ಡಿಸಿಸಿ ಬ್ಯಾಂಕಿಗೆ ಚುನಾವಣೆ ಭಾಗ್ಯ
ಕ.ಪ್ರ.ವಾರ್ತೆ , ಕೋಲಾರ , ಸೆ. 29
ಕಳೆದ ಹತ್ತು ವರ್ಷಗಳ ಹಿಂದೆ ದಿವಾಳಿಯಿಂದಾಗಿ ರದ್ದುಪಡಿಸಲಾಗಿದ್ದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಕಡೆಗೂ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ.
2004ರಲ್ಲಿ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯನ್ನು ದುರಾಡಳಿತ, ಭ್ರಷ್ಟಾಚಾರ, ಆರ್ಥಿಕ ನಷ್ಟದ ಹಿನ್ನಲೆಯಲ್ಲಿ ಸೂಪರ್ ಸೀಡ್ ಮಾಡಲಾಗಿತ್ತು.
ನಷ್ಟದಲ್ಲಿದ್ದ ಬ್ಯಾಂಕಿನ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಹತ್ತು ಹಲವು ಕಠಿಣ ನಿರ್ಧಾರಗಳನ್ನು ಸಹ ಕೈಗೊಳ್ಳುವ ಮೂಲಕ ಸರ್ಕಾರ ಬ್ಯಾಂಕಿಗೆ ಪುನಶ್ಚೇತನ ನೀಡಲು ಪ್ರಯತ್ನ ನಡೆಸಿತ್ತು.
ಇದರ ಫಲದಿಂದಾಗಿ ಡಿಸಿಸಿ ಬ್ಯಾಂಕ್ ಚೇತರಿಕೆ ಕಂಡಿರುವುದರಿಂದ ಸರ್ಕಾರ ಮತ್ತೆ ಬ್ಯಾಂಕಿಗೆ ಆಡಳಿತ ಮಂಡಳಿ ರಚನೆ ಮಾಡಲು ತೀರ್ಮಾನಿಸಿ 2013ರ ನವೆಂಬರ್ ತಿಂಗಳ 15ರಂದು ಚುನಾವಣೆ ನಡೆಸಲು ಆಧಿಸೂಚನೆ ಹೊರಡಿಸಿದೆ.
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ಸೆ.27ರಂದು 1960ರ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಯಮದಡಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿ ರಚನೆಗಾಗಿ ಚುನಾವಣೆ ನಡೆಸಲು ಆಧಿಸೂಚನೆ ಪ್ರಕಟಿಸಿದ್ದಾರೆ.
ಐದು ವರ್ಷಗಳ ಅವಧಿಗಾಗಿ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನವೆಂಬರ್ 7ರಂದು ಕಡೆ ದಿನವಾಗಿದೆ. ನ.8 ರಂದು ನಾಮಪತ್ರಗಳ ಪರಿಶೀಲನೆ, ನ.9ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಕಡೆ ದಿನವಾಗಿದ್ದು ಅಗತ್ಯ ಬಿದ್ದಲ್ಲಿ ನ.15 ರಂದು ಚುನಾವಣೆ ನಡೆಸಲಾಗುವುದೆಂದು ಚುನಾವಣಾಧಿಕಾರಿ ಡಿ.ಕೆ. ರವಿ ತಿಳಿಸಿದ್ದಾರೆ.
2004ರಲ್ಲಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ರದ್ದಾದ ನಂತರ ಆರ್.ಬಿ.ಐ ಬ್ಯಾಂಕಿಗೆ ನೀಡಿದ್ದ ಮಾನ್ಯತೆ ರದ್ದು ಮಾಡಿತ್ತು. ಕಳೆದ 2012ರ ಏಪ್ರಿಲ್ 20 ರಂದು ಆರ್.ಬಿ.ಐ ರಾಜ್ಯ ಸರ್ಕಾರ ನೀಡಿದ ಭದ್ರತಾ ಠೇವಣಿ ಹಾಗೂ ಪ್ರಮಾಣ ಪತ್ರದ ಅನ್ವಯ ಮತ್ತೆ ಬ್ಯಾಂಕಿಗೆ ಪರವಾನಗಿ ನೀಡಿರುವುದರಿಂದ ಆಡಳಿತ ಮಂಡಳಿಗೆ ರಚನೆಗೆ ಸಹಕಾರಿ ಆಗಿದೆ.
ಡಿಸಿಸಿ ಬ್ಯಾಂಕಿಗೆ ಅರ್ಹ ಮತ್ತು ಅನರ್ಹರು ಸೇರಿ ಒಟ್ಟು 1004 ಮಂದಿ ಷೇರುದಾರರು ಇದ್ದಾರೆ. ಅರ್ಹ ಷೇರುದಾರರು ಮಾತ್ರ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ಅನರ್ಹರು ಸಹಕಾರಿ ನಿಯಮಗಳನ್ನು ಪೂರೈಕೆ ಮಾಡಿ, ಷೇರು ಹಣ ಪಾವತಿಸಿದಲ್ಲಿ ಅಂತಹವರು ಸಹ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ.
ಎ ಮತ್ತು ಬಿ ವರ್ಗಕ್ಕೆ ಸೇರಿದ ಷೇರುದಾರರು 10 ಸಾವಿರ ಹಾಗೂ ಡಿ.ಸಿ ಮತ್ತು ಇ ವರ್ಗದವರು 5 ಸಾವಿರ ರು. ಷೇರು ಪಾವತಿಸಿರಬೇಕು. ಒಟ್ಟು 15 ಜನರು ಆಡಳಿತ ಮಂಡಳಿಗೆ ಆಯ್ಕೆಯಾಗುವ ಅವಕಾಶವಿದ್ದು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ 11 ತಾಲೂಕಿನಿಂದ ತಲಾ ಒಬ್ಬರು, ಟಿಎಪಿಸಿಎಂಎಸಸ್ನಿಂದ 1, ಹಾಲು ಉತ್ಪಾದಕರ ಸಹಕಾರ ಸಂಘದಿಂದ 2 ಹಾಗೂ ಇತರೆ ಸಹಕಾರ ಸಂಘದಿಂದ ಒಬ್ಬರು ಆಯ್ಕೆಯಾಗಬೇಕಾಗಿದೆ.
ರಾಜ್ಯ ಸರ್ಕಾರ ದೈರ್ಯ ಮಾಡಿ ಡಿಸಿಸಿ ಬ್ಯಾಂಕಿಗೆ ಚುನಾವಣೆ ನಡೆಸಲು ನಿರ್ಧರಿಸಿದ್ದು ಯಾವುದೇ ತರಕಾರು, ಅಕ್ಷೇಪಗಳು ಎದುರಾಗದಿದ್ದಲ್ಲಿ ಡಿಸಿಸಿ ಬ್ಯಾಂಕಿಗೆ ಬಿರುಸಿನ ಚುನಾವಣೆ ನಡೆಯುವುದು ಖಚಿತ. ಡಿಸಿಸಿ ಬ್ಯಾಂಕ್ ಹಿಡಿತಕ್ಕೆ ಪಡೆಯಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರರು ತೀವ್ರ ಪೈಪೋಟಿ ನಡೆಸುವ ಸಾದ್ಯತೆಗಳಿವೆ.