈ ರೋಗ ದಿಂದ ಸಾವನ್ನಪ್ಪುತ್ತಿದ್ದಾರೆ. ಒಬ್ಬ ಕ್ಷಯರೋಗಿ ಯಿಂದ 15ರಿಂದ 20ಜನರಿಗೆ ರೋಗ ಹರಡುತ್ತದೆ, ಡಾಟ್ಸ್ ಎಂಬ ಔಷಧಿಯಿಂದ ಈ ರೋಗವನ್ನು ಗುಣಪಡಿಸ ಬಹುದು ಎಂದರು. ಸುಮಾರು 125 ಮಂದಿಯನ್ನು ಪರೀಕ್ಷಿಸಿ 20 ಮಂದಿಗೆ ಡಾಟ್ಸ್ ಚಿಕಿತ್ಸೆ ಪ್ರಾರಂಭಿಸಲಾಯಿತು. ಗ್ರಾಪಂ ಅಧ್ಯಕ್ಷೆ ರುಕ್ಮಿಣಮ್ಮ, ಸದಸ್ಯೆ ಸಾಕಮ್ಮ, ಉಮಾವತಿ, ಪಂಚಾಯಿತಿ ಕಾರ್ಯದರ್ಶಿ ವಿಜಯನರಸಿಂಹ ಇದ್ದರು.
ಡೀಸೆಲ್ ಉಳಿತಾಯ: ಚಾಲಕರಿಗೆ ಪ್ರಶಸ್ತಿ
ಕೋಲಾರ: ನಗರದ ಕೆಎಸ್ಆರ್ಟಿಸಿಘಟಕದಲ್ಲಿ ಸುಮಾರು 20 ವರ್ಷಗಳಿಂದ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಹೂಹಳ್ಳಿ ವಿ. ಮುನಿಯಪ್ಪ ಸುಮಾರು 6 ಲಕ್ಷ ರು.ಗಳ ಮೌಲ್ಯದ ಡೀಸೆಲ್ ಅನ್ನು ಉಳಿತಾಯ ಮಾಡಿ ಸಾರಿಗೆ ಸಂಸ್ಥೆಗೆ ಲಾಭವನ್ನು ತಂದು ಕೊಟ್ಟಿದಾರೆ. ಇವರು ಒಂದು ಲೀಟರ್ ಡೀಸೆಲ್ನಲ್ಲಿ ಸಂಸ್ಥೆಯ ಪ್ರಕಾರ ಕನಿಷ್ಠ 5.50 ಕಿ.ಮೀ ಆದರೂ ಚಲಿಸಬೇಕು. ವಿ. ಮುನಿಯಪ್ಪ ರವರು ಕನಿಷ್ಠಕ್ಕಿಂತ ಮೇಲ್ಪಟ್ಟು ಚಾಲನೆ ಮಾಡಿದ್ದಾರೆಂದು ಗುರುತಿಸಿ ಸಂಸ್ಥೆಯ ಅಧಿಕಾರಿಗಳು ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ಸಹಿತ ಗೌರವಿಸಿದ್ದಾರೆ. ಇದೇ ರೀತಿ ಎಂಟು ಮಂದಿ ಚಾಲಕರು ಡೀಸೆಲ್ ಉಳಿತಾಯದಲ್ಲಿ ಪ್ರಯತ್ನ ಪಟ್ಟಿರುತ್ತಾರೆ. ಇವರು ಕನಿಷ್ಠ 5.50 ಕಿ.ಮೀ. ಒಳಗೆ ಪ್ರಯತ್ನ ಪಟ್ಟಿದ್ದಾರೆಂದು ಸಂಸ್ಥೆ ಇವರಿಗೂ ಪ್ರಶಸ್ತಿ, ನಗದು ಬಹುಮಾನ ನೀಡಿ ಗೌರವಿಸಿದೆ.
ಅರಸು ಮನೆ ಧ್ವಂಸ ಖಂಡಿಸಿ 30ರಂದು ಪ್ರತಿಭಟನೆ
ಕೋಲಾರ: ಸಮತಾ ಸೈನಿಕ ದಳ ಹಾಗೂ ಡಿ. ದೇವರಾಜು ಆರಸು ಸ್ಮಾರಕ ಹೋರಾಟ ಸಮಿತಿ ಸಂಯುಕ್ತಾಶ್ರಯದಲ್ಲಿ ದಿವಂಗತ ಡಿ. ದೇವರಾಜ ಅರಸುರವರ ಮನೆಯನ್ನು ಧ್ವಂಸಗೊಳಿಸಿ ವಿರೂಪಗೊಳಿಸಿರುವ ಕೃತ್ಯ ಖಂಡಿಸಿ ರಾಜ್ಯಾದಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಸೆ.30 ರ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಸುರವರ ಮನೆ ಧ್ವಂಸಗೊಳಿಸಿ ಸ್ಥಳದಲ್ಲಿಯೇ ಅರಸು ಸ್ಮಾರಕವನ್ನು ನಿರ್ಮಾಣ ಮಾಡಬೇಕು, ಅಹಿಂದ ಅಭ್ಯುದಯದ ಶಿಕ್ಷಣ ಯೋಜನೆಯ ಕಟ್ಟಡ ನಿರ್ಮಾಣ ಮಾಡುವ ನಿರ್ಧಾರವನ್ನು ಪ್ರಕಟಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಸದರು, ಶಾಸಕರು, ಮನೆಗಳಿಗೆ ಘೇರಾವ್ ಹಾಗೂ ಬೀದರನಿಂದ ಅರಸು ಜ್ಯೋತಿಯನ್ನು ಹೊರಡಿಸುವ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಶಿಕ್ಷಕರ ಮೇಲೆ ಒತ್ತಡ: ಲಿಂಗಪ್ಪ ಆರೋಪ
ಗೌರಿಬಿದನೂರು: ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಮೇಲೆ ರಾಜ್ಯ ಸರ್ಕಾರ ಕ್ಷೀರ ಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಕಟ್ಟಡದ ಕಾಮಗಾರಿಗಳು, ಮಕ್ಕಳಿಗೆ ಸಮವಸ್ತ್ರ ಹೊಲಿಸಿಕೊಡುವ ಕಾರ್ಯ ಹೀಗೆ ಹತ್ತು ಹಲವು ಜವಾಬ್ದಾರಿಗಳ ಒತ್ತಡ ಹೇರುತ್ತಿದ್ದು, ಇದರಿಂದ ಶಾಲೆಗಳಲ್ಲಿ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುತ್ತಿದೆ ಎಂದು ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಡಿ. ಲಿಂಗಪ್ಪ ಆರೋಪಿಸಿದ್ದಾರೆ.
ಇದರೊಂದಿಗೆ ಪ್ರತಿ ದಿನ ಬಿಇಓ, ಬಿಆರ್ಸಿ, ಸಿಆರ್ಸಿ, ಸಿಆರ್ಪಿ ಗಳಿಂದ ಪ್ರತ್ಯೇಕವಾಗಿ ಚಾಚೂ ತಪ್ಪದೆ ಮಾಡಬೇಕಾದ ಆದೇಶಗಳು, ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಶಿಕ್ಷಕರ ಮೇಲೆ ಒತ್ತಡ ಹೇರುವುದನ್ನು ಕೈ ಬಿಡಬೇಕು, ಇಲ್ಲವಾದಲ್ಲಿ ಸರ್ಕಾರಿ ಶಾಲೆಗಳಲ್ಲಿನ ಇಂತಹ ದುಸ್ಥಿತಿಯನ್ನು ಕಂಡ ಪಾಲಕರು ಈಗಾಗಲೇ ಖಾಸಗಿ ಶಾಲೆಗಳತ್ತ ಮುಖಮಾಡಿ ನಿಂತಿದ್ದಾರೆ, ಇನ್ನು ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಹೇಗೆ ಸಾಧ್ಯವಾದೀತು ಎಂದು ಡಿ. ಲಿಂಗಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿಶ್ವ ಹೃದಯ ದಿನಅಂಗವಾಗಿ ಜಾಥಾ
