ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ವಯಂ ಉದ್ಯೋಗ ತರಬೇತಿ

Vishwanath S
Updated On : 28 Sept 2013, 12:37 pm

ಮಾಲೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಾವಲಂಬಿಯ ಸ್ವಯಂ ಉದ್ಯೋಗಕ್ಕಾಗಿ ಹಲಾವರು ಯೋಜನೆಗಳನ್ನು ರೂಪಿಸಿದ್ದು, ವಿಶೇಷವಾಹಿ ಮಹಿಳೆಯರು ಈ ಯೋಜನೆಗಳನ್ನು ಸದಪಯೋಗ ಪಡಿಸಿಕೊಳ್ಳಬೇಕು ಎಂದು ಯೋಜನಾಧಿಕಾರಿ ವಿನಾಯಕ ಹೇಳಿದರು. ಬಜ್ ಇಂಡಿಯಾ ಟ್ರಸ್ಟ್ ಹಾಗೂ ರೋಟರಿ ಸಂಸ್ಥೆಯು ಇಲ್ಲಿನ ಪುರಸಭೆಯ ಸಹಕಾರದಲ್ಲಿ ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಬೀದಿ ವ್ಯಾಪಾರಿ, ಕೌಶಲ್ಯಧಾರಿತ ವೃತ್ತಿ ತರಬೇತಿ ವಿಷಯಗಳ ಅರಿವು ಕಾರ್ಯಾಗಾರದಲ್ಲಿ  ಮಾತನಾಡಿ, ಕೇಂದ್ರ ಸರ್ಕಾರದ ಸುವರ್ಣ ಜಯಂತಿ ಶಹರಿ ಯೋಜನೆಯಡಿ ಈ ವರ್ಷ 12 ಮಂದಿಗೆ ತಲಾ 2 ಲಕ್ಷ ರು.ಗಳ ವೈಯಕ್ತಿಕ ಸಾಲಕ್ಕೆ ಅವಕಾಶ ಮಾಡಿಕೊಡಲಾಗಿದ್ದು, 50 ಸಾವಿರ ರು.ಗಳ ಸಬ್ಸಿಡಿ ದೊರೆಯಲಿದೆ ಎಂದರು. ರೋಟರಿ ಸಂಸ್ಥೆಯ ವಿಜಯ ಕಾಶಿನಾಥ್ ಫೈ, ಪ್ರಭು, ಬುಜ್ ಸಂಸ್ಥೆಯ ಚಂದ್ರಶೇಖರಯ್ಯ, ಉತ್ತರೆ ನಾರಾಯಣ್, ಶಾಂತ ಮಣಿ, ಅಧಿಕಾರಿಗಳಾದ ರಾಜಣ್ಣ, ರವಿಶಂಕರ್ ಇದ್ದರು. ಸಭೆಯ ನಂತರ ಭಾಗವಹಿಸಿದ್ದ ಮಹಿಳೆಯರಿಗಾಗಿ ತರಬೇತಿಗಾಗಿ ತಯಾರಿಸಿದ್ದ ಬಿಸ್ಸಿನೆಸ್ ಸ್ಕೂಲ್ ಆನ್ ವೀಲ್ ವಾಹನದಲ್ಲಿ ತರಬೇತಿ ನೀಡಲಾಯಿತು.

ಕರಡು ಮತಗಟ್ಟೆ ಪಟ್ಟಿ
ಕೋಲಾರ: ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ವಿಧಾನಸಭಾ ಮತಗಟ್ಟೆಗಳ ಪುನರ್ ವಿಂಗಡಣೆಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಅದರಂತೆ ಜಿಲ್ಲೆಯ ಎಲ್ಲಾ 6 ವಿಧಾನಸಭಾ ಕ್ಷೇತ್ರಗಳ ಕರಡು ಮತಗಟ್ಟೆಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕರಡು ಮತಗಟ್ಟೆಗಳ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿ ಹಾಗೂ ಪರಿಶೀಲನೆಗಾಗಿ ಎಲ್ಲಾ ತಹಸೀಲ್ದಾರರ ಕಚೇರಿಗಳು, ಸಹಾಯಕ ಕಮೀಷನರ್ ಉಪ ವಿಭಾಗ ಕಚೇರಿ ಕೋಲಾರ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇರಿಸಲಾಗಿದೆ. ಸಾರ್ವಜನಿಕರು ಕಚೇರಿ ಸಮಯದಲ್ಲಿ ಕರಡು ಪಟ್ಟಿಯನ್ನು ಪರಿಶೀಲಿಸಬಹುದಾಗಿದ್ದು, ಆ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಅದನ್ನು ಲಿಖಿತವಾಗಿ ಸೆ.30ರ ಒಳಗಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.

