ಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು
ಕ.ಪ್ರ. ವಾರ್ತೆ, ಕೋಲಾರ. ಸೆ.29
ಅಪರಿಚಿತ ವಾಹನ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡಿದ್ದ ಜಿಂಕೆಯೊಂದು ಸಕಾಲಕ್ಕೆ ಚಿಕಿತ್ಸೆ ನೀಡುವವರು ಇಲ್ಲದೆ ಮೃತಪಟ್ಟಿರುವ ಘಟನೆ ನಡೆದಿದೆ.
ಕೋಲಾರ-ಶ್ರೀನಿವಾಸಪುರ ರಸ್ತೆಯ ಮುದುವಾಡಿ ಬಳಿ ಭಾನುವಾರ ಕಾಡಿನಿಂದ ನಾಡಿಗೆ ಬಂದ ಜಿಂಕೆ ರಸ್ತೆ ದಾಟುತ್ತಿದ್ದಾಗ ಇಂಡಿಕಾ ಕಾರಿ ಡಿಕ್ಕಿ ಹೊಡೆದು ಪರಾರಿಯಾಗಿದೆ. ಜಿಂಕೆಯ ಬೆನ್ನಿನ ಭಾಗಕ್ಕೆ ಬಲವಾದ ಏಟು ಬಿದ್ದಿದ್ದು, ಹಿಂಬದಿಯ ಒಂದು ಕಾಲು ಮುರಿದು ಒದ್ದಾಡುತ್ತಿತ್ತು.
ಇದೇ ಮಾರ್ಗದಲ್ಲಿ ಬಂದ ನಗರದ ಅಂತರಗಂಗಾ ಬುದ್ಧಿಮಾಂಧ್ಯ ಶಾಲೆಯ ಮುಖ್ಯಸ್ಥ ಶಂಕರ್ ಸ್ಥಳೀಯರ ಸಹಕಾರದಿಂದ ತಕ್ಷಣ ಟೆಂಪೊದಲ್ಲಿ ಜಿಂಕೆಯನ್ನು ಕೋಲಾರದ ಸರ್ಕಾರಿ ಪಶು ಆಸ್ಪತ್ರೆಗೆ ಚಿಕಿತ್ಸೆಗೆಂದು ತಂದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಜಿಂಕೆಗೆ ಚಿಕಿತ್ಸೆ ನೀಡಲು ವೈದ್ಯರು ಮತ್ತು ಸಿಬ್ಬಂದಿ ಇರಲಿಲ್ಲವಾದ್ದರಿಂದ ಹೆಣ್ಣು ಜಿಂಕೆ ಮೃತಪಟ್ಟಿತು ಎಂದು ಜಿಂಕೆಯನ್ನು ಆಸ್ಪತ್ರೆಗೆ ಸೇರಿಸಿದ ಜನತೆ ದೂರಿದ್ದಾರೆ.
ವಡಗೂರು ಪಶು ಚಿಕಿತ್ಸಾ ಘಟಕದ ಡಾ. ನಾಗಣ್ಣ ಸ್ಥಳಕ್ಕೆ ಬರುವ ವೇಳೆಗೆ ಜಿಂಕೆ ಸತ್ತಿತ್ತು. ವಿಷಯ ತಿಳಿದ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ರಾಮಕೃಷ್ಣ, ಅರಣ್ಯ ಉಪ ವಲಯದ ನಾರಾಯಣಸ್ವಾಮಿ ಪಶು ಆಸ್ಪತ್ರೆಗೆ ಭೇಟಿ ನೀಡಿ ಮಹಜರು ನಡೆಸಿದರು.
