ಅಡುಗೆ ಕೋಣೆಗಳಿಗೆ ಮಕ್ಕಳನ್ನು ಬಿಡಬೇಡಿ: ಮಂಜುನಾಥ್ ಗೌಡ
ಮಾಲೂರು: ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳ ಅಡುಗೆ ಕೋಣೆಗಳಲ್ಲಿ ಕಾರ್ಯನಿರ್ವಹಿಸುವರು ಕಟ್ಟುನಿಟ್ಟಾಗಿ ಯಾವ ಮಕ್ಕಳನ್ನು ಬಿಡಬಾರದೆಂಬ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿರುವುದಾಗಿ ಶಾಸಕ ಮಂಜುನಾಥ್ ಗೌಡ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶುಕ್ರವಾರದಂದು ತಾಲೂಕಿನ ಬ್ಯಾಲಹಳ್ಳಿ ಸರ್ಕಾರಿ ಶಾಲೆಯ ಅಡುಗೆ ಕೋಣೆಯ ಅವಘಡದಲ್ಲಿ ಸುಟ್ಟ ಗಾಯಗಳಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಮನೋಜ್ ಕುಮಾರ್‌ನನ್ನು ಶನಿವಾರದಂದು ಆಸ್ವತ್ರೆ ಭೇಟಿಯಾಗಿದ್ದು, ಆರೋಗ್ಯ ಸುಧಾರಣೆಗೊಳ್ಳುತ್ತಿದೆ ಎಂದರು. ದೇಹದ ಶೇ.50 ಭಾಗ ಸುಟ್ಟಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಸಿದ ಶಾಸಕರು, ಮನಸ್ಸು ಕಲಕುತ್ತಿರುವ ಇಂತಹ ಸಂಧರ್ಭದಲ್ಲಿ ಸನ್ಮಾನಿಸಿಕೊಳ್ಳಲು ಮನಸ್ಸಾಗುತ್ತಿಲ್ಲ ಎಂದರು. ಮಗುವಿನ ಚಿಕಿತ್ಸೆಯ ಸಂಪೂರ್ಣ ಖರ್ಚನ್ನು ಸರ್ಕಾರ ಭರಿಸುವುದಾಗಿ ಆಸ್ವತ್ರೆಗೆ ನನ್ನ ಜತೆಯಲ್ಲಿ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ ಎಂದು ತಿಳಿಸಿದರು.