ಕೆಸ್ಸಾರ್ಟಿಸಿ ಬಸ್ ಪಲ್ಟಿ; ಪ್ರಯಾಣಿಕರಿಗೆ ಗಾಯ
ಚಿಂತಾಮಣಿ: ಸಾರಿಗೆ ಸಂಸ್ಥೆಯ ಬಸ್ಸೊಂದು ಪಲ್ಟಿ ಹೊಡೆದ ಪರಿಣಾಮ ಸುಮಾರು 20 ಪ್ರಯಾಣಿಕರು ತೀವ್ರ ಗಾಯಗೊಂಡು ಈ ಪೈಕಿ ಹಲವರ ಪರಿಸ್ಥಿತಿ ಗಂಭೀರವಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲಾಪುರ ಗ್ರಾಮದ ಬಳಿ ಸೋಮವಾರ ಸಂಜೆ ನಡೆದಿದೆ.
ತಾಲೂಕಿನ ಮೈಲಾಪುರ-ಕೆಂಪದೇನಹಳ್ಳಿ ಮಾರ್ಗವಾಗಿ ಪಟ್ಟಣದಿಂದ ಬೊಮ್ಮೇಕಲ್ಲುಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ರಸ್ತೆ ಬದಿಯಲ್ಲಿ ಆಯಾ ತಪ್ಪಿ ಬಿದ್ದಿದೆ.
ರಸ್ತೆ ಒತ್ತುವರಿ ಕಾರಣ: ಮೈಲಾಪುರ-ಕೆಂಪದೇನಹಳ್ಳಿ ಆಸುಪಾಸಿನ ಹಲವು ರೈತರು ರಸ್ತೆ ಜಮೀನು ಒತ್ತುವರಿ ಮಾಡಿಕೊಂಡು ರಸ್ತೆ ಮಟ್ಟದಿಂದ 3 ಅಡಿ ಭೂಮಿಯನ್ನು ಅಗೆದಿರುವುದೇ ಬಸ್ಸು ಪಲ್ಟಿ ಹೊಡೆಯಲು ಕಾರಣವೆಂದು ಈ ಭಾಗದ ಗ್ರಾಮಸ್ಥರು ಆರೋಪಿಸಿದ್ದಾರೆ.
ಸಂಜೆ ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಬಸ್ಸು ಪಲ್ಟಿ ಹೊಡೆದು ತೀವ್ರ ಗಾಯಗಳಾಗಿ ಬಸ್ಸಿನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಲು ಮುಂದಾಗಿ ಮಾನವೀಯತೆ ಮೆರೆದರು. ಕೂಡಲೇ 108 ಆಂಬುಲೆನ್ಸ್ ವಾಹನಕ್ಕೆ ಫೋನ್ ಮಾಡಿ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಗೆ ಸಾಗಿಸಿದರು. ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ ಸ್ಥಳ ಪರಿಶೀಲಿಸಿ ನಂತರ ಬಸ್ಸನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.