ಬಿಲ್ ನೀಡದವರ ವಿರುದ್ಧ ಕ್ರಮಕ್ಕೆ ಒತ್ತಾಯ
ಕೋಲಾರ: ಜಿಲ್ಲೆಯ ಗಡಿಭಾಗದ ಹಳ್ಳಿಗಳಲ್ಲಿ ರಸಗೊಬ್ಬರವನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವ ಹಾಗೂ ನಕಲಿ ಬಯೋ ಔಷಧಿಗಳನ್ನು ನೀಡಿ ರೈತರನ್ನು ವಂಚಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಘದ ಮುಖಂಡರು ಒತ್ತಾಯಿಸಿದ್ದಾರೆ.
ಈ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ರೈತ ಸಂಘದ ಮುಖಂಡರು, ರೈತರಿಗೆ ಬಿಲ್ ನೀಡದ ಗೊಬ್ಬರ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮದ ಜೊತೆಗೆ ಅಂಗಡಿ ಪರವಾನಗಿ ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ.
ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ, ಕಾರ್ಯಾಧ್ಯಕ್ಷ ರಂಜಿತ್‌ಕುಮಾರ್, ಹಸಿರು ಸೇನೆ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಹೂಹಳ್ಳಿ ನಾಗರಾಜ್, ತೆರನಹಳ್ಳಿ ವೆಂಕಟೇಶಗೌಡ, ಕ್ಯಾಸಂಬಳ್ಳಿ ಪ್ರತಾಪ್, ಹೆಬ್ಬಣಿ ಆನಂದರೆಡ್ಡಿ, ಐತಂಡಹಳ್ಳಿ ಉದಯ್, ವಡ್ಡಹಳ್ಳಿ ಮಂಜುನಾಥ್, ಬೇತಮಮಗಲ ಮಂಜುನಾಥ್, ಫಾಪೇನಹಳ್ಳಿ ಶಿವಣ್ಣ, ಖಾರಿ ವಿಶ್ವನಾಥ್, ಕೂಳೂರು ಗಣೇಶ್ ನಿಯೋಗದಲ್ಲಿದ್ದರು.
ಜಿಲ್ಲೆಯ ಗಡಿ ಗ್ರಾಮಗಳಾದ ನಂಗಲಿ, ರಾಯಲ್‌ಪಾಡ್, ಗೌನಿಪಲ್ಲಿ, ಕ್ಯಾಸಂಬಳ್ಳಿ, ಸುಂದರಪಾಳ್ಯ, ಕಾಮಸಮುದ್ರಂ, ತಾಯಲೂರು ಈ ಭಾಗಗಳಲ್ಲಿ ರಸಗೊಬ್ಬರ ಅಂಗಡಿ ಮಾಲೀಕರು ದುಬಾರಿ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ, ರೈತರು ಕೇಳಿದರೂ ಬಿಲ್ ನೀಡುತ್ತಿಲ್ಲವೆಂದು ದೂರಿದ್ದಾರೆ.