ಕೋಲಾರ: ನಗರದ ಟಮಕದಲ್ಲಿರುವ ಆರ್.ಎಲ್. ಜಾಲಪ್ಪ ನಾರಾಯಣ ಹಾರ್ಟ್ ಸೆಂಟರ್ವತಿಯಿಂದ ವಿಶ್ವ ಹೃದಯ ದಿನಾಚರಣೆ ಅಂಗವಾಗಿ 28ರಂದು ಬೆಳಗ್ಗೆ 8.30 ಗಂಟೆಗೆ ನಗರದ ಮೆಥೋಡಿಸ್ಟ್ ಚರ್ಚ್ ಬಳಿಯಿಂದ ಜಾಥಾ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ನಿವಾಸ್ ಸೆಪೆಟ್ ಜಾಥಕ್ಕೆ ಚಾಲನೆ ನೀಡಲಿದ್ದಾರೆ. ಡಾ. ಆನಂದ್ ಕುಮಾರ್, ಈರಣ್ಣ, ಜಾಲಪ್ಪ ನಾರಾಯಣ ಹಾರ್ಟ್ ಸೆಂಟರ್ನ ಆಡಳಿತಾಧಿಕಾರಿ ಹಿಮಾನ್ಯೂಲ್ ಭಾಗವಹಿಸಲಿದ್ದಾರೆ.
ನರೇಗಾ: ಫೋಟೋ ದಾಖಲಾತಿ ಕಡ್ಡಾಯ
ಕೋಲಾರ: ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳಿಗೆ ಸಂಬಂಧಿಸಿದ ಛಾಯಚಿತ್ರಗಳನ್ನು ದಾಖಲಿಸಲು ಉದಾಸೀನ ತೋರಿದರೆ ಶಿಸ್ತಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಉದ್ಯೋಗ ಖಾತ್ರಿ ಯೋಜನೆಯ ಜಿಲ್ಲಾ ಸಂಯೋಜಕ ರವಿರಾಜ್ ಎಚ್ಚರಿಸಿದ್ದಾರೆ. ಜಿಪಂ ಸಭಾಂಗಣದಲ್ಲಿ ಶುಕ್ರವಾರ ಬಂಗಾರಪೇಟೆ ತಾಲೂಕಿನ ಗ್ರಾಪಂ ಕಾರ್ಯದರ್ಶಿ, ಪಿಡಿಒ ಹಾಗೂ ಡಾಟಾ ಎಂಟ್ರಿ ಆಪರೇಟರ್ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಉದ್ಯೋಗ ಖಾತ್ರಿಯಡಿ ನಡೆಸುತ್ತಿರುವ ಕಾಮಗಾರಿಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಫೋಟೊ ಅಪ್ ಲೋಡ್ ಮಾಡುವಲ್ಲಿ ಕೆಲ ಗ್ರಾಪಂಗಳು ಶೂನ್ಯ ಸಾಧನೆಗೆ ತೋರಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 2012-13ನೇ ಸಾಲಿನಲ್ಲಿ ಖಾತ್ರಿಯಡಿ ನಡೆದಿರುವ ಕಾಮಗಾರಿಗೆ ಸಂಬಂಧಿಸಿದಂತೆ ವೆಂಡರ್ ಬ್ಯಾಂಕ್ ಖಾತೆ, ಟಿನ್ ನಂಬರ್ ನಮೂದಿಸದಿರುವುದು ಇನ್ನಿತರೆ ಪೂರಕ ಮಾಹಿತಿಗಳನ್ನು ಅಪ್ ಲೋಡ್ ಮಾಡದಿರುವುದರಿಂದ ಸಾಮಗ್ರಿಗಳ ಬಿಲ್ ಮಂಜೂರಾಗಲು ಬಾಕಿ ಇದೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಸಾಮಗ್ರಿ ಬಿಲ್ನಲ್ಲಿ ಎಡಿಟ್ ಆಪ್ಷನ್ ನೀಡಿದರೆ ಗುರುತಿಸಿರುವ ವೆಂಡರ್ನ ಹೆಸರು ಲಾಗ್ ಇನ್ ಮಾಡಲಾಗುವುದು ಎಂದು ವಿವರಿಸಿದರು.