ಸಾರ್ವಜನಿಕರ ಆಕ್ರೋಶ
ಜಿಲ್ಲೆಯಾದ್ಯಂತ ರಾಸುಗಳು ಕಾಲುಬಾಯಿ, ಗಂಟಲು ಬೇನೆಯಿಂದ ಬಳಲುತ್ತಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಕೇಂದ್ರದ ಈ ಆಸ್ಪತ್ರೆಯಲ್ಲಿ ರಜಾ ದಿನದಂದು ಒಬ್ಬನೇ ಒಬ್ಬ ವೈದ್ಯ ಸಿಬ್ಬಂದಿ ಇಲ್ಲ. ಕೆಲ ಸಾರ್ವಜನಿಕರು ಹಸುಗಳನ್ನು ತಂದು ಕಟ್ಟಿದ್ದಾರೆ. ಅದಕ್ಕೂ ಚಿಕಿತ್ಸೆ ನೀಡುವವರು ಯಾರೂ ಇಲ್ಲಎಂದು ಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಂಕೆಯನ್ನು ಪಶು ಆಸ್ಪತ್ರೆಗೆ ತಂದಾಗ ಬದುಕಿತ್ತು. ತಕ್ಷಣ ಪಶುಪಾಲನಾ ಇಲಾಖೆಯ ತಾಲೂಕು ಅಧಿಕಾರಿ ಡಾ. ಚೆನ್ನಕೇಶವ ಅವರಿಗೆ ದೂರವಾಣಿ ಕರೆ ಮಾಡಿದಾಗ ವೈದ್ಯರನ್ನು ಕಳುಹಿಸುತ್ತೇನೆ ಎಂದು ಹೇಳಿದರೇ ವಿನಃ ಒಂದು ಗಂಟೆ ಕಾದರೂ ಸಕಾಲದಲ್ಲಿ ಯಾರೊಬ್ಬ ವೈದ್ಯರೂ ಬರಲಿಲ್ಲ. ಇಲಾಖೆ ಅಧಿಕಾರಿಗಳ, ವೈದ್ಯರ ನಿರ್ಲಕ್ಷ್ಯವೇ ಜಿಂಕೆ ಸಾವಿಗೆ ಕಾರಣ ಎಂದು ಶ್ರೀನಿವಾಸಪುರ ಯುವ ಕಾಂಗ್ರೆಸ್ನ ಜನಪನಹಳ್ಳಿಯ ನವೀನ್ಕುಮಾರ್ ಆರೋಪಿಸಿದ್ದಾರೆ.
ಲಾರಿ-ದ್ವಿಚಕ್ರ ವಾಹನ ಡಿಕ್ಕಿ-ಒಬ್ಬ ಸಾವು
ಕೋಲಾರ/ಮುಳಬಾಗಿಲು: ಮುಳಬಾಗಿಲು ತಾಲೂಕಿನ ಕರದಿಪುರ ಬಳಿ ಭಾನುವಾರ ಬೆಳಗಿನಜಾವ ಮರಳು ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹೊಂಡಾ ಮೋಟಾರ್ ಸೈಕಲ್ ಕಂಪನಿಯ ಕಾರ್ಮಿಕ ಮೃತಪಟ್ಟು, ಮತ್ತೊಬ್ಬನಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಮೃತ ಕಾರ್ಮಿಕನನ್ನು ಮುಳಬಾಗಿಲು ತಾಲೂಕಿನ ಕುರುಡುಮಲೆಯ ನಿವಾಸಿ ರಿಯಾಜ್(23) ಎಂದು ಹಾಗೂ ಗಾಯಾಳುವನ್ನು ಅಶೋಕ್ ಎಂದು ಗುರುತಿಸಲಾಗಿದೆ.
ಹೊಂಡಾ ಮೋಟಾರ್ ಸೈಕಲ್ ಕಂಪನಿಯ ಉದ್ಯೋಗಿಗಳಾದ ಇವರಿಬ್ಬರು ರಾತ್ರಿ ಪಾಳಿಯ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಊರಿಗೆ ಬರುತ್ತಿದ್ದಾಗ ಕದರಿಪುರ ಬಳಿ ಮರಳು ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ.
ರಿಯಾಜ್ ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಆಗಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಭಾನುವಾರ ಸಂಜೆ ಮೃತರಾಗಿದ್ದಾರೆ.
ಗಾಯಾಳು ಅಶೋಕ್ ಸ್ಥಿತಿ ಗಂಭೀರವಾಗಿದೆ. ಮುಳಬಾಗಿಲು ಪೊಲೀಸರು ಮರಳು ಲಾರಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ.
ಮಾಲೂರು; 8 ಅಂಗಡಿಗಳಲ್ಲಿ ಕಳ್ಳತನ
ಮಾಲೂರು: ಮಾಲೂರಿನಲ್ಲಿ ಶನಿವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಹೂಸೂರು ರಸ್ತೆಯಲ್ಲಿ 8 ಅಂಗಡಿಗಳಲ್ಲಿ ಕಳ್ಳರ ತಂಡ ತಮ್ಮ ಕೈಚಳಕ ತೋರಿಸಿ ಅಂಗಡಿಗಳಲ್ಲಿದ್ದ ಸುಮಾರು 40 ಸಾವಿರಕ್ಕೂ ಹೆಚ್ಚು ನಗದನ್ನು ಲಪಾಟಯಿಸಿದ್ದಾರೆ.
