ರಸ್ತೆ ಅಭಿವೃದ್ಧಿಗೆ ಜಿಲ್ಲೆಯಾದ್ಯಂತ ಸರ್ವೆ
ಕೋಲಾರ: ಜಿಲ್ಲೆಯ ರಸ್ತೆಗಳ ಸಮಗ್ರ ಅಭಿವೃದ್ಧಿಗೆ 150 ಕೋಟಿ ಅನುದಾನ ಕೋರಿ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಇದಕ್ಕೆ ಸಕಾರಾತ್ಮಕ ಭರವಸೆ ಸಿಕ್ಕಿರುವುದರಿಂದ ರಸ್ತೆಗಳ ಅಭಿವೃದ್ಧಿಗೆ ಶೀಘ್ರವೇ ಕಾರ್ಯಕ್ರಮ ರೂಪಿಸುವುದಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮುನಿ ಆಂಜನಪ್ಪ ತಿಳಿಸಿದರು.
ಅವರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಜಿಲ್ಲೆಯಾದ್ಯಂತ ತಾವೇ ಖುದ್ದು ಪ್ರವಾಸ ಮಾಡಿ ರಸ್ತೆಗಳ ಸ್ಥಿತಿಗತಿ ಅರಿತು ಜನತೆಯ ಸಹಕಾರದಿಂದ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಹೇಳಿದರು. ಜಿಲ್ಲೆಯಲ್ಲಿ ಎಷ್ಟು ರಸ್ತೆಗಳು ಹಾಳಾಗಿವೆ, ಎಲ್ಲಿ ತೇಪೆ ಕಾಮಗಾರಿ ಆಗಬೇಕು, ಎಷ್ಟು ಕಡೆ ಸಮಗ್ರವಾಗಿ ರಸ್ತೆಗಳು ಅಭಿವೃದ್ಧಿಗೊಳ್ಳಬೇಕೆಂಬುದನ್ನು ತಿಳಿಯಲು ತಾವೇ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ನಂತರ ಕಾಮಗಾರಿಗೆ ಕಾರ್ಯಸೂಚಿ ಸಿದ್ಧಪಡಿಸಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.
ರಸ್ತೆಗಳ ಕಾಮಗಾರಿ ನಡೆಯುವಾಗ ಜನತೆಯ ಸಹಕಾರ ಅತಿ ಮುಖ್ಯ. ಜತೆಗೆ ಗುತ್ತಿಗೆದಾರರು ಸಹ ಸರ್ಕಾರದ ನಿಯಮಾವಳಿಯ ಪ್ರಕಾರ ರಸ್ತೆಗಳ ಕಾಮಗಾರಿ ನಡೆಸಬೇಕು, ನಮ್ಮ ಇಲಾಖೆಯ ಸಂಬಂಧಪಟ್ಟ ಎಂಜನಿಯರ್ಗಳು ಮೇಲ್ವಿಚಾರಣೆ ನೋಡಿಕೊಳ್ಳಲು ವಿಫಲರಾದರೆ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದರು.
ರಸ್ತೆಗಳ ಅಭಿವೃದ್ಧಿಗೆ 150 ಕೋಟಿ ಕೇಳಿದ್ದೇವೆ. ಮುಖ್ಯಮಂತ್ರಿಗಳು ಅಷ್ಟೂ ಹಣ ನೀಡಲಾಗದಿದ್ದರೂ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಅನುದಾನ ಬಂದ ಕೂಡಲೇ ಗುಣಮಟ್ಟದ ರಸ್ತೆಗಳ ಕಾಮಗಾರಿಗೆ ಆದ್ಯತೆ ನೀಡುವುದಾಗಿ ಹೇಳಿದರು.
ಕೋಲಾರದ ಮೆಕ್ಕೆ ವೃತ್ತದ ಸಮೀಪ ರಸ್ತೆಯಲ್ಲಿ ಪೈಪ್ಲೈನ್ ಇರುವುದರಿಂದ ಮೊದಲು ನೀರಿನ ಸೋರಿಕೆ ತಡೆಯಬೇಕಾಗಿದೆ. ಪದೇ ಪದೇ ರಸ್ತೆ ಹಾಳಾಗುತ್ತಿರುವುದರಿಂದ ತಾವೇ ಖುದ್ದು ನಿಂತು ಕಾಮಗಾರಿ ನಡೆಸುವುದಾಗಿ ತಿಳಿಸಿದರು. ಈ ಮುಂದೆ ರಸ್ತೆಗಳಿಗೆ ಜಲ್ಲಿ ಬಿಚಾವಣೆ ವಿವಿಧ ಹಂತಗಳಲ್ಲಿ ನಡೆಸಿ ನಂತರ ಡಾಂಬರ್ ಹಾಕಲಾಗುತ್ತಿತ್ತು. ಈಗ ಸ್ಟ್ಯಾಂಡರ್ಡ್ ಬದಲಾಗಿದೆ. ಜಲ್ಲಿ ಬಿಚಾವಣೆ ಆದ ನಂತರ ಅದರ ಮೇಲೆ ಎರಡು ಮೂರು ಬಾರಿ ಸಣ್ಣ ಜಲ್ಲಿ ಮಿಶ್ರಿತ ಡಾಂಬರ್ ಪದರ ಹಾಕಬೇಕೆಂಬ ನಿಯಮವಿದ್ದರೂ ಪಾಲನೆ ಆಗುತ್ತಿಲ್ಲ. ಕನಿಷ್ಠ 5 ವರ್ಷವಾದರೂ ಒಂದು ರಸ್ತೆ ಬಾಳಿಕೆ ಬರುವ ರೀತಿಯಲ್ಲಿ ಕಾಮಗಾರಿ ನಡೆಸುವುದಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಗುಣಮಟ್ಟದ ರಸ್ತೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸಲಹೆ ಸೂಚನೆ ನೀಡಿದ್ದಾರೆ. ಅದರಂತೆ ನಾವು ನಮ್ಮ ಜವಾಬ್ದಾರಿ ನಿರ್ವಹಿಸುತ್ತೇವೆ. ಕಾಮಗಾರಿ ನಡೆಯುವಾಗ ಜನತೆ ಗುಣಮಟ್ಟದ ಕಡೆ ಗಮನ ನೀಡಿ, ಲೋಪ ಕಂಡು ಬಂದಲ್ಲಿ ಮಾಹಿತಿ ನೀಡಿದಲ್ಲಿ ಸರಿಪಡಿಸುವುದಾಗಿ ಹೇಳಿದರು.