ಕುರುಬರ ಸಂಘಕ್ಕೆ ಸಿದ್ದು ಬಣದ ಮೂವರ ಆಯ್ಕೆ
ಕೋಲಾರ: ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಜಿಲ್ಲೆಯಿಂದ ಮೂವರು ನಿರ್ದೇಶಕರ ಆಯ್ಕೆಗಾಗಿ ಭಾನುವಾರ ನಗರದ ಕನಕಮಂದಿರದಲ್ಲಿ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸಿದೆ. ಈ ಚುನಾವಣೆಯಲ್ಲಿ ಮಾಲೂರಿನ ಎಂ.ವಿ.ಸೋಮಶೇಖರ್ (942), ಕೋಲಾರದ ಕೆ.ಟಿ.ಅಶೋಕ್ ಕುಮಾರ್ (609) ಹಾಗೂ ಮಾಲೂರಿನ ಪುಷ್ಪಾ(742) ಜಯಶಾಲಿಗಳಾಗಿದ್ದಾರೆ. ಸಾರ್ವತ್ರಿಕ ಚುನಾವಣೆಗಳನ್ನು ಮೀರುವ ರೀತಿಯಲ್ಲಿ ಕುರುಬರ ಸಂಘದ ಚುನಾವಣೆ ನಡೆದಿತ್ತು. ಶಾಸಕ ವರ್ತೂರ್ ಪ್ರಕಾಶ್ ಬಣದ ಅಭ್ಯರ್ಥಿಗಳು ತೀವ್ರ ಪೈಪೋಟಿ ನಡೆಸಿದ್ದರಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ವಿಶ್ವಾಸದಿಂದ ಮತದಾರರು ಶಾಸಕರ ಕಡೆ ಅಭ್ಯರ್ಥಿಗಳಿಗೆ ಕೈಕೊಟ್ಟಿದ್ದಾರೆ. ಫಲಿತಾಂಶ ಪ್ರಕಟಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಲೂರಿನ ಆಂಜನಿ ಎಂ.ವಿ.ಸೋಮಶೇಖರ್, ಸಮಾಜಕ್ಕೆ ಹಾಗೂ ಹಿಂದುಳಿದ ವರ್ಗಗಳನ್ನು ಮೇಲ್ಪಂಕ್ತಿಗೆ ತರಲು ಶ್ರಮಿಸುವುದಾಗಿ ತಿಳಿಸಿದ್ದಾರೆ. ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸುವುದು, ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಸೇವೆ ಸಲ್ಲಿಸುವುದಕ್ಕೆ ಮತದಾರರು ನೀಡಿರುವ ಅಧಿಕಾರವನ್ನು ಸದುಪಯೋಗಪಡಿಸಿಕೊಳ್ಳುವುದಾಗಿ ಹೇಳಿದ್ದಾರೆ. ಮುಳಬಾಗಿಲಿನ ವೆಂಕಟೇಶ್ಗೌಡ ,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ಬಾಬು, ಪೊಲೀಸ್ ನಾರಾಯಣಸ್ವಾಮಿ, ಕುರುಬರಪೇಟೆ ಸುಬ್ಬಣ್ಣ ಮತ್ತಿತರರು ಉಪಸ್ಥಿತರಿದ್ದರು.
ಅಕ್ರಮವಾಗಿ ಮರಳು ಫಿಲ್ಟರ್: ತಹಸೀಲ್ದಾರ್ ದಾಳಿ- ಯಂತ್ರಗಳ ನಾಶ
ಕೋಲಾರ: ಕೆರೆಗಳಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ನಡೆಯುವುದು ಹಾಗೂ ಮರಳು ಸಾಗಾಣಿಕೆ ತಡೆಯದಿದ್ದರೆ ಅಧಿಕಾರಿಗಳನ್ನು ಹೊಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಕೋಲಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೀಡಿದ ಸೂಚನೆಯಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಕೆರೆಗಳಲ್ಲಿ ಮರಳು ಫಿಲ್ಟರ್ ದಂಧೆ ತಡೆಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ತಾಲೂಕು ತಹಸೀಲ್ದಾರ್ ನಾಗರಾಜ್ ಅವರ ನೇತೃತ್ವದಲ್ಲಿ ಸೋಮವಾರ ತಾಲೂಕಿನ ನರಸಾಪುರ ಹೋಬಳಿಗೆ ಸೇರಿದ ಉದ್ದಪನಹಳ್ಳಿಯ ಕೆರೆಗೆ ಹಠಾತ್ ದಾಳಿ ನಡೆಸಿ ಮರಳು ಫಿಲ್ಟರ್ಗಾಗಿ ನಿರ್ಮಿಸಿದ್ದ ಕಟ್ಟೆಯನ್ನು ನಾಶಪಡಿಸಿದ್ದಾರೆ. ಉದ್ದಪನಹಳ್ಳಿ ಕೆರೆಯಲ್ಲಿ ಸುಮಾರು ವರ್ಷಗಳಿಂದ ಅಕ್ರಮ ಮರಳುದಂಧೆ ನಡೆಯುತ್ತಿತ್ತು. ಪ್ರತಿ ದಿನ 20ರಿಂದ 30 ಲಾರಿಗಳ ಮರಳು ಫಿಲ್ಟರ್ ಮಾಡಿ ಕೆರೆಯನ್ನು ನಾಶ ಮಾಡುತ್ತಿದ್ದ ದೂರಿನ ಮೇರೆಗೆ ತಹಸೀಲ್ದಾರ್ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಜೆಸಿಬಿ ಮೂಲಕ ಮರಳು ಫಿಲ್ಟರ್ ಮಾಡಲು ನಿರ್ಮಿಸಿದ್ದ ಕಟ್ಟೆಯನ್ನು ಹಾಗೂ ಮರಳು ಚೀಲಗಳನ್ನು ನಾಶ ಪಡಿಸಿ ಅಕ್ರಮ ದಂಧೆ ನಡೆಸುತ್ತಿದ್ದವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ಜಿಲ್ಲಾ ಮಟ್ಟದ ಕ್ರೀಡಾಕೂಟ
ಕೋಲಾರ: ಕ್ರೀಡಾ ಚಟುವಟಿಕೆಗಳಿಂದ ಉತ್ತಮ ಆರೋಗ್ಯ ಮತ್ತು ಏಕಾಗ್ರತೆ ಸಾಧಿಸಲು ಆತ್ಮವಿಶ್ವಾಸ ಬೆಳೆಯುತ್ತದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್ ತಿಳಿಸಿದರು.ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಸೋಮವಾರ ಆರಂಭಗೊಂಡ ಜಿಲ್ಲಾ ಮಟ್ಟದ ಪದವಿ ಪೂರ್ವಕಾಲೇಜುಗಳು ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ದೈಹಿಕ ಆರೋಗ್ಯ ಸಾಧನೆಗೂ ಸಹಕಾರಿ ಎಂದ ಅವರು, ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಮತ್ತೆ ತನ್ನ ವೈಭವ ಸ್ಥಾಪಿಸಲು ಕ್ರೀಡಾಪಟುಗಳು ಪರಿಶ್ರಮಿಸಬೇಕು ಎಂದರು.ಕ್ರೀಡಾಕೂಟ ಉದ್ಘಾಟಿಸಿದ ಜಿಲ್ಲಾ ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಅಧ್ಯಕ್ಷ ವರದರಾಜ್, ಕ್ರೀಡೆಗಳಲ್ಲಿ ಸೋಲು, ಗೆಲುವು ಸಾಮಾನ್ಯವಾಗಿದ್ದು, ಇದನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು.ಕ್ರೀಡಾಪಟುಗಳು ಕ್ರೀಡಾ ನಿಯಮಗಳನ್ನು ಪಾಲಿಸಬೇಕು ಎಂದ ಅವರು, ಪ್ರತಿಷ್ಠೆ ಬದಿಗೊತ್ತಿ ಸ್ಪರ್ಧಾತ್ಮಕವಾಗಿ ಭಾಗವಹಿಸಿ ಗೆಲುವು ಸಾಧಿಸಿ ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿ ತರಬೇಕು ಎಂದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ವೆಂಕಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ್ ಲಕಾಂತ್ ಮಠ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಇ.ಶ್ರೀನಿವಾಸಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ರತ್ನಪ್ಪ, ಪದವಿ ಪೂರ್ವ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ನಾಗನಂದ ಕೆಂಪರಾಜ್, ತಾಲೂಕು ದೈಹಿಕ ಪರಿವೀಕ್ಷಕ ಎಂ. ಮಂಜುನಾಥ್, ಸರ್ಕಾರಿ ನೂತನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಾಯಿತ್ರಿ ರೆಡ್ಡಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಚೌಡಪ್ಪ, ಮುರಳಿಮೋಹನ್, ದೈಹಿಕ ಶಿಕ್ಷಕ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಕನ್ನಡ ಉಪನ್ಯಾಸಕ ಜೆ.ಜಿ. ನಾಗರಾಜ್ ಸ್ವಾಗತಿಸಿ, ನಾರಾಯಣಪ್ಪ ವಂದಿಸಿದರು.