ಇಲ್ಲಿನ ಹೂಸೂರು ರಸ್ತೆಯಲ್ಲಿನ ಇಂದ್ರಾನಗರ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ವಾಣಿಜ್ಯ ಸಂಕೀರ್ಣದ ಅಂಗಡಿಗಳ ಶಟರ್ಗಳನ್ನು ಮೀಟಿ ಒಳ ನುಗ್ಗಿರುವ ಕಳ್ಳರ ತಂಡ ವಾಣಿಜ್ಯ ಸಂಕೀರ್ಣದಲ್ಲಿದ್ದ ಬ್ಯೂಟಿ ಪಾರ್ಲರ್, ಬಳೆ ಅಂಗಡಿ ಸೇರಿದಂತೆ ಈ ಸಾಲು ಮಳಿಗೆಗಳಲ್ಲಿ ನಗದು ಮಾತ್ರ ಕಳ್ಳತದ್ದು, ಮಾಲೀಕರುಗಳ ಹೇಳಿಕೆಯಂತೆ ಸುಮಾರು 40 ಸಾವಿರ ರು. ಕಳ್ಳತನವಾಗಿದೆ. ನಿತ್ಯ ರಾತ್ರಿ ಗಸ್ತುವಿರುವ ಮಾಸ್ತಿ ವೃತ್ತದಿಂದ ಕೊಗಳತೆ ದೂರದಲ್ಲಿ ಕಳ್ಳತನ ನಡೆದಿದ್ದು,ಅಂಗಡಿ ಮಾಲೀಕರಲ್ಲಿ ಅತಂಕ ಮನೆ ಮಾಡಿದೆ.
ನಿತ್ಯ ಗಸ್ತು ತಿರುಗುವ ಪೊಲೀಸರಿಗೆ ಘಟನೆ ಅರಿವಿಗೆ ಬರದಿರುವುದು ಅಶ್ಚರ್ಯವಾಗಿದೆ ಎನ್ನುವ ಸ್ಥಳೀಯರು ಒಂದು ಮೂಲಕ ಪ್ರಕಾರ ನಿತ್ಯ ರಾತ್ರಿ ಇಲ್ಲಿನ ವಾಣಿಜ್ಯ ಸಂಕೀರ್ಣದಲ್ಲಿ ಬಂದು ಬೀಟ್ ಪುಸ್ತಕದಲ್ಲಿ ಸಹಿ ಮಾಡಬೇಕಾದ ಪೊಲೀಸರು ವಾಣಿಜ್ಯ ಸಂಕೀರ್ಣಕ್ಕೆ ಬಂದೇ ಇಲ್ಲ ಎಂಬುದು ಬೀಟ್ ಪುಸ್ತಕ ನೋಡಿದಾಗ ತಿಳಿದು ಬಂದಿದೆ ಎನ್ನುತ್ತಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಕ್ಷಿಣೆ ಕಿರುಕುಳ: ಪತಿ ವಿರುದ್ಧ ಪತ್ನಿ ದೂರು
ಕೆಜಿಎಫ್: ಪತ್ನಿಗೆ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಪ್ರಕರಣ ವರದಿಯಾಗಿದೆ.
ಆಂಡ್ರಸನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕರಡುಗೂರು ಗ್ರಾಮದ ನಿವಾಸಿ ಹೇಮಾ ಎಂಬುವರನ್ನು ಕಳೆದ ವರ್ಷ ಕಾರ್ತಿಕ್ ಎಂಬುವರೊಂದಿಗೆ ವಾಸವಿ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯ ಸಮಯದಲ್ಲಿ ಚಿನ್ನದ ಒಡವೆಗಳು ಒಂದು ಲಕ್ಷ ನಗದು ಸೇರಿದಂತೆ ಮನೆಯ ವಸ್ತುಗಳು ಒಟ್ಟು 3 ಲಕ್ಷ ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆಯಾದ ಕೆಲ ತಿಂಗಳು ಮಾತ್ರ ಪತಿ ಕಾರ್ತಿಕ್ ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡಿದ್ದು ನಂತರ ವರದಕ್ಷಿಣೆಯಾಗಿ ನೀಡಿದ್ದ ಚಿನ್ನದ ಒಡವೆಗಳನ್ನು ಮಾರಾಟ ಮಾಡಿದ್ದು ಇದನ್ನು ಪ್ರಶ್ನಿಸಿದ ಪತ್ನಿಯನ್ನು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರಲ್ಲದೆ ಊಟವನ್ನು ಸಹ ನೀಡುತ್ತಿರಲ್ಲಿಲ್ಲ.
