ಜಯನಾಟ್ಯ ಕಲಾ ಅಕಾಡೆಮಿಗೆ ಸಹಕಾರ: ಶಾಸಕ ವರ್ತೂರ್
ಕ.ಪ್ರ.ವಾರ್ತೆ , ಕೋಲಾರ , ಸೆ. 29
ನಗರದ ಜಯ ನಾಟ್ಯ ಕಲಾ ಅಕಾಡೆಮಿಯ ವಿದ್ವಾನ್ ಕೋಲಾರ ರಮೇಶ್ ಶಿಷ್ಯರಾದ ಜೆ. ಚಿನ್ಮಯಶ್ರೀ ಮತ್ತು ಜೆ.ರೂಪಶ್ರೀ ಸಹೋದರಿಯರು ಟಿ. ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಂಗ ಪ್ರವೇಶ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಆರ್. ವರ್ತೂರು ಪ್ರಕಾಶ್ ಜಯನಾಟ್ಯ ಕಲಾ ಅಕಾಡೆಮಿಯು ಭರತನಾಟ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡುತ್ತಿದ್ದು, ಆಕಾಡೆಮಿಗೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡುವುದಾಗಿ ಪ್ರಕಟಿಸಿದರು. ಶ್ರೀಪಾಲುಕೆರೆಯಮ್ಮ ದೇವಾಲಯದ ಸ್ವಾಮೀಜಿಗಳಾದ ಶ್ರೀನಾಗರಾಜ ಸ್ವಾಮೀಜಿಯವರು ರಂಗಪ್ರವೇಶ ಮಾಡಿದ ಬಾಲಕಿಯರನ್ನು ಆಶೀರ್ವದಿಸಿದರು. ಜಯನಾಟ್ಯ ಕಲಾ ಅಕಾಡೆಮಿಯ ಸಂಸ್ಥಾಪಕ ಉಪಾಧ್ಯಕ್ಷ ಬಿಸಪ್ಪಗೌಡರು ರಂಗಪ್ರವೇಶ ಬಾಲಕಿಯರಿಗೆ ಗೆಜ್ಜೆಗಳನ್ನು ವಿತರಿಸಿದರು. ಪತ್ರಕರ್ತ ಕೆ.ಎಸ್. ಗಣೇಶ್ ಮಾತನಾಡಿ, ಬರಗಾಲದ ಕೋಲಾರ ಜಿಲ್ಲೆಯಲ್ಲಿ ಸಂಗೀತ, ಸಾಂಸ್ಕೃತಿಕ ಮತ್ತು ನಾಟ್ಯಮಯ ವಾತಾವರಣವನ್ನು ನಿರ್ಮಿಸುವಲ್ಲಿ ಜಯನಾಟ್ಯ ಕಲಾ ಅಕಾಡೆಮಿಯ ವಿದ್ವಾನ್ ರಮೇಶ್ ಅಪಾರವಾದ ಸಾಧನೆಯನ್ನು ಮಾಡುತ್ತಿದ್ದಾರೆ ಎಂದು ನುಡಿದರು. ವಕೀಲರ ಸಂಘದ ಅಧ್ಯಕ್ಷ ಟಿ.ಎಂ.ಶಿವಣ್ಣ ಮಾತನಾಡಿ, ಬಹಳ ಕಷ್ಟಕರವಾದ ಭರತನಾಟ್ಯ ಕಲೆಯನ್ನು ವಿದ್ವಾನ್ ರಮೇಶ್ ತಮ್ಮ ಶಿಷ್ಯೆಯರಿಗೆ ಸುಲಭವಾಗಿ ಕಲಿಸುವಮೂಲಕ ರಂಗಪ್ರವೇಶ ಮಾಡಿಸುತ್ತಿರುವುದಕ್ಕೆ ಈ ಸಂಸ್ಥೆಯ 27 ರಂಗಪ್ರವೇಶ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.
ಅಹಿಂದ ಜಿಲ್ಲಾಧ್ಯಕ್ಷ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ವಕೀಲ ಬಿ. ಸದಾಶಿವಾಚಾರ್ಯ, ಆರ್.ವಿ. ಶಾಲೆಯ ಕಾರ್ಯದರ್ಶಿ ಪಿ.ಆರ್. ಸೋಮಶೇಖರ್, ಕೋಲಾರ ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಶ್ರೀನಿವಾಸಪ್ಪ, ಮಾರಾಂಡಹಳ್ಳಿ ಮುಖ್ಯ ಶಿಕ್ಷಕ ನಾರಾಯಣಪ್ಪ, ನಂಜಾಮರಿ ಇದ್ದರು. ಕಲಾದೇಗುಲ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.