ವಿದ್ಯಾರ್ಥಿ ವೇತನ ವಿತರಣೆ
ಚಿಂತಾಮಣಿ: ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದ ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು. ಸರ್ಕಾರ ನೀಡುವ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ತಾಪಂ ಉಪಾಧ್ಯಕ್ಷ ಸುಲ್ತಾನ್ ಶರೀಪ್ ತಿಳಿಸಿದರು.ಪಟ್ಟಣದ ಹೊರ ವಲಯದ ಚಿನ್ನಸಂದ್ರ ಸರ್ಕಾರಿ ಹಿರಿಯ ಉರ್ದು ಶಾಲೆಯ ಮಕ್ಕಳಿಗೆ 2012-13 ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ್ದ ವಿದ್ಯಾರ್ಥಿ ವೇತನ ವಿತರಣೆ ಮಾಡಿ ಮಾತನಾಡಿ, ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಣಾಮವೇ ಸಮಾಜದಲ್ಲಿ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿಯಿಂದ ದೂರ ಉಳಿದಿದೆ ಎಂದರು. ಶಿಕ್ಷಕಿಯರಾದ ಮಹಬೂಬ್ ಬಿ, ಹಸೀನಾಬೇಗಂ, ಸಲೀಂಉನ್ನೀಸಾ, ಮುಬಾರಕ್ ಶಮೀಮ್, ಆರಿಫ್ಉಲ್ಲಾಖಾನ್, ಜಾವಿದ್ ಪಾಷ, ನವಾಬ್, ಅಬ್ದುಲ್ ರಜಾಕ್, ಕೃಷ್ಣ, ಅಪ್ರೋಜ್ ಖಾನ್, ಕೌಸರ್ ತಾಜ್, ಮೊಹಸೀನ ಇದ್ದರು.
ಜಮಾಬಂದಿ
ಕಾರ್ಯಕ್ರಮ
ಟೇಕಲ್: ಗ್ರಾಪಂನ ಎಲ್ಲಾ ವಿಧವಾದ ಯೋಜನೆಗಳಿಂ ಪ್ರಸಕ್ತ ಸಾಲಿನಲ್ಲಿ ರು. 47 ಲಕ್ಷ ಲೆಕ್ಕ ಪರಿಶೋಧನೆಯಲ್ಲಿ ಜಮಾ ಆಗಿದೆ ಎಂದು ಕೆ.ಜಿ.ಹಳ್ಳಿ ಗ್ರಾಪಂನಲ್ಲಿ ನಡೆದ ಜಮಾಬಂದಿ ಕಾರ್ಯಕ್ರಮದಲ್ಲಿ ಜಮಾಬಂದಿ ನೋಡಲ್ ಅಧಿಕಾರಿ ವೆಂಕಟಶಿವಾರೆಡ್ಡಿ ತಿಳಿಸಿದ್ದಾರೆ. ಕೆ.ಜಿ.ಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಬಗ್ಗೆ ಎಲ್ಲಾ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಉಪಾಧ್ಯಕ್ಷೆ ಅಲಮೇಲುಮಂಗಮ್ಮ, ಹಾಲಿ ಸದಸ್ಯರು, ಮಾಜಿ ಅಧ್ಯಕ್ಷರಾದ ಮಂಜುನಾಥ್, ಮುನಿಯಪ್ಪ, ಸಿ. ವೆಂಕಟೇಶ್ ಮಂಜುನಾಥ್ ಹಾಗೂ ಸೇರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಪರಿಚಿತ ವಾಹನ ಡಿಕ್ಕಿ; ವ್ಯಕ್ತಿ ಸಾವು
ಚಿಂತಾಮಣಿ: ಅಪರಿಚಿತ ವಾಹನವೊಂದು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಮಾಚನಹಳ್ಳಿ ಬಳಿ ಬಾನುವಾರ ರಾತ್ರಿ ನಡೆದಿದೆ. ತಾಲೂಕಿನ ಚಿಂತಾಮಣಿ-ಬೆಂಗಳೂರು ಮುಖ್ಯ ರಸ್ತೆಯ ಪೆರಮಾಚನಹಳ್ಳಿ ಬಳಿ ಭಾನುವಾರ ರಾತ್ರಿ ರಸ್ತೆಬದಿಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ಸುಮಾರು 40 ವರ್ಷ ವಯಸ್ಸುಳ್ಳ ಅಪರಿಚಿತ ವ್ಯಕ್ತಿಗೆ ಅಪರಿಚಿತ ವಾಹನ ಅತಿ ವೇಗ ಮತ್ತು ಅಜಾಗ್ರತೆಯಿಂದ ಡಿಕ್ಕಿ ಹೊಡೆದು ಪರಾರಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶವವನ್ನು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯ ಶವಗಾರದಲ್ಲಿ ಶವ ಪರೀಕ್ಷೆಗಾಗಿ ಇಡಲಾಗಿದೆ.