ಇದನ್ನು ನಿಮ್ಮ ತವರು ಮನೆಗೆ ತಿಳಿಸಿದರೆ ನಿನ್ನನ್ನು ಸಾಯಿಸಿಬಿಡುವುದಾಗಿ ಪತಿ ಕಾರ್ತಿಕ್ ಹಾಗೂ ಆತನ ಮನೆಯವಲು ಹೇಮಾಗೆ ಕಿರುಕುಳ ನೀಡುತ್ತಿದ್ದು ಹೆಚ್ಚಿನ ವರದಕ್ಷಿಣೆಯಾಗಿ 5 ಲಕ್ಷ ತಂದರೆ ಮಾತ್ರ ನಿನನ್ನು ಮನೆಯಲ್ಲಿ ಸೇರಿಸುವುದು ಎಂದು ಹೇಳಿ ಪತಿ ಕಾರ್ತಿಕ್ ಹೇಮಾಳನ್ನು ಮನೆಯಿಂದ ಹೊರಗೆ ಹಾಕಿದ್ದು ಹೇಮಾ ತನ್ನ ತವರು ಮನೆಗೆ ಹೋಗಿದ್ದರು ವಿಷಯವನ್ನು ತಿಳಿಸಿದ್ದರಿಂದ ಕುಪಿತಗೊಂಡ ಪತಿ ಮತ್ತು ಆತನ ಮನೆಯವರು ಒಂದು ಟಾಟಾ ಸುಮೋ ವಾಹನದಲ್ಲಿ ಹೇಮಾಳ ಮನೆಗೆ ಹೋಗಿ 5 ಲಕ್ಷ ವರದಕ್ಷಿಣೆ
ತಂದರೆ ಮನೆಗೆ ಬಾ ಇಲ್ಲದಿದ್ದರೆ ಇಲ್ಲೆ ಸಾಯಿ ಎಂದು ಹೇಳಿ ಹೇಮಾ ಅವರ ತಂದೆ ಮತ್ತು ತಾಯಿಯ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಮಾ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣ ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕುರಿ ತೊಳೆಯಲು ಹೋದ ಯುವಕ ನೀರುಪಾಲು
ಗುಡಿಬಂಡೆ: ಕುರಿಗಳನ್ನು ತೊಳೆಯಲು ಹೋದ ಯುವಕನೊಬ್ಬ ಆಕಸ್ಮಿಕವಾಗಿ ಕುಂಟೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂದರ್ಲಾಹಳ್ಳಿಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಮೃತ ಯುವಕನನ್ನು ಗ್ರಾಮದ ಗೋಪಿ ( 21 ವರ್ಷ) ಎಂದು ಗುರುತಿಸಲಾಗಿದೆ. ಗ್ರಾಮದ ಬಳಿಯಿರುವ ಕುಂಟೆಗೆ ಗೋಪಿ ಕುರಿಗಳನ್ನು ತೊಳೆಯಲು ಹೋಗಿದ್ದ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಕೆಸರಿನಲ್ಲಿ ಸಿಲುಕಿಕೊಂಡು ಕುಂಟೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೀವನದಲ್ಲಿ ಜಿಗುಪ್ಸೆವ್ಯಕ್ತಿ ನೇಣಿಗೆ ಶರಣು
ಕೋಲಾರ: ನಗರದ ಕಾರಂಜಿ ಕಟ್ಟೆಯಲ್ಲಿ ವಿವಾಹಿತರೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಶರಣಾಗಿರುವ ಘಟನೆ ಭಾನುವಾರ ನಡೆದಿದೆ.
ನಟರಾಜು(37) ಮೃತ ದುರ್ದೈವಿಯಾಗಿದ್ದಾರೆ. ಇಡ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ನಟರಾಜು ಕೌಟುಂಬಿಕ ಕಲಹದಿಂದ ಬೇಸತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೆಂಡತಿ ಲಕ್ಷ್ಮೀ ನಿನ್ನೆ ತನ್ನ ಅಕ್ಕನ ಮನೆಗೆ ಹೋಗಿದ್ದರು. ನಟರಾಜು ಮನೆಯಲ್ಲಿ ಒಬ್ಬರೇ ಇದ್ದು, ಭಾನುವಾರ ಬೆಳಿಗ್ಗೆ ಮನೆಗೆ ನೀರು ಶೇಖರಣೆ ಮಾಡಿರುವುದನ್ನು ಅಕ್ಕಪಕ್ಕದ ಜನರು ಗಮನಿಸಿದ್ದಾರೆ. ನೀರು ಹಿಡಿದು ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡ ನಟರಾಜು ಆತ್ಮಹತ್ಯೆ ಮಾಡಿಕೊಂಡಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಗಲ್ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.