ಇಂದು ಭಗತ್‌ಸಿಂಗ್ ಜನ್ಮ ದಿನಾಚರಣೆ
ಕೋಲಾರ: ದೇಶಪ್ರೇಮಿ ಶಾಹೀದ್ ಭಗತ್‌ಸಿಂಗ್ 106ನೇ ಜನ್ಮ ದಿನಾಚರಣೆಯನ್ನು ಭಾರತ ವಿದ್ಯಾರ್ಥ್ಥಿ ಫೆಡರೇಷನ್ (ಎಸ್.ಎಫ್.ಐ) ನೇತೃತ್ವದಲ್ಲಿ 28 ರ ಮಧ್ಯಾಹ್ನ 12 ಗಂಟೆಗೆ ನಗರದ ಟಿ. ಚೆನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮಾರಂಭವನ್ನು ಪ್ರೊ.ಎಸ್.ಜಿ. ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

ಎಲ್.ಬಿ. ಶಾಸ್ತ್ರಿ ನಗರದಲ್ಲಿ ಕುಡಿಯುವ ನೀರಿಗೆ ಆಗ್ರಹಿಸಿ ಧರಣಿ
ಮಾಲೂರು: ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ, ಜನಪ್ರತಿನಿಧಿಗಳು, ಪುರಸಭೆ ಅಧಿಕಾರಿಗಳು ಬಡಾವಣೆಗೆ ಭೇಟಿ ನೀಡದೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ಇಲ್ಲಿನ ರೈಲ್ವೇ ನಿಲ್ದಾಣ ಬಳಿಯ ಎಲ್.ಬಿ. ಶಾಸ್ತ್ರಿ ನಗರದ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆದಿದೆ. ರೈಲ್ವೇ ಹಳಿ ದಾಟಿ ಪಟ್ಟಣದ ವಾರ್ಡ್ ನಂ.22 ಕ್ಕೆ ಸೇರಿದ ಈ ಬಡಾವಣೆಗೆ ಬರುತ್ತಿದ್ದ ನೀರಿನ ಪೈಪು ತುಂಡಾಗಿದ್ದು, ನೀರಿನ ಹರಿವಿಕೆ ನಿಂತಿದೆ. ಈ ಬಗ್ಗೆ ಪುರಸಭೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಎರಡು ತಿಂಗಳಿಂದ ನೀರಿನ ಸಮಸ್ಯೆ ತೀವ್ರವಾಗಿದ್ದರೂ ಇದುವರೆಗೂ ಜನಪ್ರತಿನಿಧಿಗಳಾಗಲಿ, ಸಂಬಂಧ ಪಟ್ಟ ಪುರಸಭೆ ಅಧಿಕಾರಿಗಳಾಗಲಿ ಸಮಸ್ಯೆ ತೀರಿಸುವ ಕಳಕಳಿ ತೋರಿಲ್ಲ ಎಂದು ಪುರಸಭೆಗೆ ಬಾಗಿಲಿನಲ್ಲಿ ಧರಣಿ ಕುಳಿತರು. ಪುರಸಭೆ ಮುಖ್ಯಾಧಿಕಾರಿ ರೇಣುಕಾ ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿ, ಬಡಾವಣೆಯ ನೀರಿನ ಸಮಸ್ಯೆಯನ್ನು ಇನ್ನೆರಡು ದಿನಗಳಲ್ಲಿ ಬಗೆ ಹರಿಸುವುದಾಗಿ ತಿಳಿಸಿದರೂ ಬಡಾವಣೆಗೆ ಭೇಟಿ ನೀಡಿದ ಹೂರತು ಸ್ಥಳ ಬಿಡುವುದಿಲ್ಲ ಎಂಬ ಪ್ರತಿಭಟನೆಕಾರರ ಒತ್ತಡಕ್ಕೆ ಮಣಿದ ಮುಖ್ಯಾಧಿಕಾರಿ ನಿವಾಸಿಗಳ ಜತೆಯಲ್ಲಿ ಎಲ್.ಬಿ. ಶಾಸ್ತ್ರಿ ನಗರಕ್ಕೆ ಭೇಟಿ ಪರಿಶೀಲಿಸದರಲ್ಲದೇ ಒಡೆದು ಹೋಗಿರುವ ಪೈಪನ್ನು ಸರಿಪಡಿಸಲು ಸಿಬ್ಬಂದಿಗೆ ಸೂಚಿಸಿದರು. ಬಡಾವಣೆಯ ನಿವಾಸಿಗಳಾದ ಪ್ರಶಾಂತ್, ಕವಿತಾ, ಮೀನಾಕ್ಷಿ, ಮುದ್ದಮ್ಮ, ಭೂಭಮ್ಮ, ಮಂಗಳಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement